Kichcha Sudeep: ‘ಭುವನಂ ಗಗನಂ’ಗೆ ಕಿಚ್ಚ ಸುದೀಪ್ ಸುದೀಪ್ ಬೆಂಬಲ, ಹಾಡು ಬಿಡುಗಡೆ
ಕನ್ನಡ ಚಿತ್ರರಂಗದ ಇಬ್ಬರು ಪ್ರತಿಭಾವಂತ ನಟರಾದ ಪೃಥ್ವಿ ಅಂಬರ್ ಹಾಗೂ ಪ್ರಮೋದ್ ಒಟ್ಟಿಗೆ ನಟಿಸುತ್ತಿರುವ ‘ಭುವನ್ ಗಗನಂ’ ಸಿನಿಮಾಕ್ಕೆ ಕಿಚ್ಚ ಸುದೀಪ್ ಬೆಂಬಲ ದೊರೆತಿದೆ. ಸಿನಿಮಾದ ಹಾಡೊಂದನ್ನು ಕಿಚ್ಚ ಬಿಡುಗಡೆ ಮಾಡಿದ್ದಾರೆ.
ಅಪ್ಪು ನಟನೆಯ ‘ಪೃಥ್ವಿ’ ಸಿನಿಮಾದ ಹಾಡು ‘ಭುವನಂ ಗಗನಂ’ ಹೆಸರಿನಲ್ಲಿ ಹೊಸ ಸಿನಿಮಾ ಒಂದು ತೆರೆಗೆ ಬರುತ್ತಿದೆ. ಈ ಸಿನಿಮಾ ತನ್ನ ಟೀಸರ್ ನಿಂದ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಕ್ಲಾಸ್ ಕಥೆಗಳ ಮೂಲಕ ಗಮನಸೆಳೆಯುತ್ತಿರುವ ನಟ ಪೃಥ್ವಿ ಅಂಬಾರ್ ಹಾಗೂ ಮಾಸ್ ಸಿನಿಮಾಗಳ ಮೂಲಕ ಸೈ ಎನಿಸಿಕೊಂಡ ಪ್ರಮೋದ್, ಮೊದಲ ಬಾರಿ ಒಟ್ಟಿಗೆ ಈ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾಕ್ಕೆ ಈಗ ಕಿಚ್ಚ ಸುದೀಪ್ ಬೆಂಬಲವೂ ದೊರೆತಿದೆ.
ಹೊಸ ಪ್ರತಿಭೆಗಳಿಗೆ ಬೆಂಬಲ ನೀಡುತ್ತಲೇ ಬಂದಿರುವ ನಟ ಕಿಚ್ಚ ಸುದೀಪ್ ಇದೀಗ ಚಿತ್ರರಂಗದ ಭರವಸೆ ನಟರು ಎನಿಸಿಕೊಂಡಿರುವ ಪ್ರಮೋದ್ ಹಾಗೂ ಪೃಥ್ವಿ ಅವರ ಹೊಸ ಸಿನಿಮಾಕ್ಕೆ ಶುಭ ಕೋರಿದ್ದು, ‘ಭುವನಂ ಗಗನಂ’ ಹಾಡು ಬಿಡುಗಡೆ ಮಾಡಿದ್ದಾರೆ. ‘ಭುವನಂ ಗಗನಂ’ ಎಂದು ಶುರುವಾಗುವ ಈ ಹಾಡಿಗೆ ಅನಿರುದ್ಧ ಶಾಸ್ತ್ರೀ ಸಾಹಿತ್ಯ ರಚಿಸಿದ್ದಾರೆ. ಅರ್ಮಾನ್ ಮಲ್ಲಿಕ್ ಹಾಗೂ ಐಶ್ವರ್ಯ ರಂಗರಾಜನ್ ಧ್ವನಿಗೂಡಿಸಿದ್ದಾರೆ. ಗುಮ್ಮಿನೇನಿ ವಿಜಯ್ ಸಂಗೀತ ನೀಡಿದ್ದಾರೆ. ಭುವನಂಗಗನಂ ಟೈಟಲ್ ಟ್ರ್ಯಾಕ್ ನಲ್ಲಿ ಪ್ರಮೋದ್ ಹಾಗೂ ರೆಚೆಲ್ ಡೇವಿಡ್ ಜೋಡಿ ಸೊಗಸಾಗಿ ಕಾಣಿಸಿಕೊಂಡಿದೆ.
ಇದನ್ನೂ ಓದಿ:ಸಿನಿಮಾ ಎಂಬುದು ಆಲದ ಮರ: ದೊಡ್ಮನೆ ಸಿನಿಮಾ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮಾತು
‘ಭುವನಂ ಗಗನಂ’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿರುವ ಗಿರೀಶ್ ಮೂಲಿಮನಿ ಅವರೇ ನಿರ್ದೇಶನವನ್ನೂ ಮಾಡಿದ್ದಾರೆ. ಈ ಹಿಂದೆ ‘ರಾಜರು’ ಎಂಬ ಸಿನಿಮಾ ಮಾಡಿರುವ ಅನುಭವ ಇವರಿಗಿದೆ. ಇದೀಗ ‘ಭುವನಂ ಗಗನಂ’ ಸಿನಿಮಾ ಮೂಲಕ ಹೊಸ ಕತೆಯೊಟ್ಟಿಗೆ ಬಂದಿದ್ದಾರೆ. ಎಂ ಮುನೇಗೌಡ ತಮ್ಮದೇ ಎಸ್ ವಿಸಿ ಫಿಲ್ಮಂಸ್ ಪ್ರೊಡಕ್ಷನ್ ಅಡಿಯಲ್ಲಿ ಭುವನಂ ಗಗನಂಗೆ ನಿರ್ಮಾಣ ಮಾಡಿದ್ದಾರೆ.
‘ಭುವನಂ ಗಗನಂ’ ಪ್ರೀತಿ-ಪ್ರೇಮದ ಕತೆಯ ಜೊತೆಗೆ ಕೌಟುಂಬಿಕ ಕತೆಯನ್ನು ಒಳಗೊಂಡಿದೆ. ನಗರ, ಹಳ್ಳಿ ಎರಡು ಹಿನ್ನೆಲೆಯಲ್ಲಿ ಈ ಸಿನಿಮಾದ ಕತೆ ನಡೆಯುತ್ತದೆ. ಪ್ರಮೋದ್ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ. ಉದಯ್ ಲೀಲಾ ಕ್ಯಾಮೆರಾ ಕೈಚಳಕ, ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಕಿಕ್, ಸುನೀಲ್ ಕಶ್ಯಪ್ ಸಂಕಲನ ಸಿನಿಮಾಕ್ಕಿದೆ. ಪ್ರಚಾರ ಅಖಾಡಕ್ಕೆ ಇಳಿದಿರುವ ಚಿತ್ರತಂಡ ಆದಷ್ಟು ಬೇಗ ಭುವನಂ ಗಗನಂ ಸಿನಿಮಾ ತೆರೆಗೆ ತರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:40 pm, Wed, 28 August 24