Deadly 3: ‘ಡೆಡ್ಲಿ 3’ ಸಿನಿಮಾ ಶುರುಮಾಡಿದ ರವಿ ಶ್ರೀವತ್ಸ; ಆದರೆ ಈ ಬಾರಿ ಆದಿತ್ಯ ಹೀರೋ ಅಲ್ಲ
Deadly Soma: ನಮ್ಮ ಹೀರೋ 6.2 ಅಡಿ ಇದ್ದಾನೆ. ಬಾಲ್ಯದಿಂದಲೂ ಹೀರೋ ಆಗಬೇಕು ಎಂಬ ಕನಸು ಕಂಡಿದ್ದಾನೆ. ನಟನೆಯನ್ನು ಮೈಗೂಡಿಸಿಕೊಂಡು ಬೆಳೆದಿದ್ದಾನೆ ಎಂದು ಹೊಸ ಹೀರೋ ದೀಕ್ಷಿತ್ ಬಗ್ಗೆ ರವಿ ಶ್ರೀವತ್ಸ ಮಾಹಿತಿ ನೀಡಿದ್ದಾರೆ.
2005ರಲ್ಲಿ ‘ಡೆಡ್ಲಿ ಸೋಮ’ ಸಿನಿಮಾ ಸೂಪರ್ ಹಿಟ್ ಆಯಿತು. ನಟ ಆದಿತ್ಯ ಅವರಿಗೆ ಆ ಚಿತ್ರದಿಂದ ದೊಡ್ಡ ಯಶಸ್ಸು ಸಿಕ್ಕಿತು. ನಿರ್ದೇಶಕ ರವಿ ಶ್ರೀವತ್ಸ ಅವರು ಗಾಂಧಿನಗರದಲ್ಲಿ ಭರವಸೆಯ ನಿರ್ದೇಶಕ ಎನಿಸಿಕೊಂಡರು. ರಿಯಲ್ ಲೈಫ್ ಭೂಗತ ಲೋಕದ ಕಥೆಯನ್ನು ಹೊಂದಿದ್ದ ಆ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ನಂತರ 2010ರಲ್ಲಿ ಈ ಚಿತ್ರಕ್ಕೆ ಸೀಕ್ವೆಲ್ ಮಾಡಲಾಯಿತು. ‘ಡೆಡ್ಲಿ 2’ ಹೆಸರಲ್ಲಿ ಆ ಸಿನಿಮಾ ಮೂಡಿಬಂತು. ಅದಕ್ಕೂ ರವಿ ಶ್ರೀವತ್ಸ ನಿರ್ದೇಶನ ಮಾಡಿದ್ದರು. ನಾಯಕನಾಗಿ ಆದಿತ್ಯ ಮುಂದುವರಿದಿದ್ದರು. ಈಗ ‘ಡೆಡ್ಲಿ 3’ ಸಿನಿಮಾ ಘೋಷಣೆ ಆಗಿದೆ. ಮತ್ತೆ ರವಿ ಶ್ರೀವತ್ಸ ನಿರ್ದೇಶನ ಮಾಡಲಿದ್ದಾರೆ. ಆದರೆ ಆ ಬಾರಿ ಆದಿತ್ಯ ಹೀರೋ ಅಲ್ಲ!
ಈ ಬಗ್ಗೆ ಸ್ವತಃ ರವಿ ಶ್ರೀವತ್ಸ ಮಾಹಿತಿ ನೀಡಿದ್ದಾರೆ. ಹೊಸ ಹೀರೋ ಎಂಆರ್ ದೀಕ್ಷಿತ್ ‘ಡೆಡ್ಲಿ 3’ ಸಿನಿಮಾದಲ್ಲಿ ನಟಿಸಲಿದ್ದಾರೆ. ಯಾರು ಈ ದೀಕ್ಷಿತ್? ‘ಡೆಡ್ಲಿ ಸೋಮ’ ಸಿನಿಮಾಗೆ ಬಂಡವಾಳ ಹೂಡಿದ್ದ ಶೋಭಾ ರಾಜಣ್ಣ ಅವರ ಪುತ್ರ. ‘ಡೆಡ್ಲಿ ಸೋಮ’ ಚಿತ್ರದಲ್ಲಿ ಸೋಮನ ಬಾಲ್ಯದ ಪಾತ್ರವನ್ನು ಮಾಡಿದ್ದು ಇದೇ ದೀಕ್ಷಿತ್. ಈಗ ‘ಡೆಡ್ಲಿ 3’ ಚಿತ್ರಕ್ಕೆ ದೀಕ್ಷಿತ್ ಹೀರೋ. ಮೇ 31ರಂದು ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಈ ಸುದ್ದಿಯನ್ನು ರವಿ ಶ್ರೀವತ್ಸ ಬಹಿರಂಗಪಡಿಸಿದ್ದಾರೆ.
‘ನಮ್ಮ ಹೀರೋ 6.2 ಅಡಿ ಇದ್ದಾನೆ. ಬಾಲ್ಯದಿಂದಲೂ ಹೀರೋ ಆಗಬೇಕು ಎಂಬ ಕನಸು ಕಂಡಿದ್ದಾನೆ. ನಟನೆಯನ್ನು ಮೈಗೂಡಿಸಿಕೊಂಡು ಬೆಳೆದಿದ್ದಾನೆ. ಡ್ಯಾನ್ಸ್, ಫೈಟ್, ನಟನೆಯ ಕ್ಲಾಸ್ಗಳಿಗೆ ತೆರಳಿ ಎಲ್ಲವನ್ನೂ ಕಲಿತಿದ್ದಾನೆ. ಸಿನಿಮಾದಲ್ಲಿ ಏನಾದರೂ ಮಾಡಬೇಕು ಎಂಬ ಆಸೆ ಅವನಿಗೆ ಇದೆ. ‘ಟೈಗರ್ ಗಲ್ಲಿ’ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರ ಕೊಟ್ಟಿದ್ದೆ. ಅವನು ಹೀರೋ ಆಗಿ ಬೆಳೆಯುತ್ತಾನೆ ಎಂದು ಭರವಸೆ ಆಗಲೇ ನನಗೆ ಮೂಡಿತ್ತು’ ಎಂದು ರವಿಶ್ರೀವತ್ಸ ಹೇಳಿದ್ದಾರೆ.
‘ದೀಕ್ಷಿತ್ನನ್ನು ಹೀರೋ ಆಗಿ ಆಯ್ಕೆ ಮಾಡಿದ್ದಕ್ಕೆ ಎಷ್ಟೋ ಜನರು ನಮ್ಮನ್ನು ಹಂಗಿಸಿದರು. ಇವನು ಹೀರೋನಾ ಅಂತ ಕೇಳಿದರು. ಆದರೆ ಮುಂದೊಂದು ದಿನ ಎಲ್ಲರೂ ಗೌರವ ಕೊಡುವಂತಹ ವ್ಯಕ್ತಿಯಾಗಿ ಇವನು ಬೆಳೆದು ನಿಲ್ಲುತ್ತಾನೆ’ ಎಂದು ಭರವಸೆಯ ಮಾತುಗಳನ್ನು ರವಿ ಶ್ರೀವತ್ಸ ಹೇಳಿದ್ದಾರೆ. ಚಿತ್ರದಲ್ಲಿ ಬೇರೆ ಯಾವೆಲ್ಲ ಕಲಾವಿದರು ಇರಲಿದ್ದಾರೆ? ತಂತ್ರಜ್ಞರು ಯಾರು ಎಂಬಿತ್ಯಾದಿ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.
ಇದನ್ನೂ ಓದಿ:
‘ಮುಂದುವರೆದ ಅಧ್ಯಾಯ’ ಸಿನಿಮಾಗೆ ಯುಟ್ಯೂಬ್ ಗಳಲ್ಲಿ ಕೆಟ್ಟ ವಿಮರ್ಶೆ: ನಟ ಆದಿತ್ಯ ಆಕ್ರೋಶ
ಸುದೀಪ್ಗೆ ಅಚ್ಚರಿ ಮೂಡಿಸಿದ ‘ವಿಕ್ರಾಂತ್ ರೋಣ’ ಪೋಸ್ಟರ್; ಚಿತ್ರತಂಡಕ್ಕೂ ಇದಕ್ಕೂ ಸಂಬಂಧವಿಲ್ಲ