ದರ್ಶನ್ ಪೂಜೆ ಮಾಡಿಸಿದ ಕೇರಳದ ಭಗವತಿ ದೇವಾಲಯದ ಮಹತ್ವವೇನು?
Darshan Thoogudeepa: ನಟ ದರ್ಶನ್ ಅವರು ಇಂದು ಕೇರಳದ ಕಣ್ಣೂರಿನ ಮಡಾಯಿ ಕಾವು ಭಗವತಿ ದೇವಾಲಯಕ್ಕೆ ಭೇಟಿ ನೀಡಿದ್ದರು. ದರ್ಶನ್ ಇತ್ತೀಚೆಗೆ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಆದರೆ ಈ ದೇವಾಲಯದ ಭೇಟಿ ಬಹಳ ಮಹತ್ವದ್ದು, ಏಕೆಂದರೆ ಈ ದೇವಾಲಯ ಶತ್ರು ಸಂಹಾರ ಪೂಜೆಗೆ ಪ್ರಸಿದ್ಧಿ. ಈ ದೇವಾಲಯದ ಆಚರಣೆಗಳು ಬಹಳ ಭಿನ್ನ. ಈ ದೇವಾಲಯದ ವಿಶೇಷತೆಗಳೇನು? ಇಲ್ಲಿದೆ ಪೂರ್ಣ ಮಾಹಿತಿ...

ನಟ ದರ್ಶನ್ (Darshan) ಇಂದು ಕೇರಳದ ಕಣ್ಣೂರಿನ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ದರ್ಶನ್ ಮೊದಲಿನಿಂದಲೂ ಕಾಲ-ಕಾಲಕ್ಕೆ ದೇವಾಲಯಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಜಾಮೀನಿನ ಮೇಲೆ ಬಿಡುಗಡೆ ಆದ ಬಳಿಕವಂತೂ ದೇವಾಲಯಗಳ ಭೇಟಿ ಹೆಚ್ಚು ಮಾಡಿದ್ದಾರೆ ದರ್ಶನ್. ಈ ಹಿಂದೆಯೂ ಸಹ ಚಾಮುಂಡೇಶ್ವರಿ ದೇವಾಲಯ, ತಮಿಳುನಾಡಿನ ಕೆಲ ದೇವಾಲಯಗಳು, ಇತ್ತೀಚೆಗೆ ಗೌಡಗೆರೆ ಚಾಮುಂಡೇಶ್ವರಿ ದೇವಾಲಯ ಹೀಗೆ ಹಲವು ದೇವಾಲಯಗಳಿಗೆ ಭೇಟಿ ಮಾಡಿದ್ದಿದೆ. ಆದರೆ ಇಂದು ಕೇರಳದ ದೇವಾಲಯಕ್ಕೆ ಭೇಟಿ ನೀಡಿರುವುದು ಹಲವು ಕಾರಣಕ್ಕೆ ಮಹತ್ವವಾಗಿದೆ. ಏಕೆಂದರೆ ದರ್ಶನ್ ಭೇಟಿ ನೀಡಿರುವ ದೇವಾಲಯ ಸಾಮಾನ್ಯ ದೇವಾಲಯವಲ್ಲ. ಈ ದೇವಾಲಯ ಶತ್ರು ಸಂಹಾರ ಪೂಜೆಗೆ ಬಹಳ ಪ್ರಸಿದ್ಧಿ ಪಡೆದಿರುವ ದೇವಾಲಯ.
ದರ್ಶನ್ ಇಂದು ಭೇಟಿ ನೀಡಿರುವುದು ಕೇರಳದ ಕಣ್ಣೂರಿನ ಪ್ರಸಿದ್ಧ ಮಾಡಾಯಿಕಾವು ಶ್ರೀಭಗವತೀ ದೇವಸ್ಥಾನಕ್ಕೆ. ಈ ದೇವಾಲಯ ಹಲವು ವಿಶೇಷತೆಗಳನ್ನು ಮಾತ್ರವೇ ಅಲ್ಲದೆ ಭಿನ್ನ ಆಚರಣೆಗಳನ್ನು ಸಹ ಹೊಂದಿದೆ. ಕೇರಳದಲ್ಲಿ ಹಲವು ಭದ್ರಕಾಳಿ ದೇವಾಲಯಗಳಿವೆ ಆದರೆ ದರ್ಶನ್ ಭೇಟಿ ನೀಡಿರುವ ಮಾಡಾಯಿಕಾವು ಶ್ರೀಭಗವತೀ ದೇವಾಲಯ ಪ್ರಮುಖವಾದುದು. ಇಲ್ಲಿ ಪಾರ್ವತಿ ದೇವಿಯು ಭದ್ರಕಾಳಿ ಅವತಾರದಲ್ಲಿ ಸಂಚಾರ ಮಾಡುತ್ತಾಳೆ ಎಂಬ ಪ್ರತೀತಿ ಇದೆ. ಹೀಗಾಗಿ ರಾತ್ರಿ ಎಂಟರ ಸಮಯ ದೇವಾಲಯದಲ್ಲಿ ಯಾವ ಭಕ್ತರೂ ಇರುವಂತಿಲ್ಲ ಈ ಸಮಯದಲ್ಲಿ ಕೇವಲ ಅಲ್ಲಿನ ಅರ್ಚಕರು ಮಾತ್ರವೇ ಇರುತ್ತಾರೆ. ಈ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ನಿಷೇಧವಿದೆಯಂತೆ.
ಇದನ್ನೂ ಓದಿ:ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್, ಶತ್ರು ಸಂಹಾರಕ್ಕಾಗಿ ಪೂಜೆ?
ಈ ದೇವಾಲಯದಲ್ಲಿ ಹಲವು ವಿಶೇಷ ಪೂಜೆಗಳನ್ನು ದೇವಿಗೆ ಮಾಡಲಾಗುತ್ತದೆ. ಕಲಶಂ ಎನ್ನುವ ಪೂಜೆ ನಡೆಸುವಾಗ ಕೋಳಿಗಳನ್ನು ಬಲಿ ಕೊಡಲಾಗುತ್ತದೆ. ಇಲ್ಲಿ ಭಕ್ತರಿಗೆ ಪ್ರಸಾದವಾಗಿ ಕೋಳಿ ಮಾಂಸವನ್ನು ನೀಡಲಾಗುತ್ತದೆ. ಮಾಂಸಾಹಾರ ತಿನ್ನದವರಿಗೆ ಬೇಯಿಸಿದ ಹೆಸರು ಕಾಳು, ಅಕ್ಕಿ, ಬೆಲ್ಲದಿಂದ ಮಾಡಲಾದ ಪ್ರಸಾದವನ್ನು ನೀಡಲಾಗುತ್ತದೆ. ಈ ದೇವಾಲಯದಲ್ಲಿ ಕೆಲವು ವಿಶೇಷ ಪೂಜೆಗಳಿಗೆ ಮದ್ಯವನ್ನು ಸಹ ದೇವರಿಗೆ ಅರ್ಪಿಸಲಾಗುತ್ತದೆ ಎನ್ನಲಾಗುತ್ತದೆ. ಇಲ್ಲಿ ದೇವಿ ಉಗ್ರ ರೂಪದಲ್ಲಿ ಸ್ಥಿತಳಾಗಿದ್ದಾಳೆ. ದೇವಿಯ ಕೈಯಲ್ಲಿರುವ ಖಡ್ಗವು ಬಂಗಾರದ ಕವಚ ಹೊಂದಿದ್ದು, ಈ ಖಡ್ಗವನ್ನು ವರ್ಷಕ್ಕೆ ಒಮ್ಮೆ ತೆಗೆದು ವಿಶೇಷ ಪೂಜೆ ಮಾಡಿ ಭಕ್ತರ ದರ್ಶನಕ್ಕೆ ಇಡಲಾಗುತ್ತದೆ. ಬಹಳ ಪುರಾತನ ದೇವಾಲಯ ಇದಾಗಿದ್ದು, ಚರಕಲ ರಾಜರು ಯುದ್ಧಕ್ಕೆ ಹೋಗುವ ಮುಂಚೆ ಈ ದೇವಿಯ ಆಶೀರ್ವಾದ ಪಡೆಯುತ್ತಿದ್ದರು ಎಂಬ ಪ್ರತೀತಿ ಇದೆ. ಈ ದೇವಿ ಶತ್ರುಗಳನ್ನು ಸಂಹರಿಸುತ್ತಾಳೆ ಎಂಬ ನಂಬಿಕೆ ನೂರಾರು ವರ್ಷಗಳಿಂದಲೂ ಇದೆ.
ಇನ್ನು ಈ ದೇವಾಲಯದಲ್ಲಿ ಹಲವು ವಿಧದ ಪೂಜೆಗಳನ್ನು ಮಾಡಲಾಗುತ್ತದೆ. ತ್ರಿಕಾಲ ಪುಷ್ಪಾಂಜಲಿ 15 ರೂ., ರಕ್ತ ಪುಷ್ಪಾಂಜಲಿ ಸೇರಿದಂತೆ ಹಲವು ಪೂಜೆಗಳನ್ನು ಇಲ್ಲಿ ಮಾಡಲಾಗುತ್ತದೆ. ಆದರೆ ಶತ್ರು ಸಂಹಾರ ಪೂಜೆಯೇ ಇಲ್ಲಿ ಮಹತ್ವದ್ದು. ಮಧ್ಯಾಹ್ನ 12 ಗಂಟೆಯಿಂದ ಆರು ಗಂಟೆ ವರೆಗೆ ಈ ಪೂಜೆಗಳನ್ನು ಮಾಡಲಾಗುತ್ತದೆ. ಈ ಪೂಜೆಗಳನ್ನು ಗೌಪ್ಯವಾಗಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಕೇವಲ ಪೂಜೆ ಮಾಡುವವರಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶ ಇರುತ್ತದೆ. ಇಂದು ಅಷ್ಟಮಿ ತಿಥಿಯಾದ ಹಿನ್ನೆಲೆ ಶತ್ರು ಸಂಹಾರ ಪೂಜೆ ಮಾಡಿದರೆ ವಿಶೇಷ ಫಲ ಸಿಗುತ್ತದೆ ಎಂಬ ನಂಬಿಕೆ ಇರುವ ಕಾರಣ ಇದೇ ದಿನ ನಟ ದರ್ಶನ್ ಈ ದೇವಾಲಯಕ್ಕೆ ತೆರಳಿ ಪೂಜೆ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.
ದರ್ಶನ್, ದೇವಾಲಯದಲ್ಲಿ ಪ್ರದಕ್ಷಿಣೆ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ದರ್ಶನ್ ಪುತ್ರ ವಿನೀಶ್, ಧನ್ವೀರ್ ಗೌಡ ಅವರುಗಳು ಪಂಚೆಯುಟ್ಟು, ಅಂಗಿ ಕಳಚಿ ಪ್ರದಕ್ಷಿಣೆ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇತ್ತೀಚೆಗಷ್ಟೆ ರೇಣುಕಾ ಸ್ವಾಮಿ ಕುಟುಂಬದವರು ದೇವಾಲಯವೊಂದರಲ್ಲಿ ವಿಶೇಷ ಪೂಜೆ ಮಾಡಿಸಿದ್ದರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಬೇಡಿಕೊಂಡಿದ್ದರು. ಅದರ ಬೆನ್ನಲ್ಲೆ ನಟ ದರ್ಶನ್ ಶತ್ರು ಸಂಹಾರಕ್ಕೆ ಪೂಜೆ ಮಾಡಿಸಿದ್ದಾರೆ. ದೇವರು ಯಾರ ಮನವಿ ಸ್ವೀಕರಿಸುತ್ತಾರೆಯೋ ನೋಡಬೇಕು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ