ಪಾರ್ಟಿಯಿಂದ ಪ್ರಾರಂಭವಾಯ್ತು ‘ಎ’ ಸಿನಿಮಾ, ಜರ್ನಿ ನೆನಪಿಸಿಕೊಂಡ ನಿರ್ಮಾಪಕ
‘ಎ’ ಕನ್ನಡ ಸಿನಿಮಾ ಇಂದು (ಮೇ 17) ಮರು ಬಿಡುಗಡೆ ಆಗಿದೆ. ‘ಎ’ ಸಿನಿಮಾ ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ‘ಎ’ ಸಿನಿಮಾ ಪ್ರಾರಂಭವಾಗಿದ್ದು ವಿಶೇಷ ಸನ್ನಿವೇಶದಲ್ಲಿ. ‘ಎ’ ಸಿನಿಮಾದ ಜರ್ನಿಯನ್ನು ನಿರ್ಮಾಪಕ ಮಂಜುನಾಥ್ ನೆನಪು ಮಾಡಿಕೊಂಡಿದ್ದಾರೆ.
ಉಪೇಂದ್ರ (Upendra) ಮೊದಲ ಬಾರಿ ನಾಯಕ ನಟನಾಗಿ ನಟಿಸಿ, ನಿರ್ದೇಶನವೂ ಮಾಡಿದ್ದ ‘ಎ’ ಸಿನಿಮಾ 26 ವರ್ಷಗಳ ಬಳಿಕ ಇಂದು (ಮೇ 17) ಸಿನಿಮಾ ಮರು ಬಿಡುಗಡೆ ಆಗಿದೆ. ‘ಎ’ ಸಿನಿಮಾ ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು. ಆ ಕಾಲಘಟ್ಟದಲ್ಲಿ ಬರುತ್ತಿದ್ದ ಸಿನಿಮಾಗಳಿಗೆ ಹೋಲಿಸಿದರೆ ಕತೆ, ನಿರೂಪಣೆ ಎಲ್ಲದರಲ್ಲೂ ಸಂಪೂರ್ಣ ಭಿನ್ನವಾಗಿತ್ತು ‘ಎ’. ಸಿನಿಮಾ ಬಿಡುಗಡೆ ಆದಾಗ ನಿರ್ದೇಶಕ ಉಪೇಂದ್ರ ಅವರ ಬುದ್ಧಿವಂತಿಕೆಗೆ ಹೌಹಾರಿದ್ದರು. ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿತ್ತು. ಅಂದಹಾಗೆ ಈ ಸಿನಿಮಾ ಸುಲಭಕ್ಕೆ ಆಗಿದ್ದಲ್ಲ, ಹಲವು ಸಮಸ್ಯೆಗಳು ಸಿನಿಮಾ ಶುರುವಾಗುವ ಮುನ್ನ ಎದುರಾಗಿದ್ದವು. ಸಿನಿಮಾ ಮಾಡಬೇಕೆಂಬ ಆಲೋಚನೆ ಮೂಡಿದ್ದು ಸಹ ವಿಶೇಷ ಸಂದರ್ಭದಲ್ಲಿ!
‘ಎ’ ಸಿನಿಮಾದ ನಿರ್ಮಾಪಕ ಮಂಜುನಾಥ್ ಉರ್ಫ್ ಸಿಲ್ಕ್ ಮಂಜು ಅವರಿಗೆ ಚಿತ್ರರಂಗದ ಗಂಧ-ಗಾಳಿ ಇರಲಿಲ್ಲ. ಆದರೆ ತಮ್ಮ ಬಟ್ಟೆ ಉದ್ಯಮದಲ್ಲಿ ಉತ್ತಮ ಲಾಭ ಪಡೆದು ಸ್ಥಿತಿವಂತರಾಗಿದ್ದ ಮಂಜು ಅವರು, ಒಮ್ಮೆ ಕೆಲವು ಗೆಳೆಯರ ಜೊತೆಗೆ ಸೇರಿಕೊಂಡು ಶ್ರೀರಂಗಪಟ್ಟಣದ ರೆಸಾರ್ಟ್ ಒಂದಕ್ಕೆ ಪಾರ್ಟಿಗೆ ಹೋಗಿದ್ದರಂತೆ. ಅಲ್ಲಿ ಅವರಿಗೆ ಉಪೇಂದ್ರ ಸಿಕ್ಕಿದ್ದಾರೆ. ಅದಾಗಲೇ ನಿರ್ದೇಶಕರಾಗಿದ್ದ ಉಪೇಂದ್ರ ಶಿವರಾಜ್ ಕುಮಾರ್ ಅವರಿಗಾಗಿ ಕತೆ ಮಾಡುವ ಕಾರಣಕ್ಕೆ ಕೆಲವು ಗೆಳೆಯರನ್ನು ಕರೆದುಕೊಂಡು ರೆಸಾರ್ಟ್ಗೆ ಬಂದು ವಾಸ್ತವ್ಯ ಹೂಡಿದ್ದರಂತೆ. ಅಲ್ಲಿ ಉಪೇಂದ್ರ ಅವರ ಪರಿಚಯ ಮಂಜುನಾಥ್ ಅವರಿಗೆ ಆಗಿ, ಹೀಗೆ ಮಾತನಾಡುತ್ತಾ ನಾವು ಸಿನಿಮಾ ಮಾಡೋಣ ಎಂದರಂತೆ.
ಅದಾದ ಬಳಿಕ ಎರಡು ಮೂರು ತಿಂಗಳು ಈ ವಿಷಯವನ್ನು ಮಂಜುನಾಥ್ ಹಾಗೂ ಉಪೇಂದ್ರ ಇಬ್ಬರೂ ಮರೆತಿದ್ದಾರೆ. ಅದಾದ ಬಳಿಕ ಮಂಜುನಾಥ್ ಅವರ ಗೆಳೆಯರೊಬ್ಬರು ಸಿನಿಮಾ ಮಾಡುವ ವಿಷಯ ಪ್ರಸ್ತಾಪಿಸಿದ್ದಾರೆ. ಆ ಗೆಳೆಯನಿಗೆ ಚಿತ್ರರಂಗದ ಅಲ್ಪ-ಸ್ವಲ್ಪ ನಂಟಿತ್ತಂತೆ. ಆಗ ಮಂಜುನಾಥ್ ಅವರಿಗೆ ಉಪೇಂದ್ರ ನೆನಪಾಗಿದೆ. ಆದರೆ ಅವರನ್ನು ಸಂಪರ್ಕ ಮಾಡಲು ದೂರವಾಣಿ ಸಂಖ್ಯೆ ಇರಲಿಲ್ಲವಂತೆ. ಆಗ ಮಂಜುನಾಥ್ ಅವರು ಗೆಳೆಯರೊಬ್ಬರ ಮೂಲಕ ಕ್ಯಾಮೆರಾಮನ್ ಸುವರ್ಣ ಅವರನ್ನು ಭೇಟಿಯಾಗಿ ಉಪೇಂದ್ರ ಬಗ್ಗೆ ವಿಚಾರಿಸಿದಾಗ ಅವರು ಮಂಜುನಾಥ್ ಅವರನ್ನು ಹನುಮಂತನಗರದಲ್ಲಿದ್ದ ಉಪೇಂದ್ರ ಅವರ ಕಚೇರಿಗೆ ಕರೆದುಕೊಂಡು ಹೋದರಂತೆ.
ಇದನ್ನೂ ಓದಿ:‘ಎ’ ಸಿನಿಮಾ ಟೈಟಲ್ ನೋಡಿ ಅಡಲ್ಟ್ ಓನ್ಲಿ ಆಗಿಬಿಡುತ್ತದೆ ಎಂದಿದ್ದ ಉಪೇಂದ್ರ ಆಪ್ತರು
ಆಗ ಸಿನಿಮಾ ಮಾಡುವ ಮಾತುಕತೆ ಆಯಿತಾದರೂ ಆಗ ತೆಲುಗಿನಿಂದ ಬಂದಿದ್ದ ರಾಜಶೇಖರ್, ಉಪೇಂದ್ರ ಅವರನ್ನು ‘ಓಂ’ ಸಿನಿಮಾದ ತೆಲುಗು ರೀಮೇಕ್ಗೆ ಕರೆದುಕೊಂಡು ಹೋಗಿಬಿಟ್ಟರಂತೆ. ಅಲ್ಲಿಂದ ಮರಳಿ ಬಂದ ಮೇಲೆ ಶಿವರಾಜ್ ಕುಮಾರ್ ಅವರಿಗಾಗಿ ಇನ್ನೊಂದು ಸಿನಿಮಾ ಮಾಡಲು ಉಪೇಂದ್ರ ಯತ್ನಿಸಿದರಾದರೂ ಆಗ ಶಿವಣ್ಣ ಬ್ಯುಸಿಯಾಗಿದ್ದರಂತೆ. ಆಗ ಮಂಜುನಾಥ್, ಹೇಗೋ ನಿಮ್ಮ ಬಳಿ ಇನ್ನೊಂದು ಕತೆ ಇದೆ, ಅದರಲ್ಲಿ ನಾಯಕ ಸಿನಿಮಾ ನಿರ್ದೇಶಕ, ಹಾಗಾಗಿ ನೀವೇ ಯಾಕೆ ನಾಯಕ ಆಗಬಾರದು ಎಂದರಂತೆ. ಆರಂಭದಲ್ಲಿ ಉಪೇಂದ್ರ ಇದಕ್ಕೆ ಒಪ್ಪಿರಲಿಲ್ಲ. ಆದರೆ ಮಂಜುನಾಥ್ ಹಾಗೂ ಇನ್ನೂ ಕೆಲವರು ಒತ್ತಾಯ ಮಾಡಿದಾಗ ಉಪೇಂದ್ರ ಓಕೆ ಹೇಳಿ ಸಿನಿಮಾ ಪ್ರಾರಂಭವಾಯ್ತಂತೆ. ಮುಹೂರ್ತ ಊರ್ವಶಿ ಥಿಯೇಟರ್ನಲ್ಲಿ ನಡೆದು, ಅತಿಥಿಯಾಗಿ ತಮಿಳಿನ ನಿರ್ದೇಶಕ ಮಣಿರತ್ನಂ ಕ್ಲ್ಯಾಪ್ ಮಾಡಿದ್ದರು ಎಂದು ಮಂಜುನಾಥ್ ಕಲಾಮಾಧ್ಯಮದ ಸಂದರ್ಶನದಲ್ಲಿ ನೆನಪು ಮಾಡಿಕೊಂಡಿದ್ದಾರೆ.
‘‘ಎ’ ಸಿನಿಮಾದ ಕತೆ ಉಪೇಂದ್ರಗೆ ಬಿಟ್ಟರೆ ಇನ್ಯಾರಿಗೂ ಗೊತ್ತಿರಲಿಲ್ಲ, ನಾನು ನಿರ್ಮಾಪಕನಾದರೂ ಕತೆಯನ್ನು ಅವರು ಹೇಳಿರಲಿಲ್ಲ. ನಾವು ಚೆನ್ನಾಗಿ ಒಡನಾಡಿದ್ದರಿಂದ ಅವರ ಮೇಲೆ ನನಗೆ ವಿಪರೀತ ನಂಬಿಕೆ ಇತ್ತು. ಹಾಗಾಗಿ ಅವರನ್ನು ಅವರ ಪಾಡಿಗೆ ಬಿಟ್ಟೆ. ಆರಂಭದಲ್ಲಿ 50 ಲಕ್ಷ ಎಂದುಕೊಂಡೆವು ಅದು 1.20 ಕೋಟಿ ಆಯ್ತು. ಎಲ್ಲೆಲ್ಲಿಂದಲೋ ಫೈನ್ಯಾನ್ಸ್ ತಂದು ಬಂಡವಾಳ ಹಾಕಿದೆವು. ಫೈನ್ಯಾನ್ಸ್ ತರುವ ಕಾರ್ಯದಲ್ಲಿ ಉಪೇಂದ್ರ ಸಹ ಸಹಾಯ ಮಾಡಿದರು. ಅವರು ಸಹ ಷೂರಿಟಿ ಆಗಿದ್ದರು. ಬಿಡುಗಡೆ ಸಮಯದಲ್ಲಿ ಸಹ ಕಷ್ಟವಾಯ್ತು, ಚಿತ್ರಮಂದಿರಗಳು ಸಿಕ್ಕಿರಲಿಲ್ಲ. ಆದರೆ ಒಬ್ಬ ಒಳ್ಳೆಯ ವಿತರಕ ಸಿಕ್ಕಿ ನಮಗೆ ಸಹಾಯ ಮಾಡಿದರು’ ಎಂದಿದ್ದಾರೆ ಮಂಜುನಾಥ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ