ಪಂಚನಾಮೆಯಲ್ಲಿ ಇಲ್ಲದ ರಕ್ತ, ಎಫ್​ಎಸ್​ಎಲ್ ವರದಿಯಲ್ಲಿ ಹೇಗೆ ಬಂತು? ಸಿವಿ ನಾಗೇಶ್ ವಾದ

|

Updated on: Oct 10, 2024 | 5:40 PM

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ಮುಕ್ತಾಯವಾಗಿದೆ. ದರ್ಶನ್ ಪರ ವಕೀಲ ಸಿವಿ ನಾಗೇಶ್ ಇಂದು ತಮ್ಮ ವಾದವನ್ನು ಅಂತ್ಯಗೊಳಿಸಿದ್ದಾರೆ. ದರ್ಶನ್ ಗೆ ಜಾಮೀನು ಕೊಡಿಸಲು ಇಂದು ನಾಗೇಶ್ ಮಾಡಿದ ವಾದದ ಸಾರಾಂಶ ಇಲ್ಲಿದೆ.

ಪಂಚನಾಮೆಯಲ್ಲಿ ಇಲ್ಲದ ರಕ್ತ, ಎಫ್​ಎಸ್​ಎಲ್ ವರದಿಯಲ್ಲಿ ಹೇಗೆ ಬಂತು? ಸಿವಿ ನಾಗೇಶ್ ವಾದ
Follow us on

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು (ಅಕ್ಟೋಬರ್ 10) ಅಂತ್ಯವಾಗಿದೆ. ಕಳೆದೊಂದು ವಾರದಿಂದಲೂ ವಾದ ಪ್ರತಿವಾದ ರೋಚಕವಾಗಿ ನಡೆಯುತ್ತಿದೆ. ದರ್ಶನ್ ಪರ ವಕೀಲ ಸಿವಿ ನಾಗೇಶ್ ಪೊಲೀಸರ ತನಿಖೆಯಲ್ಲಿ ಲೋಪವನ್ನು ಎತ್ತಿಹಿಡಿದು, ಪೊಲೀಸರು ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆ ಎಂದು ವಾದಿಸಿದರು. ಇಂದು ವಾದ ಆರಂಭಿಸಿದ ಸಿವಿ ನಾಗೇಶ್, ಸಾಕ್ಷಿಗಳು, ಆರೋಪಿಗಳು ಒಂದೇ ಕಡೆ ಇದ್ದರು ಎನ್ನಲು ಸಾಕ್ಷಿಯಾಗಿ ನೀಡಲಾಗಿರುವ ಗೂಗಲ್ ನಕ್ಷೆ, ಸಾಕ್ಷಿಯ ಹೇಳಿಕೆಯನ್ನು 13 ದಿನ ತಡವಾಗಿ ದಾಖಲಿಸಿಕೊಂಡಿರುವುದು, ದರ್ಶನ್​ರ ಶೂ ಇನ್ನೂ ಕೆಲವು ವಿಷಯಗಳ ಬಗ್ಗೆ ಪ್ರಮುಖವಾಗಿ ವಾದ ಮಂಡಿಸಿದರು.

ದರ್ಶನ್ ಶೂ ಹಾಗೂ ಪಟ್ಟಣಗೆರೆ ಶೆಡ್​ನಲ್ಲಿ ವಶಪಡಿಸಿಕೊಂಡಿರುವ ಕೆಲವು ವಸ್ತುಗಳ ಮೇಲೆ ರಕ್ತದ ಕಲೆಗಳಿವೆ ಎಂದು ಪೊಲೀಸರ ಆರೋಪವನ್ನು ಅಲ್ಲಗಳೆದ ಸಿವಿ ನಾಗೇಶ್, ‘ಪೊಲೀಸರು ಪಂಚನಾಮೆ ಮಾಡಿದಾಗ ಅಲ್ಲಿದ್ದ ಯಾವ ವಸ್ತುವಿನ ಮೇಲೂ ರಕ್ತದ ಕಲೆ ಇರುವ ಬಗ್ಗೆ ದಾಖಲೆ ಇಲ್ಲ. ಆದರೆ ಎಫ್​ಎಸ್​ಎಲ್ ವರದಿಯಲ್ಲಿ ರಕ್ತದ ಕಲೆ ಪತ್ತೆ ಆಗಿದ್ದು ಹೇಗೆ?’ ಎಂದು ಪ್ರಶ್ನೆ ಮಾಡಿದರು. ದರ್ಶನ್ ಶೂನಲ್ಲಿ ಮಣ್ಣು ಸಂಗ್ರಹಿಸಲಾಗಿದ್ದು ಅದು ಪಟ್ಟಣಗೆರೆ ಶೆಡ್​ನ ಮಣ್ಣು ಎಂದು ವರದಿ ಬಂದಿರುವ ಬಗ್ಗೆ ಮಾತನಾಡಿ, ದರ್ಶನ್ ಅದೇ ಶೇಡ್​ನಲ್ಲಿ ಸಿನಿಮಾ ಶೂಟಿಂಗ್ ಮಾಡಿದ್ದರು. ಹಾಗಾಗಿ ಆಗ ಸೇರಿದ್ದ ಮಣ್ಣು ಅದಿರಬಹುದು ಎಂದರು.

ದರ್ಶನ್​ಗೆ ರೇಣುಕಾ ಸ್ವಾಮಿ ಬಗ್ಗೆ ಮೊದಲೇ ತಿಳಿದಿತ್ತು ಎಂಬ ಆರೋಪದ ಬಗ್ಗೆಯೂ ವಾದ ಮಂಡಿಸಿದ ಸಿವಿ ನಾಗೇಶ್, ದರ್ಶನ್ ಹಾಗೂ ಪವಿತ್ರಾರ ಸಂಬಂಧ ತುಸು ಹದಗೆಟ್ಟಿತ್ತು, ಅವರ ನಡುವೆ ಪವನ್ ಕೊಂಡಿಯಾಗಿದ್ದ. ಪವನ್​ಗೆ ರೇಣುಕಾ ಸ್ವಾಮಿ ಬಗ್ಗೆ ತಿಳಿದಿದ್ದೇ ಜೂನ್ 5 ರಂದು, ಹಾಗಿದ್ದ ಮೇಲೆ ದರ್ಶನ್​ಗೆ ರೇಣುಕಾ ಸ್ವಾಮಿ ಬಗ್ಗೆ ಹೇಗೆ ತಿಳಿಯಲು ಸಾಧ್ಯ? ಹಾಗೂ ಸಾಕ್ಷ್ಯ ಮುಚ್ಚಿ ಹಾಕಲು 40 ಲಕ್ಷ ಹಣ ಇಟ್ಟುಕೊಳ್ಳಲು ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ದರ್ಶನ್ ಅನ್ನು ಸಿಕ್ಕಿಸುವ ಪ್ರಯತ್ನ: ನ್ಯಾಯಾಲಯದಲ್ಲಿ ವಕೀಲರ ವಾದ

ಜೂನ್ 11 ರಂದು ಪಟ್ಟಣಗೆರೆ ಶೆಡ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಅದಕ್ಕೆ ಜೂನ್ 12 ರಂದು ಪ್ರವೇಶ ಮಾಡಿದ್ದಾರೆ ಅದೇಕೆ? ನನ್ನ ಪ್ರಕಾರ ಜೂನ್ 09 ರಂದೇ ಪಟ್ಟಣಗೆರೆ ಶೆಡ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮೂರು ದಿನಗಳ ಕಾಲ ತಡವಾಗಿ ಶೆಡ್​ಗೆ ಹೋಗಿ ವಸ್ತುಗಳನ್ನು ರಿಕವರಿ ಮಾಡಿದ್ದು ಏಕೆ? ಮರದ ಕೊಂಬೆಗಳ ಮೇಲಿದ್ದ ರಕ್ತದ ಕಲೆ ಅಳಿಸಿ ಹೋಗಿದ್ದು ಏಕೆ? ಈ ವಿಷಯಗಳಿಗೆ ಎಸ್​ಪಿಪಿ ಬಳಿ ಉತ್ತರವಿಲ್ಲ ಇನ್ನು ಶೆಡ್​ನಲ್ಲಿ ಸಂಗ್ರಹಿಸಿದ 96 ವಸ್ತುಗಳ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದಿದ್ದಾರೆ ನಾಗೇಶ್.

ದೇಹದ ಪಂಚನಾಮೆ ನಡೆಸಿದಾಗ ವೃಷಣದಲ್ಲಿ ಆಗಿರುವ ಗಾಯದ ಬಗ್ಗೆ ಉಲ್ಲೇಖ ಆಗಿಲ್ಲ. ದೇಹದಲ್ಲಿ ಆಗಿರುವ ಬೇರೆ ಬೇರೆ ಗಾಯದ ಬಗ್ಗೆ ಉಲ್ಲೇಖಗಳಿವೆ. ಬಲತೊಡೆಯ ಕೆಳಭಾಗದಲ್ಲಿ ರಕ್ತ ಹೆಪ್ಪುಗಟ್ಟಿದ ಗಾಯ ಇದೆ ಎಂದಿದೆ. ವೃಷ್ಣ ತೊಡೆಯ ಕೆಳಭಾಗದಲ್ಲಿ ಇರುತ್ತದೆಯೇ? ಎಂದು ಸಿವಿ ನಾಗೇಶ್ ಪ್ರಶ್ನೆ ಮಾಡಿದರು. ಎಸ್​ಪಿಪಿ ಪ್ರಸನ್ನ ಕುಮಾರ್ ಅವರು, ಇದು ರಕ್ತಚರಿತ್ರೆ ಎಂದಿದ್ದಾರೆ. ಪಂಚನಾಮೆಯಲ್ಲಿ ರಕ್ತವೇ ಸಿಕ್ಕಿಲ್ಲ ಹಾಗಿದ್ದ ಮೇಲೆ ಇದು ರಕ್ತಚರಿತ್ರೆ ಹೇಗಾಗುತ್ತದೆ’ ಎಂದು ಪ್ರಶ್ನೆ ಮಾಡಿದ್ದಾರೆ.

ದರ್ಶನ್​ಗೆ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅವರನ್ನು ನಂಬಿ ಕೆಲವು ನಿರ್ಮಾಪಕರು ಕೋಟ್ಯಂತರ ಹಣ ಹೂಡಿದ್ದಾರೆ. ಅವರು ಸಿನಿಮಾ ಮಾಡಿದರೆ 500 ಕುಟುಂಬಗಳಿಗೆ ಅನ್ನಕ್ಕೆ ದಾರಿಯಾಗುತ್ತದೆ. ಇದೆಲ್ಲ ಕಾರಣಗಳನ್ನು ಪರಿಗಣಿಸಿ ದರ್ಶನ್​ಗೆ ಜಾಮೀನು ಮಂಜೂರು ಮಾಡಬೇಕು ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ