ದರ್ಶನ್ ಫಾರಂ ಹೌಸ್ ಮ್ಯಾನೇಜರ್ ಎನ್ನಲಾದ ವ್ಯಕ್ತಿಯ ಆತ್ಮಹತ್ಯೆ: ಪ್ರಕರಣದ ಮರು ತನಿಖೆ?

|

Updated on: Jun 18, 2024 | 7:04 PM

ನಟ ದರ್ಶನ್ ತೂಗುದೀಪ ಅವರ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದ ಎನ್ನಲಾಗಿರುವ ಶ್ರೀಧರ್ ಎಂಬಾತ ಏಪ್ರಿಲ್ ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಆ ಪ್ರಕರಣದ ಮರು ತನಿಖೆ ನಡೆಯುವ ಸಾಧ್ಯತೆ ಇದೆ.

ದರ್ಶನ್ ಫಾರಂ ಹೌಸ್ ಮ್ಯಾನೇಜರ್ ಎನ್ನಲಾದ ವ್ಯಕ್ತಿಯ ಆತ್ಮಹತ್ಯೆ: ಪ್ರಕರಣದ ಮರು ತನಿಖೆ?
ದರ್ಶನ್
Follow us on

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್​ರಿಗೆ ಹಲವು ಸಂಕಷ್ಟಗಳು ಸುತ್ತಿಕೊಳ್ಳುತ್ತಿವೆ. ಕೆಲವು ಹಳೆ ಪ್ರಕರಣಗಳಿಗೂ ಈಗ ಮರುಜೀವ ಬಂದಿದೆ. ಈಗಾಗಲೇ ದರ್ಶನ್​ರ ಮಾಜಿ ಮ್ಯಾನೇಜರ್ ಮಲ್ಲಿ ಕುರಿತು ಹುಡುಕಾಟ ಜಾರಿಯಲ್ಲಿದೆ. ಇದರ ಮಧ್ಯೆ ಮಲ್ಲಿ ತಾನು ಜೀವಂತ ಇರುವುದಾಗಿಯೂ ಸಾಲಗಳಿಂದಾಗಿ ಕಷ್ಟದಲ್ಲಿದ್ದು, ಸಾಲ ಮರುಪಾವತಿಗೆ ಬೇಕಾದ ಹಣ ಗಳಿಸಿಯೇ ಬರುವುದಾಗಿ ಪತ್ನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾಗಿ ವರದಿಯಾಗಿದೆ. ಇದೀಗ ದರ್ಶನ್​ರ ಮತ್ತೊಬ್ಬ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಇದೀಗ ವರದಿಯಾಗಿದ್ದು, ಆ ಪ್ರಕರಣದ ಮರು ತನಿಖೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ದರ್ಶನ್​ರ ಫಾರಂಹೌಸ್​ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ, ದರ್ಶನ್​ರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾದ ಶ್ರೀಧರ್ ಎಂಬುವರು ಏಪ್ರಿಲ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಷಯ ಇದೀಗ ಮಹತ್ವ ಪಡೆದುಕೊಂಡಿದ್ದು, ಆತ್ಮಹತ್ಯೆ ಪ್ರಕರಣದ ಮರು ತನಿಖೆ ನಡೆಯುವ ಸಾಧ್ಯತೆ ಇದೆ.

ಶ್ರೀಧರ್ ಎಂಬುವರು ಕಳೆದ ಏಪ್ರಿಲ್ 17 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಮೃತದೇಹ ಆನೇಕಲ್ ತಾಲೂಕಿನ ಬಗ್ಗನದೊಡ್ಡಿಯಲ್ಲಿರುವ ದರ್ಶನ್​​ಗೆ ಸೇರಿದ ಫಾರ್ಮ್​ಹೌಸ್ ನಲ್ಲಿ ಪತ್ತೆಯಾಗಿತ್ತು. ಆ ಫಾರಂ ಹೌಸ್​ನ ಮೇಲ್ವಿಚಾರಣೆಯನ್ನು ಶ್ರೀಧರ್ ಅವರೇ ನೋಡಿಕೊಳ್ಳುತ್ತಿದ್ದರು. ಅದೇ ಫಾರಂ ಹೌಸ್​ನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. 2 ಎಕರೆ 36 ಗುಂಟೆ ಪ್ರದೇಶದಲ್ಲಿರುವ ಫಾರ್ಮ್​ಹೌಸ್​ನ ಕಲ್ಲು ಬಂಡೆಯೊಂದರ ಮೇಲೆ ಶ್ರೀಧರ್ ಮೃತದೇಹ ಪತ್ತೆಯಾಗಿತ್ತು. ಆತನ ಗೆಳೆಯನೊಬ್ಬ ಆ ಸಮಯದಲ್ಲಿ ಪೊಲೀಸರಿಗೆ ಮಾಹಿತಿ ಒದಗಿಸಿದ್ದ.

ಇದನ್ನೂ ಓದಿ:ಪಾರ್ಟಿಯಲ್ಲಿ ದರ್ಶನ್, ಚಿಕ್ಕಣ್ಣ ಜೊತೆ ಇದ್ದ ಮತ್ತೋರ್ವ ಹೀರೋ ಇವರೇ ನೋಡಿ

ಆತ್ಮಹತ್ಯೆಗೆ ಶರಣಾಗಿದ್ದ ಶ್ರೀಧರ್ ಅವರ ಡೆತ್ ನೋಟ್ ಸಹ ಆ ಸಮಯದಲ್ಲಿ ಪತ್ತೆಯಾಗಿತ್ತು, ‘ನನ್ನ ಸಾವಿಗೆ ನಾನೇ ಕಾರಣ, ಒಂಟಿತನ ಕಾಡುತ್ತಿದೆ ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶ್ರೀಧರ್ ಬರೆದುಕೊಂಡಿದ್ದ. ಅನೆಕಲ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಅವರ ಹಳೆಯ ಪ್ರಕರಣಗಳನ್ನು ಸಹ ಪೊಲೀಸರು ಜಾಲಾಡುತ್ತಿದ್ದು, ಶ್ರೀಧರ್ ಆತ್ಮಹತ್ಯೆ ಪ್ರಕರಣದ ಮರು ತನಿಖೆ ನಡೆಯುವ ಸಂಭವ ಇದೆ.

ಈ ಘಟನೆ ಬಗ್ಗೆ ಮಾತನಾಡಿರುವ ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ, ‘ಶ್ರೀಧರ್​ಗೆ 39 ವರ್ಷ ಆಗಿದ್ದು, ಮದುವೆ ಆಗಿರಲಿಲ್ಲ, ಡೆತ್ ನೋಟ್ ನಲ್ಲಿ ಸಾವಿಗೆ ಯಾರು ಕಾರಣ ಅಲ್ಲ, ಒಂಟಿತನದಿಂದ ಬೇಸರಗೊಂಡು ಸಾಯುತ್ತಿದ್ದೇನೆ, ಯಾರಿಗೂ ತೊಂದರೆ ಕೊಡಬೇಡಿ ಎಂದು ಬರೆದಿತ್ತು. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ವಿಷ ಸೇವಿಸಿರುವುದಾಗಿ ಬಂದಿತ್ತು. ಕೆಲವು ಬಾಡಿ ಪಾರ್ಟ್​ಗಳನ್ನು ಕಳಿಸಿದ್ದೆವು, ಅದರ ವರದಿ ಇನ್ನೂ ಬಂದಿಲ್ಲ. ಫಾರಂ ಹೌಸ್​ನ ಇನ್ನೂ ಕೆಲವರ ವಿಚಾರಣೆ ಮಾಡಿ ಹೇಳಿಕೆ ಪಡೆಯಬೇಕಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:14 pm, Tue, 18 June 24