Su from So Review: ನಗುವಿನ ಅಲೆಯಲ್ಲಿ ತೇಲಿಸೋ ಸುಲೋಚನಾ; ಪ್ರೇಕ್ಷಕನಿಗೆ ಮನರಂಜನೆಯ ರಸದೌತಣ

- Time - 137 Minutes
- Released - July 25, 2025
- Language - Kannada
- Genre - Comedy,Horror
ಅದೊಂದು ಸುಂದರ ಊರು. ಆ ಊರಲ್ಲಿ ಮದುವೆ ಆಗಲಿ, ತಿಥಿ ಆಗಲಿ ಖುಷಿಯಿಂದ ಜನ ಸೇರುತ್ತಾರೆ. ಅಲ್ಲಿನ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಹೀಗೆ ಸೇರುವ ಜನರಿಗೆ ಮದ್ಯ ಹಾಗೂ ರವಿ ಅಣ್ಣ (ಶನೀಲ್ ಗೌತಮ್) ಬೇಕೆ ಬೇಕು. ಏನೇ ಶುಭ ಕಾರ್ಯ ಆಗಲಿ, ಏನೇ ಸಮಸ್ಯೆ ಬರಲಿ ಅಲ್ಲಿ ರವಿ ಅಣ್ಣ ಇರುತ್ತಾನೆ. ಅವನ ಬಳಿ ಸಮಸ್ಯೆಗೆ ಪರಿಹಾರವೂ ಇರುತ್ತದೆ. ರವಿ ಅಣ್ಣ ಎಂಥ ಪರಾಕ್ರಮಿ ಎಂದರೆ ಆತನಿಗೆ ಹೊಡೆದು ಅಭ್ಯಾಸವೇ ಹೊರತು, ಹೊಡೆತ ತಿಂದಿದ್ದು ಇತಿಹಾಸದಲ್ಲೇ ಇಲ್ಲ. ಎಲ್ಲವೂ ಶಾಂತವಾಗಿದ್ದ ಆ ಊರಿನಲ್ಲಿ ರವಿ ಅಣ್ಣ ಕೂಡ ಬಗೆಹರಿಸಲಾಗದ ಸಮಸ್ಯೆ ಒಂದು ಬರುತ್ತದೆ. ಸೋಮೇಶ್ವರದ ಸುಲೋಚನ ಆ ಊರಿಗೆ ಬರುತ್ತಾಳೆ. ಅದೂ ದೆವ್ವವಾಗಿ. ಆಕೆಗೆ ಅಲ್ಲೇನು ಕೆಲಸ? ಆಕೆ ಬರಲು ಅಸಲಿ ಕಾರಣ ಏನು? ಆಕೆ ಮರಳಿ ಹೋಗೋದು ಹೇಗೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.
ಕನ್ನಡದಲ್ಲಿ ಅದೆಷ್ಟೋ ಹಾಸ್ಯ ಚಿತ್ರಗಳು ಬಂದು ಹೋಗಿವೆ. ಆರಂಭದಲ್ಲಿ ನಗಿಸೋ ಸಿನಿಮಾಗಳು ನಂತರ ದಿಕ್ಕು ತಪ್ಪಿದ ಉದಾಹರಣೆ ಸಾಕಷ್ಟಿದೆ. ಆದರೆ, ನಿರ್ದೇಶಕ ಜೆಪಿ ತುಮಿನಾಡ ಕಥೆ ಎಲ್ಲಿಯೂ ದಾರಿ ತಪ್ಪಲು ಕೊಡಬಾರದು ಎಂದು ಶಪಥ ಮಾಡಿ ಶ್ರಮ ಹಾಕಿದ್ದು ಎದ್ದು ಕಾಣುತ್ತದೆ. ಅವರು ಉದ್ದೇಶವನ್ನು ಸ್ಪಷ್ಟವಾಗಿ ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಪ್ರತಿ ಕ್ಷಣವೂ ತೆರೆಮೇಲೆ ಹಾಸ್ಯದ ಹೊಳೆ ಹರಿಸಿದ್ದಾರೆ. ಇಲ್ಲಿ ಮೊದಲ ಬ್ಯಾಟ್ಸಮನ್ ಶತಕ ಹೊಡೆದು, ಎರಡನೇ ಬ್ಯಾಟ್ಸಮನ್ ಬೇಗ ಔಟಾದ ಎಂಬುದೆಲ್ಲ ಇಲ್ಲ. ಇಲ್ಲಿ ಎಲ್ಲರದ್ದೂ ಸೆಂಚುರಿಯೇ.
ಹಾಸ್ಯದ ಅಲೆಯಲ್ಲಿ ತೇಲಿಸುತ್ತಾ ತೇಲಿಸುತ್ತಾ ಪ್ರೇಕ್ಷಕರನ್ನು ಭಾವನೆಗಳ ತೀರಕ್ಕೆ ಕರೆತರುತ್ತಾರೆ ನಿರ್ದೇಶಕರು. ಈ ಬದಲಾವಣೆ ಗೊತ್ತಾಗುವುದರೊಳಗೆ ಕಣ್ಣು ಒದ್ದೆ ಆಗುತ್ತದೆ. ಮರುಕ್ಷಣವೇ ಕಣ್ಣೀರನ್ನು ಹಿಂದಕ್ಕೆ ಹಾಕಿ ಮತ್ತೆ ನಗು ಉಕ್ಕುತ್ತದೆ. ಎರಡು ಗಂಟೆ ಹದಿನೇಳು ನಿಮಿಷ ಇರುವ ಈ ಚಿತ್ರದುದ್ದಕ್ಕೂ ಎಲ್ಲಿಯೂ ‘ಈ ದೃಶ್ಯ ಬೇಡವಾಗಿತ್ತು’ ಎಂದು ಅನಿಸುವುದೇ ಇಲ್ಲ. ಆ ರೀತಿಯಲ್ಲಿ ಚಿತ್ರಕಥೆ ಬರೆದುಕೊಂಡಿದ್ದಾರೆ ಜೆಪಿ ಅವರು. ಇಲ್ಲಿ ಎಲ್ಲಿಯೂ ಹಾಸ್ಯವನ್ನು ತುರುಕಿಲ್ಲ. ಸಹಜ ನಟನೆಯಿಂದ ಅದು ಚಿಮ್ಮುತ್ತದೆ. ನಗುವಿನ ಮಧ್ಯೆಯೇ ಒಂದು ಆಳವಾದ ಸಂದೇಶವನ್ನು ನಿರ್ದೇಶಕರು ನೀಡಿದ್ದಾರೆ.
ಪಾತ್ರವರ್ಗದ ವಿಚಾರಕ್ಕೆ ಬರೋದಾದರೆ ಇಲ್ಲಿ ಬರುವ ಪ್ರತಿ ಪಾತ್ರಗಳದ್ದು ಅದ್ಭುತ ನಟನೆ. ರವಿ ಅಣ್ಣನಾಗಿ ಶನೀಲ್ ಗೌತಮ್ ನಟನೆ ಮೆಚ್ಚುಗೆ ಪಡೆಯುತ್ತದೆ. ಅಶೋಕನಾಗಿ ಜೆಪಿ ತುಮಿನಾಡ ಇಷ್ಟ ಆಗುತ್ತಾರೆ. ಹಲವು ಶೇಡ್ಗಳಲ್ಲಿ ಅವರು ಮಿಂಚಿದ್ದಾರೆ. ಎಲ್ಲಾ ಶೇಡ್ಗಳನ್ನು ಅವರು ಉತ್ತಮವಾಗಿ ನಿರ್ವಹಿಸಿದ್ದಕ್ಕೆ ಶ್ಲಾಘನೆ ಕೊಡಲೇಬೇಕು. ಆರಂಭದಲ್ಲಿ ಸಾಮಾನ್ಯವಾಗಿ ಕಾಣುವ ಈ ಪಾತ್ರ, ಕೊನೆಯಲ್ಲಿ ಆನೆಯ ತೂಕ ಪಡೆದುಕೊಳ್ಳುತ್ತದೆ. ಚಂದ್ರನಾಗಿ ಪ್ರಕಾಶ್ ತುಮಿನಾಡ, ಸತೀಶನಾಗಿ ದೀಪಕ್ ರೈ, ಯದುವಾಗಿ ಮೈಮ್ ರಾಮದಾಸ್, ಅರ್ಜುನ್ ಕಜೆ ತೆರೆಮೇಲೆ ಇದ್ದಷ್ಟು ಹೊತ್ತು ನಗಿಸುತ್ತಾರೆ. ಇನ್ನೂ ಕೆಲವು ಪೋಷಕ ಪಾತ್ರಗಳು ನಗುವಿನ ಕಚಗುಳಿ ಇಡುತ್ತವೆ. ಮಧ್ಯಂತರದ ಬಳಿಕ ಬರುವ ಭಾನು (ಸಂಧ್ಯಾ ಅರೆಕೆರೆ) ಎಲ್ಲರನ್ನೂ ಹಿಂದಿಕ್ಕಿ ಭೇಷ್ ಎನಿಸಿಕೊಳ್ಳುತ್ತಾರೆ. ಸಿನಿಮಾದಲ್ಲಿ ವಿಶೇಷ ವ್ಯಕ್ತಿಯೊಬ್ಬರ ಪಾತ್ರವಿದೆ. ಅದು ಸಸ್ಪೆನ್ಸ್ ಆಗಿಯೇ ಇದ್ದರೆ ಚೆಂದ. ಅವರು ಕೂಡ ನಗುವಿನ ಹೊಳೆ ಹರಿಸುತ್ತಾರೆ.
ಸುಮೇಧ್ ಕೆ ಸಂಗೀತ ಸಂಯೋಜನೆ ಮಾಡಿದ ಚಿತ್ರದ ಹಾಡುಗಳು ‘ಸು ಫ್ರಮ್ ಸೋ’ ಚಿತ್ರದ ಅಂದವನ್ನು ಹೆಚ್ಚಿಸಿದೆ. ಸುಮಧುರ ಹಾಡುಗಳು ಕೇಳುಗನಿಗೆ ಇಷ್ಟ ಆಗುತ್ತವೆ. ಒಂದು ಹಾಡು ‘ಸ.ಹಿ.ಪ್ರಾ. ಶಾಲೆ ಕಾಸರಗೋಡು’ ಸಿನಿಮಾದ ಸಾಂಗ್ ನೆನಪಿಸದೆ ಇರದು. ಸಂದೀಪ್ ತುಳಸಿದಾಸ್ ಅವರು ಹಿನ್ನೆಲೆ ಸಂಗೀತವನ್ನು ಅಳೆದು ತೂಗಿ ನೀಡಿದ್ದಾರೆ. ಛಾಯಾಗ್ರಹಣ (ಚಂದ್ರಶೇಖರ್) ಹಾಗೂ ಸಂಕಲನದ (ನಿತೀನ್ ಶೆಟ್ಟಿ) ಚಿತ್ರವನ್ನು ಇನ್ನಷ್ಟು ಅಂದಗಾಣಿಸಿದ್ದಾರೆ. ಸ್ಥಳೀಯ ಪ್ರತಿಭೆಗಳ ಮೇಲೆ ನಂಬಿಕೆ ಇಟ್ಟು ಸಿನಿಮಾ ಮಾಡಿದ ನಿರ್ಮಾಪಕ ರಾಜ್ ಬಿ. ಶೆಟ್ಟಿಗೆ ಮೆಚ್ಚುಗೆ ಸೂಚಿಸಲೇಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:44 am, Fri, 25 July 25








