ಕನ್ನಡ ಚಿತ್ರರಂಗಕ್ಕೆ (Sandalwood) ಕೆಲ ಹೊಸ ತಂಡಗಳು ಬರುತ್ತಲೇ ಇವೆ. ಹೊಸ ತಂಡಗಳಿಗೆ ಅನುಭವಿಗಳು, ಸ್ಟಾರ್ ನಟ, ನಟಿಯರು ಬೆಂಬಲಿಸುವ ಪರಿಪಾಠ ಮುಂಚೆಗಿಂತಲೂ ಇತ್ತೀಚೆಗೆ ಹೆಚ್ಚಾಗಿದೆ. ಇದೀಗ ಅಂಥಹುದೇ ಒಂದು ತಂಡ ‘ಸಿ’ ಎಂಬ ಭಿನ್ನ ಹೆಸರಿನ್ನಿರಿಸಿ ಸಿನಿಮಾ ಮಾಡಿ ಬಿಡುಗಡೆಗೆ ಸಜ್ಜಾಗಿದೆ. ಈ ಹೊಸ ಪ್ರಯತ್ನಕ್ಕೆ ನಟ ಧ್ರುವ ಸರ್ಜಾ ಬೆಂಬಲ ನೀಡುತ್ತಿದ್ದಾರೆ. ‘ಸಿ’ ಸಿನಿಮಾದ ಪೋಸ್ಟರ್ ಅನ್ನು ಧ್ರುವ ಸರ್ಜಾ ಬಿಡುಗಡೆ ಮಾಡಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಕನ್ನಡದಲ್ಲಿ ಶ್, ಸೈ, ಎ, ಓಂ, ಜೆಡ್, ಹೀಗೆ ಒಂದೇ ಅಕ್ಷರದ ಹೆಸರಿನ ಸಿನಿಮಾಗಳು ಕೆಲವೆಲ್ಲ ಈಗಾಗಲೇ ಬಂದಿವೆ. ಇದೀಗ ಅದೇ ಸಾಲಿಗೆ ‘ಸಿ’ ಎನ್ನುವ ಮತ್ತೊಂದು ಸಿನಿಮಾ ಸೇರಿಕೊಳ್ಳುತ್ತಿದೆ. ಇಲ್ಲಿ ‘ಸಿ’ ಎಂದರೆ ಇಂಗ್ಲೀಷ್ನ ನೋಡು ಎಂತಹಾ ಅಥವಾ ಸಮುದ್ರ ಎಂಬ ಅರ್ಥವೋ ಅಲ್ಲ. ಬದಲಿಗೆ ‘ಸಿ’ ಎಂದರೆ ಕ್ರೈಂ. ಹಾಗೆಂದು ಇದು ಅಪರಾಧದ ಬಗೆಗಿನ ಸಿನಿಮಾ ಅಲ್ಲ ಇದು ಅಪ್ಪ-ಮಗಳ ನಡುವಿನ ಬಾಂಧವ್ಯದ ಕತೆ.
ಕಿರಣ್ ಸುಬ್ರಮಣಿ ನಿರ್ದೇಶಿಸಿರುವುದ ಮೊದಲ ಸಿನಿಮಾ ‘ಸಿ’. ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಸಿನಿಮಾದ ಪ್ರಚಾರ ಚಾಲ್ತಿಯಲ್ಲಿದೆ. ಪ್ರಸ್ತುತ ಲೋಕಸಭೆ ಚುನಾವಣೆ ಬಿಸಿ ಹೆಚ್ಚಿರುವ ಕಾರಣ ಚುನಾವಣೆ ಬಿಸಿ ಕಡಿಮೆಯಾದ ಬಳಿಕ ಈ ಸಿನಿಮಾ ಬಿಡುಗಡೆ ಆಗಲಿದೆ. ‘ಸಿ’ ಸಿನಿಮಾ ಇದೀಗ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ‘ಸಿ’ ಸಿನಿಮಾದ ಅಪ್ಪ ಮಗಳ ಬಾಂಧವ್ಯದ ಹಾಡು ಬಿಡುಗಡೆ ಆಗಿದ್ದು, ಗಮನ ಸೆಳೆಯುತ್ತಿದೆ. ಕಿರಣ್ ಸುಬ್ರಮಣಿ ಸಿನಿಮಾದ ನಿರ್ದೇಶನ ಮಾಡಿರುವ ಜೊತೆಗೆ ನಾಯಕ ನಟನಾಗಿಯೂ ಮಿಂಚಿದ್ದಾರೆ. ಅಪ್ಪ ಮಗಳ ಬಾಂಧವ್ಯದ ಹಾಡಿನಲ್ಲಿ ಕಿರಣ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:‘ದ ಸೂಟ್’ ಸಿನಿಮಾದ ಟ್ರೇಲರ್ ನೋಡಿ ವಿಶ್ ಮಾಡಿದ ಧ್ರುವ ಸರ್ಜಾ
ಸಿನಿಮಾದ ಹೊಸ ಹಾಡನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಇದೀಗ ಬಿಡುಗಡೆ ಆಗಿರುವ ‘ಕಂದಾ… ಕಂದಾ’ ಹಾಡನ್ನು ಹೃದಯ ಶಿವ ಬರೆದಿದ್ದು, ಗಾಯಕ ವಾಸುಕಿ ವೈಭವ್ ಹಾಡಿದ್ದಾರೆ. ಹಾಡು ಕೇಳಿದ ಧ್ರುವ ಸರ್ಜಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವತಃ ಮುದ್ದು ಮಗಳೊಟ್ಟಿಗೆ ಸಮಯ ಕಳೆಯುತ್ತಿರುವ ಧ್ರುವ ಸರ್ಜಾಗೆ ಸಹಜವಾಗಿಯೇ ಹಾಡು ಹೆಚ್ಚು ಆಪ್ತ ಎನಿಸಿದೆ.
‘ಸಿ’ ಸಿನಿಮಾದ ನಿರ್ದೇಶಕ, ನಾಯಕ ಕಿರಣ್ ಅವರಿಗೆ ಇದು ಮೊದಲ ಸಿನಿಮಾ. ಹಾಗೆಂದು ಅವರಿಗೆ ಸಿನಿಮಾರಂಗ ಹೊಸದೇನಲ್ಲ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಇದೀಗ ‘ಸಿ’ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವತಂತ್ರ್ಯ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ. ‘ಸಿ’ ಸಿನಿಮಾ ತಂದೆ- ಮಗಳ ಬಾಂಧವ್ಯದ ಜೊತೆಗೆ ಮೆಡಿಕಲ್ ಮಾಫಿಯಾದ ಕರಾಳ ಮುಖವನ್ನು ಅನಾವರಣ ಮಾಡುವ ಕತೆಯನ್ನು ಒಳಗೊಂಡಿದೆ. ಎಜಿಎಸ್ ಪ್ರೊಡಕ್ಷನ್ ಅಡಿ ನಿರ್ದೇಶಕ, ನಾಯಕ ಕಿರಣ್ ಅವರ ತಂದೆ ಸುಬ್ರಮಣಿ ಅವರು ‘ಸಿ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗಾಲೇ ಹಾಡಿನ ಮೂಲಕ ಗಮನ ಸೆಳೆಯುತ್ತಿರುವ ಸಿ ಸಿನಿಮಾ ಶೀಘ್ರವೇ ರಿಲೀಸ್ ಆಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:29 am, Fri, 17 May 24