ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಇತ್ತೀಚೆಗಷ್ಟೆ ಮತ್ತೆ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ತಾವು ಜೈಲಿಗೆ ಹೋದ ಕಾರಣದಿಂದ ನಿಂತು ಹೋಗಿದ್ದ ‘ಡೆವಿಲ್’ ಸಿನಿಮಾದ ಚಿತ್ರೀಕರಣವನ್ನು ಇತ್ತೀಚೆಗಷ್ಟೆ ಪುನಃ ಪ್ರಾರಂಭಿಸಿದ್ದಾರೆ. ಇದರ ನಡುವೆ ತಮ್ಮ ಇತ್ತೀಚೆಗಿನ ಸಂಕಷ್ಟಗಳಿಂದ ಪಾರು ಮಾಡುವಂತೆ ದೇವರ ಮೊರೆಯನ್ನು ಹೋಗಿದ್ದಾರೆ ನಟ ದರ್ಶನ್, ಮಾತ್ರವೇ ಅಲ್ಲದೆ ತಮ್ಮ ಶತ್ರುಗಳ ವಿನಾಶವಾಗಲೆಂದು ವಿಶೇಷ ದೇವಾಲಯವೊಂದರಲ್ಲಿ ಪೂಜೆ ಸಹ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.
ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ, ಮಗ ವಿನೀತ್ ಹಾಗೂ ಧನ್ವೀರ್ ಗೌಡ ಅವರುಗಳ ಜೊತೆಯಲ್ಲಿ ಕೇರಳದ ಕಣ್ಣೂರಿನ ಪ್ರಸಿದ್ಧ ಮಾಡಾಯಿಕಾವು ಶ್ರೀಭಗವತೀ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ದೇವಾಲಯವು ಶತ್ರು ಸಂಹಾರ ಹೋಮಕ್ಕೆ ಬಹಳ ಪ್ರಸಿದ್ಧಿ ಪಡೆದಿದೆ. ಇದೀಗ ದರ್ಶನ್ ಅವರು ಕುಟುಂಬ ಸಮೇತ ಇಲ್ಲಿಗೆ ಬಂದಿರುವುದು ಸಹ ಶತ್ರು ಸಂಹಾರ ಹೋಮಕ್ಕಾಗಿಯೇ ಎನ್ನಲಾಗುತ್ತಿದೆ. ಈ ದೇವಾಲಯದಲ್ಲಿ ಹಲವಾರು ರಾಜಕಾರಣಿಗಳು, ಉದ್ಯಮಿಗಳು ಸಹ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿರುತ್ತಾರೆ.
ಇದನ್ನೂ ಓದಿ:ದರ್ಶನ್ ಜಾಮೀನು ರದ್ದು ಕೋರಿ ಅರ್ಜಿ, ವಿಚಾರಣೆಗೆ ಸುಪ್ರೀಂ ಅಸ್ತು
ದರ್ಶನ್ ಇದೀಗ ಭೇಟಿ ನೀಡಿರುವ ಶ್ರೀಭಗವತೀ ದೇವಸ್ಥಾನ ಹಲವು ವಿಶೇಷತೆಗಳನ್ನು ಹೊಂದಿದೆ. ಇಲ್ಲಿ ಪಾರ್ವತಿ ರುದ್ರಕಾಳಿಯ ಅವತಾರದಲ್ಲಿ ಸಂಚರಿಸುತ್ತಾಳೆ ಎಂಬ ನಂಬುಗೆ ಇದೆ. ಹಾಗಾಗಿ ರಾತ್ರಿ ಎಂಟ ಗಂಟೆ ಮೇಲೆ ಪೂಜಾರಿಗಳ ಹೊರತಾಗಿ ಇನ್ಯಾರು ಸಹ ಇಲ್ಲಿ ಇರುವಂತಿಲ್ಲ. ಮಾತ್ರವಲ್ಲದೆ ಇಲ್ಲಿ ಪೂಜೆ ಮಾಡುವವರಿಗೆ ಮಾಂಸವನ್ನು ಪ್ರಸಾದವನ್ನಾಗಿ ನೀಡಲಾಗುತ್ತದೆ. ಇಲ್ಲಿ ಪೂಜೆ ಮಾಡುವ ಕೆಲ ಬ್ರಾಹ್ಮಣರು ಸಹ ಮಾಂಸಾಹಾರವನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ ಎಂಬ ಮಾತುಗಳಿವೆ.
ಈ ದೇವಾಲಯದಲ್ಲಿ ಎಂಟು ರೀತಿಯ ಪೂಜೆಗಳನ್ನು ಮಾಡಲಾಗುತ್ತದೆ. ಶತ್ರು ಸಂಹಾರ ಪೂಜೆ ಬಹಳ ವಿಶೇಷವಾದುದು. ಈ ಪೂಜೆಯನ್ನು ಮಧ್ಯಾಹ್ನ 12 ಗಂಟೆ ಹಾಗೂ ಸಂಜೆ 6 ಗಂಟೆಯ ನಡುವೆ ಈ ಪೂಜೆಯನ್ನು ಮಾಡಿಸಲಾಗುತ್ತದೆ. ಈ ವೇಳೆ ಪೂಜೆ ಮಾಡಿಸುವವರ ಹೊರತಾಗಿ ಇನ್ಯಾರೂ ಸಹ ದೇವಾಲಯದಲ್ಲಿ ಇರುವಂತಿಲ್ಲ. ಈ ಪೂಜೆಗಳು ಬಹಳ ಗೌಪ್ಯವಾಗಿ ನಡೆಯುತ್ತವೆಯಂತೆ.
ಇದೀಗ ನಟ ದರ್ಶನ್ ಈ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ. ದರ್ಶನ್, ತಮ್ಮ ಶತ್ರುಗಳ ವಿರುದ್ಧ ಜಯ ಕಾಣಲೆಂದು, ಶತ್ರು ಕಾಟ ನಿವಾರಣೆಗಾಗಿ ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅವರ ಇಚ್ಛೆ ಈಡೇರುತ್ತದೆಯೇ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ