ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಸೆಪ್ಟೆಂಬರ್ 9ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ. ಆದರೆ ಈ ನಡುವೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಹಾಗೂ ಇತರೆ ಕೆಲವು ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ದರ್ಶನ್ ಹಾಗೂ ಇತರೆ ಕೆಲವರಿಗೆ ವಿಶೇಷ ಆತಿಥ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗುತ್ತಿರುವ ವಿಷಯ ಬಹಿರಂಗವಾದ ಬಳಿಕ ಪೊಲೀಸರ ಮನವಿಯಂತೆ ನ್ಯಾಯಾಲಯವು ಆರೋಪಿಗಳ ವರ್ಗಾವಣೆಗೆ ಅನುಮತಿ ನೀಡಿದೆ. ನಾಳೆ (ಆಗಸ್ಟ್ 29) ರಂದು ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಲಾಗುತ್ತದೆ.
ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ಸಿಕ್ಕ ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ಪ್ರಕರಣ ಕುರಿತಾಗಿ ಇಂದು (ಆಗಸ್ಟ್ 29) ನಟ ದರ್ಶನ್ ಸೇರಿದಂತೆ ಇನ್ನೂ ಕೆಲವು ಆರೋಪಿಗಳ ವಿಚಾರಣೆ ಹಾಗೂ ಸ್ಥಳ ಮಹಜರು ಸಹ ಮಾಡಲಾಗಿದೆ. ಇಂದೇ ಸಂಜೆ ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ವರ್ಗ ಮಾಡುವ ಸುದ್ದಿ ಹಬ್ಬಿತ್ತು, ಆದರೆ ಇಂದು ವಿಚಾರಣೆ ನಡೆದಿದ್ದು, ಇನ್ನೂ ಕೆಲವು ಆರೋಪಿಗಳ ವಿಚಾರಣೆ ನಡೆಯಬೇಕಿರುವ ಕಾರಣ ವರ್ಗಾವಣೆಯನ್ನು ನಾಳೆಗೆ ಮುಂದೂಡಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ದರ್ಶನ್ ಮತ್ತು ಗ್ಯಾಂಗ್ ನ್ಯಾಯಾಂಗ ಬಂಧನ ವಿಸ್ತರಿಸಲು ಪೊಲೀಸರು ನೀಡಿದ ಕಾರಣಗಳೇನು?
ದರ್ಶನ್ ಅವರನ್ನು ನಾಳೆ (ಆಗಸ್ಟ್ 29) ಬೆಂಗಳೂರು, ತುಮಕೂರು, ಹಿರಿಯೂರು, ಚಳ್ಳಕೆರೆ, ರಾಯದುರ್ಗ ಹಾದಿಯಾಗಿ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ನಟ ದರ್ಶನ್ ಅನ್ನು ಸ್ಥಳಾಂತರ ಮಾಡಲಾಗುತ್ತದೆ. ಇಂದೇ ದರ್ಶನ್ ಬಳ್ಳಾರಿಗೆ ಜೈಲಿಗೆ ಬರುತ್ತಾರೆಂದು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬಳ್ಳಾರಿ ಜೈಲಿನ ಮುಂದೆ ಜಮಾವಣೆಗೊಂಡಿದ್ದರು. ಆದರೆ ಇಂದು ದರ್ಶನ್ ಅನ್ನು ಸ್ಥಳಾಂತರ ಮಾಡಲಾಗುತ್ತಿಲ್ಲ ಎನ್ನಲಾಗುತ್ತಿದೆ.
ಇನ್ನು ಬಳ್ಳಾರಿ ಜೈಲಿನಲ್ಲಿ ದರ್ಶನ್ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗಿದೆ. ಸಿಸಿಟಿವಿ, ಬಾಡಿ ಕ್ಯಾಮ್ ವ್ಯವಸ್ಥೆಯೂ ಸಹ ಬಳ್ಳಾರಿ ಜೈಲಿನಲ್ಲಿದೆ. ಜಾಮರ್ಗಳನ್ನು ಸಹ ಪರಿಶೀಲಿಸಲಾಗಿದೆಯಂತೆ. ಬಳ್ಳಾರಿಯ ವಿಶೇಷ ಭದ್ರತಾ ಬ್ಯಾರಕ್ 15 ರಲ್ಲಿ ದರ್ಶನ್ ಅನ್ನು ಇರಿಸಲಾಗುತ್ತದೆ. ಬಳ್ಳಾರಿ ಜೈಲಿನಲ್ಲಿ ಈಗಾಗಲೇ 385 ಮಂದಿ ಕೈದಿಗಳಿದ್ದಾರೆ. 100 ಮಂದಿ ಸಿಬ್ಬಂದಿ ಇದ್ದಾರೆ. ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
1872 ರಲ್ಲಿ ಸ್ಥಾಪಿಸಿದ ಜೈಲು ಇದಾಗಿದ್ದು, ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಕೆಲ ವಿದೇಶಿ ಬಂಧಿಗಳನ್ನು ಇದರಲ್ಲಿ ಇರಿಸಲಾಗಿತ್ತಂತೆ. ದ್ರಾವಿಡ ಚಳವಳಿಯ ಹರಕಾರ ಅಣ್ಣಾ ದೊರೈ ಅವರು ಸಹ ಈ ಜೈಲಿನಲ್ಲಿ ದಿನಗಳನ್ನು ಕಳೆದಿದ್ದಾರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎಲ್ಕೆ ಅಡ್ವಾಣಿ ಅವರನ್ನು ಈ ಜೈಲಿನಲ್ಲಿ ಇಡಲಾಗಿತ್ತು. ಈಗ ಈ ಜೈಲಿನಲ್ಲಿ 385 ಜನ ಕೈದಿಗಳಿದ್ದು, ಹಿಂದೂ ಕಾರ್ಯಕರ್ತ ಪ್ರವೀಣ್ ಪೂಜಾರಿ, ಹರ್ಷ ಹತ್ಯೆ ಆರೋಪಿಗಳು ಸಹ ಇಲ್ಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ