ಒಂದೇ ದಿನಕ್ಕೆ ಮೂರು ಪಟ್ಟಾಯ್ತು ‘ಸು ಫ್ರಮ್ ಸೋ’ ಶೋ ಸಂಖ್ಯೆ; ಹೊಸ ಸ್ಟ್ರೆಟಜಿ ಮಾಡಿ ಗೆದ್ದ ರಾಜ್ ಬಿ ಶೆಟ್ಟಿ
‘ಸು ಫ್ರಮ್ ಸೋ’ ಚಿತ್ರದ ನಿರ್ಮಾಪಕ ರಾಜ್ ಬಿ ಶೆಟ್ಟಿ ಅವರು ಸಾಂಪ್ರದಾಯಿಕ ಪ್ರಚಾರದಿಂದ ದೂರ ಉಳಿದಿದ್ದಾರೆ. ಚಿತ್ರವನ್ನು ಮುಂಚಿತವಾಗಿ ಪ್ರೇಕ್ಷಕರಿಗೆ ತೋರಿಸುವ ಮೂಲಕ ಅಭೂತಪೂರ್ವ ಯಶಸ್ಸು ಕಂಡಿದ್ದಾರೆ. ಚಿತ್ರದ ಬಾಯಿ ಮಾತಿನ ಪ್ರಚಾರವೇ ಟಿಕೆಟ್ ಮಾರಾಟ ಹೆಚ್ಚಳಕ್ಕೆ ಕಾರಣ. ಪವನ್ ಕಲ್ಯಾಣ್ ಅವರ ‘ಹರಿ ಹರ ವೀರ ಮಲ್ಲು’ ಚಿತ್ರದ ಜೊತೆ ಬಿಡುಗಡೆಯಾದರೂ, ‘ಸು ಫ್ರಮ್ ಸೋ’ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ.

ಸಾಮಾನ್ಯವಾಗಿ ಸಿನಿಮಾ ರಿಲೀಸ್ ಬಂತು ಎಂದರೆ ಚಿತ್ರ ತಂಡದವರು ಸಂದರ್ಶನ ನೀಡಿತ್ತಾರೆ. ಸಿನಿಮಾ ಪೋಸ್ಟರ್ಗಳನ್ನು ರಸ್ತೆಗಳ ಬದಿಯಲ್ಲಿರೋ ಗೋಡೆಗೆ ಅಂಟಿಸುವ ಕೆಲಸ ಮಾಡುತ್ತಾರೆ. ಸಿನಿಮಾ ಜನರ ತಲುಪಲು ಏನೆಲ್ಲ ಬೇಕೋ ಅದೆಲ್ಲ ಪ್ರಯತ್ನವನ್ನು ಮಾಡುತ್ತಾರೆ. ಇದು ಮೊದಲಿನಿಂದಲೂ ನಡೆದುಕೊಂಡ ಪದ್ಧತಿ. ಹಾಗಂತ ಇದು ತಪ್ಪು ಕೂಡ ಅಲ್ಲ. ‘ಸು ಫ್ರಮ್ ಸೋ’ ನಿರ್ಮಾಪಕ ರಾಜ್ ಬಿ ಶೆಟ್ಟಿ ಒಂದು ಹೊಸ ಪ್ರಯತ್ನ ಮಾಡಿ ಗೆದ್ದಿದ್ದಾರೆ. ‘ಕನ್ನಡ ಸಿನಿಮಾ ನೋಡಲು ಪ್ರೇಕ್ಷಕರೇ ಬರುತ್ತಿಲ್ಲ’ ಎಂಬ ಮಾತಿನಿಂದ ‘ಚಿತ್ರಕ್ಕೆ ಟಿಕೇಟ್ಗಳೇ ಸಿಗುತ್ತಿಲ್ಲ, ಎಲ್ಲಾ ಹೌಸ್ ಫುಲ್ ಆಗಿದೆ’ ಎಂಬ ಮಾತು ಬರುವಂತೆ ಮಾಡಿದ್ದಾರೆ. ‘ಸು ಫ್ರಮ್ ಸೋ’ ಸಿನಿಮಾ (Su From So Movie) ಗೆಲುವಿನ ಬಳಿಕ ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.
ಶೋ ತ್ರಿಬಲ್ ಆಯ್ತು..
ಕನ್ನಡ ಸಿನಿಮಾಗಳಿಗೆ ಶೋ ಸಿಗಲ್ಲ, ಪರ ಭಾಷೆಯವರು ಬಂದು ನಮ್ಮ ಶೋ ಕಸಿದುಕೊಳ್ಳುತ್ತಾರೆ ಎಂಬಿತ್ಯಾದಿ ಆರೋಪಗಳಿವೆ. ಆದರೆ, ‘ಸು ಫ್ರಮ್ ಸೋ’ ವಿಚಾರದಲ್ಲಿ ಅದು ಉಲ್ಟಾ ಆಗಿದೆ. ‘ದೊಡ್ಡ ಸಿನಿಮಾಗಳ ಮಧ್ಯೆ ಬರ್ತಿದೀವಿ ಎಂದಾಗ ಅನೇಕರು ಬೇಡ ಎಂದು ಸಲಹೆ ನೀಡಿದರು. ಆದರೆ, ನಾನು ಒಂದು ಸಂದೇಶ ಕೊಡಬೇಕಿತ್ತು. ಹೀಗಾಗಿ, ರಿಸ್ಕ್ ತೆಗೆದುಕೊಂಡು ಜುಲೈ 25ಕ್ಕೆ ಬಂದೆ. ಸಂದರ್ಶನ ಕೊಡಲು ಟಿವಿ ಮುಂದೆ ಕೂರಲ್ಲ, ಪೋಸ್ಟರ್ ಅಂಟಿಸಲ್ಲ ಎಂದು ಮೊದಲೇ ನಿರ್ಧರಿಸಿದ್ದೆ. ಬೇರೆ ರೀತಿ ಪ್ರಮೋಟ್ ಮಾಡಬೇಕು ಎಂದು ಅಂದುಕೊಂಡಿದ್ದೆ. ಇದು ವರ್ಕ್ ಆಗುತ್ತದೆ ಎನ್ನುವ ಯಾವುದೇ ಗ್ಯಾರಂಟಿ ಇರಲಿಲ್ಲ. ಏಕೆಂದರೆ ಹಿಂದೆ ಯಾರೂ ಮಾಡಿರಲಿಲ್ಲ. ಮೊದಲ ದಿನ ಬೆಂಗಳೂರಿನಲ್ಲಿ 78 ಶೋ ಕೊಡಲಾಗಿತ್ತು. ಎಡನೇ ದಿನಕ್ಕೆ ಅದು 210 ಶೋಗಳಾದವು’ ಎಂದು ಮಾಹಿತಿ ನೀಡಿದ್ದಾರೆ ರಾಜ್. ಈ ಮೂಲಕ ಒಂದೇ ದಿನಕ್ಕೆ ಶೋ ಮೂರು ಪಟ್ಟಾಗಿದೆ.
ಪ್ರಚಾರಕ್ಕೆ ಹೊಸ ತಂತ್ರ
ರಾಜ್ ಬಿ ಶೆಟ್ಟಿ ಅವರು ಈ ಬಾರಿ ಮಾಡಿದ ಹೊಸ ತಂತ್ರ ಎಂದರೆ ಸಿನಿಮಾ ರಿಲೀಸ್ಗೆ ನಾಲ್ಕೈದು ದಿನ ಇರುವಾಗಲೇ ಜನರಿಗೆ ಸಿನಿಮಾ ತೋರಿಸಿದ್ದಾರೆ. ಸಿನಿಮಾ ನೋಡುವಾಗ ಜನರ ಭಾವನೆಯನ್ನು ಕ್ಯಾಪ್ಚರ್ ಮಾಡಿ ಅದನ್ನು ಜನರ ಮುಂದಿಡುವ ಕೆಲಸ ಮಾಡಿದ್ದಾರೆ. ಈ ತಂತ್ರ ಕೆಲಸ ಮಾಡಿದೆ. ಸಿನಿಮಾಗೆ ಒಳ್ಳೆಯ ರೀತಿಯಲ್ಲಿ ಬಾಯ್ಮಾತಿನ ಪ್ರಚಾರ ನೀಡಿದ್ದಾರೆ.
73 ಸಾವಿರ ಟಿಕೆಟ್
‘ನಾನು ಟೋಬಿ ಸಿನಿಮಾಗೆ ತುಂಬಾನೇ ಪ್ರಚಾರ ಮಾಡಿದ್ದೆ. ಅದಕ್ಕೆ ಮೊದಲ ದಿನ 43 ಸಾವಿರ ಟಿಕೆಟ್ ಮಾರಾಟ ಆಗಿತ್ತು. ಸು ಫ್ರಮ್ ಸೋಗೆ ಮೊದಲ ದಿನ 73 ಸಾವಿರ ಟಿಕೆಟ್ ಮಾರಾಟ ಆಗಿದೆ. ಜನರಿಂದ ಇನ್ನೂ ಹೆಚ್ಚು ಏನನ್ನು ಕೇಳಲು ಸಾಧ್ಯ’ ಎಂದು ಸಂತಸದ ಧ್ವನಿಯಲ್ಲಿ ರಾಜ್ ಮಾತನಾಡಿದರು.
ಇದನ್ನೂ ಓದಿ: ಬುಕಿಂಗ್ನಲ್ಲಿ ಪವನ್ ಕಲ್ಯಾಣ್ ಚಿತ್ರವನ್ನೂ ಬೀಟ್ ಮಾಡಿದ ‘ಸು ಫ್ರಮ್ ಸೋ’
ಪವನ್ ಕಲ್ಯಾಣ್ ಅವರ ‘ಹರಿ ಹರ ವೀರ ಮಲ್ಲು’ ಸಿನಿಮಾ ಕೂಡ ಈ ವಾರ ರಿಲೀಸ್ ಆಗಿದೆ. ಅನೇಕ ಕಡೆಗಳಲ್ಲಿ ಪವನ್ ಸಿನಿಮಾ ತೆಗೆದು ‘ಸು ಫ್ರಮ್ ಸೋ’ ಶೋ ಹಾಕಲಾಗಿದೆ. ‘ಅನೇಕ ಕಡೆಗಳಲ್ಲಿ ಮೊದಲ ದಿನ ನಮಗೆ ಒಂದು ಶೋ ಮಾತ್ರ ಕೊಡಲಾಗಿತ್ತು. ಆ ಬಳಿಕ ಅದು ನೇರವಾಗಿ ನಾಲ್ಕಕ್ಕೆ ಏರಿಕೆ ಆಗಿದೆ. ಶೋ ನೀಡಿ ಎಂದು ನಾವು ಕೇಳುತ್ತಿಲ್ಲ. ಜನರ ಬೇಡಿಕೆಗೆ ತಕ್ಕಂತೆ ಅವರೇ ಶೋ ಸಂಖ್ಯೆ ಹೆಚ್ಚಿಸುತ್ತಿದ್ದಾರೆ’ ಎಂದಿದ್ದಾರೆ ರಾಜ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








