12 ಅಲ್ಲ 11: ‘ಡೆವಿಲ್’ ಆಗಮನದ ದಿನಾಂಕ ಬದಲು

Darsan Thoogudeepa: ದರ್ಶನ್ ತೂಗುದೀಪ ಜೈಲಿನಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ. ಮತ್ತೊಮ್ಮೆ ಅವರು ಜೈಲು ಪಾಲಾಗುವ ಮುಂಚೆ ‘ದಿ ಡೆವಿಲ್’ ಸಿನಿಮಾದ ಶೂಟಿಂಗ್ ಮುಗಿಸಿದ್ದರು. ದರ್ಶನ್ ಅನುಪಸ್ಥಿತಿಯಲ್ಲಿಯೇ ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಜ್ಜಾಗಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನೂ ಘೋಷಿಸಲಾಗಿತ್ತು. ಆದರೆ ಇದೀಗ ಸಿನಿಮಾ ಬಿಡುಗಡೆ ದಿನಾಂಕವನ್ನು ಬದಲಾಯಿಸಲಾಗಿದೆ.

12 ಅಲ್ಲ 11: ‘ಡೆವಿಲ್’ ಆಗಮನದ ದಿನಾಂಕ ಬದಲು
Devil

Updated on: Nov 22, 2025 | 3:13 PM

ದರ್ಶನ್ (Darshan) ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಹತ್ತಿರದಲ್ಲಂತೂ ಅವರು ಹೊರಗೆ ಬರುವುದು ಬಹುತೇಕ ಅಸಾಧ್ಯ ಎಂಬಂತಾಗಿದೆ. ಇದೇ ಕಾರಣಕ್ಕೆ ದರ್ಶನ್ ಜೈಲಿನಲ್ಲಿರುವಾಗಲೇ ಅವರ ನಟನೆಯ ‘ಡೆವಿಲ್’ ಸಿನಿಮಾದ ಬಿಡುಗಡೆಗೆ ಚಿತ್ರತಂಡ ಸಿದ್ಧವಾಗಿದೆ. ಈ ಹಿಂದೆಯೇ ‘ಡೆವಿಲ್’ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ಸಿನಿಮಾದ ಬಿಡುಗಡೆ ದಿನಾಂಕವನ್ನು ಬದಲಾಯಿಸಲಾಗಿದೆ.

‘ಡೆವಿಲ್’ ಸಿನಿಮಾ ಡಿಸೆಂಬರ್ 12ಕ್ಕೆ ಬದಲಾಗಿ ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 11ಕ್ಕೆ ತೆರೆಗೆ ಬರಲಿದೆ. ಇತ್ತೀಚೆಗಷ್ಟೆ ವಿಜಯಲಕ್ಷ್ಮಿ ದರ್ಶನ್, ‘ಡೆವಿಲ್’ ನಿರ್ದೇಶಕ, ನಿರ್ಮಾಪಕ ಪ್ರಕಾಶ್ ಇನ್ನಿತರರು ದರ್ಶನ್ ಅವರ ಅಭಿಮಾನಿಗಳೊಟ್ಟಿಗೆ ಸಭೆ ನಡೆಸಿದ್ದರು. ಸಭೆಯ ಬಳಿಕ ಸಿನಿಮಾದ ಹೊಸ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಒಂದು ದಿನ ಮುಂಚಿತವಾಗಿ ಬಿಡುಗಡೆ ಆಗುತ್ತಿರುವುದಕ್ಕೆ ಸ್ಪಷ್ಟ ಕಾರಣವನ್ನು ತಿಳಿಸಿಲ್ಲ. ಬದಲಿಗೆ ಅಭಿಮಾನಿಗಳ ಒತ್ತಾಯದ ಮೇರೆಗೆ ಎಂದಷ್ಟೆ ಹೇಳಲಾಗಿದೆ. ಹಿಂದಿನ ದಿನಾಂಕದಂತೆ ಶುಕ್ರವಾರ ಬಿಡುಗಡೆ ಆಗಬೇಕಿದ್ದ ಸಿನಿಮಾ ಈಗ ಒಂದು ದಿನ ಮುಂಚಿತವಾಗಿ ಎಂದರೆ ಗುರುವಾರದಂದು ಬಿಡುಗಡೆ ಆಗಲಿದೆ.

ಇದನ್ನೂ ಓದಿ:ದರ್ಶನ್ ಅಭಿಮಾನಿಗಳ ಜೊತೆ ಸಭೆ ಮಾಡಿದ ವಿಜಯಲಕ್ಷ್ಮೀ

ಇತ್ತೀಚೆಗೆ ಹಲವು ಸಿನಿಮಾಗಳು ಈ ಮಾದರಿಯನ್ನು ಅನುಸರಿಸುತ್ತಿವೆ. ಶುಕ್ರವಾರದ ಬದಲಾಗಿ ಗುರುವಾರ ಬಿಡುಗಡೆ ಮಾಡಲಾಗುತ್ತದೆ. ಶುಕ್ರವಾರದಿಂದಲೇ ವೀಕೆಂಡ್ ಕಲೆಕ್ಷನ್ ಪ್ರಾರಂಭ ಆಗುತ್ತದೆ ಹಾಗೂ ರಿಲೀಸ್ ದಿನ ಅಭಿಮಾನಿಗಳು ಹೇಗೋ ಸಿನಿಮಾ ವೀಕ್ಷಿಸುತ್ತಾರೆ ಎಂಬುದು ಚಿತ್ರತಂಡಗಳ ಲೆಕ್ಕಾಚಾರ. ‘ಡೆವಿಲ್’ ಬಿಡುಗಡೆ ದಿನಾಂಕ ಬದಲಾಗುವುದರ ಹಿಂದೆಯೂ ಇದೇ ಕಾರಣ ಇರಬಹುದು ಎನ್ನಲಾಗುತ್ತಿದೆ.

ದರ್ಶನ್ ಜೈಲಿನಲ್ಲಿರುವಾಗ ಬಿಡುಗಡೆ ಆಗುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಈ ಹಿಂದೆ ದರ್ಶನ್, ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದಾಗ ಅವರ ನಟನೆಯ ‘ಸಾರಥಿ’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ದರ್ಶನ್ ಮತ್ತೆ ಜೈಲಿನಲ್ಲಿದ್ದು ಈಗ ‘ಡೆವಿಲ್’ ಸಿನಿಮಾ ಬಿಡುಗಡೆ ಆಗುತ್ತಿದೆ.

‘ಡೆವಿಲ್’ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ರಚನಾ ರೈ ನಾಯಕಿ. ಸಿನಿಮಾನಲ್ಲಿ ಅಚ್ಯುತ್ ಕುಮಾರ್, ಮರಾಠಿ ನಟ ಮಹೇಶ್ ಮಂಜ್ರೇಕರ್, ನಟಿ ಶರ್ಮಿಳಾ ಮಾಂಡ್ರೆ, ಮಾಜಿ ಬಿಗ್​​ಬಾಸ್ ಸ್ಪರ್ಧಿ ವಿನಯ್ ಗೌಡ ಇನ್ನೂ ಹಲವು ನಟ-ನಟಿಯರು ನಟಿಸಿದ್ದಾರೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಸಿನಿಮಾಕ್ಕೆ ಪ್ರಕಾಶ್ ಅವರೇ ಬಂಡವಾಳ ತೊಡಗಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ