ರಾಜ್ಕುಮಾರ್ ಮೊಮ್ಮಗಳು ಧನ್ಯಾ ರಾಮ್ಕುಮಾರ್ ಮತ್ತು ಸೂರಜ್ ಗೌಡ ಜೋಡಿಯಾಗಿ ನಟಿಸಿರುವ ‘ನಿನ್ನ ಸನಿಹಕೆ’ ಚಿತ್ರ ಟ್ರೇಲರ್ ಮೂಲಕವೇ ಭರವಸೆ ಮೂಡಿಸಿದೆ. ಹೊಸ ತಲೆಮಾರಿನ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ತಯಾರಾದಂತಿದೆ. ನಾಯಕನಾಗಿ ನಟಿಸುವುದರ ಜೊತೆ ನಿರ್ದೇಶಕನಾಗಿಯೂ ಸೂರಜ್ ಗೌಡ ಕೆಲಸ ಮಾಡಿದ್ದಾರೆ. ಲಿವ್-ಇನ್-ರಿಲೇಷನ್ಶಿಪ್ ಕುರಿತ ಕಥೆ ಈ ಚಿತ್ರದಲ್ಲಿದೆ. ಅ.8ರಂದು ರಾಜ್ಯಾದ್ಯಂತ ‘ನಿನ್ನ ಸನಿಹಕೆ’ ಬಿಡುಗಡೆ ಆಗಲಿದ್ದು, ಜನರ ಪ್ರತಿಕ್ರಿಯೆ ಪಡೆಯಲು ಚಿತ್ರತಂಡ ಕಾಯುತ್ತಿದೆ. ಅಕ್ಷಯ್ ರಾಜಶೇಖರ್, ರಂಗನಾಥ್ ಕೂಡ್ಲಿ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ತಮ್ಮ ಕೆಲಸದ ಬಗ್ಗೆ ಸೂರಜ್ ಗೌಡ ಆತ್ಮವಿಶ್ವಾಸ ಇಟ್ಟುಕೊಂಡಿದ್ದಾರೆ. ‘ಇದು ನಮ್ಮೆಲ್ಲರ ಕನಸು. ಸಿನಿಮಾ ಶುರು ಮಾಡಿದಾಗಿನಿಂದಲೂ ಇದು ಡಿಫರೆಂಟ್ ಆಗಿ ಮೂಡಿಬರಬೇಕು ಅಂದುಕೊಂಡಿದ್ವಿ. ಅದು ಈಡೇರಿದೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ಈಗಿನ ಕಾಲದಲ್ಲಿ ಪ್ರೀತಿಯನ್ನು ನಾವು ಹೇಗೆ ಗ್ರಹಿಸುತ್ತೇವೆ ಎಂಬುದನ್ನು ಇದರಲ್ಲಿ ತೋರಿಸಿದ್ದೇವೆ. ಲಿವ್-ಇನ್-ರಿಲೇಷನ್ಶಿಪ್ ಬಗ್ಗೆ ಈ ಚಿತ್ರದ ಕಥೆ ಇದೆ ಎಂಬುದು ಟ್ರೇಲರ್ ನೋಡಿದರೆ ಗೊತ್ತಾಗುತ್ತದೆ. ಲಿವ್-ಇನ್-ರಿಲೇಷನ್ಶಿಪ್ಗೆ ಕಾನೂನಿನ ಸಮ್ಮತಿ ಇದ್ದರೂ ಕೂಡ ಅದನ್ನು ನಮ್ಮ ಸಮಾಜ ಒಪ್ಪಿಕೊಂಡಿಲ್ಲ. ಅದನ್ನು ಕಾಮಿಡಿ ಮೂಲಕ ಹೇಳುತ್ತಿದ್ದೇವೆ’ ಎಂದಿದ್ದಾರೆ ಸೂರಜ್.
ತಮ್ಮ ಮೊದಲ ಸಿನಿಮಾದ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿರುವ ಧನ್ಯಾ ರಾಮ್ಕುಮಾರ್ ಅವರು ಈ ಚಿತ್ರದಲ್ಲಿ ಅಮೃತಾ ಎಂಬ ದಂತ ವೈದ್ಯೆಯ ಪಾತ್ರ ಮಾಡಿದ್ದಾರೆ. ‘ನೇರ ನಡೆ-ನುಡಿ ಇರುವಂಥ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ನನ್ನ ರಿಯಲ್ ಲೈಫ್ ವ್ಯಕ್ತಿತ್ವಕ್ಕೂ ಈ ಗುಣ ಮ್ಯಾಚ್ ಆಗುತ್ತದೆ. ಹಾಗಾಗಿ ಈ ಪಾತ್ರ ನಿಭಾಯಿಸುವುದು ಸುಲಭ ಆಯಿತು’ ಎಂದಿದ್ದಾರೆ ಧನ್ಯಾ.
ಈ ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡುಗಳು ಹಿಟ್ ಆಗಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ‘ಒಂದು ವರ್ಷದಿಂದಲೂ ಒಂದೊಂದೇ ಹಾಡುಗಳನ್ನು ರಿಲೀಸ್ ಮಾಡುತ್ತ ಬಂದಿದ್ದೇವೆ. ಶುದ್ಧ ಕನ್ನಡದಲ್ಲಿ ಹಾಡುಗಳನ್ನು ರಚಿಸಲಾಗಿದೆ. ಸಾಂಗ್ಸ್ ಹಿಟ್ ಆಗಲು ವಾಸುಕಿ ವೈಭವ್ ಅವರ ಸಾಹಿತ್ಯ ಕಾರಣ. ಎಲ್ಲ 8 ಗೀತೆಗಳಿಗೆ ಅವರು ಸಾಹಿತ್ಯ ಬರೆದಿದ್ದಾರೆ. ಗಾಯಕರು ಮತ್ತು ನನ್ನ ಇಡೀ ತಂಡಕ್ಕೆ ಕ್ರೆಡಿಟ್ ಸಲ್ಲುತ್ತದೆ. ಸ್ಫೂರ್ತಿ ನೀಡುವಂತ ಕಥೆ ಮತ್ತು ನಿರ್ದೇಶಕರು ಇರುವಾಗ ಹಿನ್ನೆಲೆ ಸಂಗೀತಕ್ಕೆ ಕೆಲಸ ಮಾಡುವುದು ಕೂಡ ಆನಂದ ನೀಡುತ್ತದೆ’ ಎಂಬುದು ರಘು ದೀಕ್ಷಿತ್ ಮಾತುಗಳು.
ಇದನ್ನೂ ಓದಿ:
‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್; ಧನ್ಯಾ ರಾಮ್ಕುಮಾರ್-ಸೂರಜ್ಗೆ ತಲೈವಾ ಬೆಂಬಲ
‘ಎಲ್ಲರಿಗೂ ಇಂಥ ಆಸೆ ಇರುತ್ತೆ, ನಂಗೆ ಇರಲ್ವಾ?’ ವಜ್ರೇಶ್ವರಿ ಕಂಬೈನ್ಸ್ ಬಗ್ಗೆ ಡಾ. ರಾಜ್ ಮೊಮ್ಮಗಳ ಮನದ ಮಾತು