‘ಡೆವಿಲ್’ ಸಿನಿಮಾ ಹಾಡು ಕದ್ದಿದ್ದಾ? ಅಜನೀಶ್ ವಿರುದ್ಧ ಕೃತಿಚೌರ್ಯದ ಆರೋಪ

Devil movie music: ಅಜನೀಶ್ ಮಾಡಿದ್ದ ‘ಕಾಂತಾರ’ದ ‘ವರಾಹ ರೂಪಂ’ ಹಾಡಿನ ಮೇಲೆ ಕೃತಿಚೌರ್ಯದ ಆರೋಪ ಮಾಡಲಾಗಿತ್ತು. ಇದೀಗ ಅಜನೀಶ್ ಅವರೇ ಸಂಗೀತ ನೀಡಿರುವ ‘ಡೆವಿಲ್’ ಸಿನಿಮಾದ ಹಾಡೊಂದರ ಮೇಲೆ ಇದೇ ರೀತಿಯ ಕೃತಿಚೌರ್ಯದ ಆರೋಪ ಮಾಡಲಾಗಿದೆ. ಆರೋಪ ಮಾಡಿರುವುದು ಯಾರು? ಹಾಡು ಯಾವುದು? ಇಲ್ಲಿದೆ ಮಾಹಿತಿ...

‘ಡೆವಿಲ್’ ಸಿನಿಮಾ ಹಾಡು ಕದ್ದಿದ್ದಾ? ಅಜನೀಶ್ ವಿರುದ್ಧ ಕೃತಿಚೌರ್ಯದ ಆರೋಪ
Devil Ajaneesh

Updated on: Nov 22, 2025 | 4:00 PM

ಕಾಂತಾರ’ (Kantara) ಸಿನಿಮಾಕ್ಕೆ ಅಜನೀಶ್ ಲೋಕನಾಥ್ ನೀಡಿದ್ದ ಸಂಗೀತ ಸಖತ್ ಸದ್ದು ಮಾಡಿತು. ಅದರಲ್ಲೂ ‘ವರಾಹ ರೂಪಂ’ ಹಾಡು ಕಳೆದ ಕೆಲ ವರ್ಷಗಳಲ್ಲಿ ಕನ್ನಡದಲ್ಲಿ ಬಂದ ಅತ್ಯುತ್ತಮ ಹಾಡು ಎನ್ನಲಾಗಿತ್ತು. ಆದರೆ ಆ ಹಾಡಿನ ವಿರುದ್ಧ ಕೇರಳದ ಸಂಗೀತ ತಂಡವೊಂದು ಪ್ರಕರಣ ದಾಖಲಿಸಿತು. ಕೇರಳದ ಥೈಕ್ಕುಡ್ಡಂ ಬ್ರಿಡ್ಜ್ ಹೆಸರಿನ ತಂಡ ಮಾಡಿದ್ದ ಹಾಡಿಗೂ, ವರಾಹ ರೂಪಂ ಹಾಡಿಗೂ ಸಾಮ್ಯತೆ ಇದ್ದಿದ್ದನ್ನು ಕೇಳುಗರು ಗುರುತಿಸಿದ್ದರು. ಇದೀಗ ಮತ್ತೊಮ್ಮೆ ಇಂಥಹುದೇ ಒಂದು ಆರೋಪ ಅಜನೀಶ್ ಮೇಲೆ ಬಂದಿದೆ. ಆದರೆ ಈ ಬಾರಿ ದೂರು ದಾಖಲಾಗಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜಾರಿಯಲ್ಲಿದೆ.

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಈಗಾಗಲೇ ಸಿನಿಮಾದ ಕೆಲ ಹಾಡುಗಳು ಬಿಡುಗಡೆ ಆಗಿವೆ. ಆರು ದಿನಗಳ ಹಿಂದೆ ‘ಡೆವಿಲ್’ ಸಿನಿಮಾದ ‘ಅಲೋಹೊಮರ’ ಎಂಬ ಹಾಡು ಬಿಡುಗಡೆ ಆಗಿದೆ. ಆ ಹಾಡಿನಲ್ಲಿ ‘ರತತ್ತತ್ತ ಥಾ…’ ಎಂಬ ಕ್ಯಾಚಿ ಸಂಗೀತ ಇದೆ. ಅಸಲಿಗೆ ಈ ಬೀಟ್ ಕನ್ನಡದವರೇ ಆದ ತನ್ಮಯ್ ಗುರುರಾಜ್ ಎಂಬುವರು ಸಿನಿಮಾ ಒಂದಕ್ಕಾಗಿ ಮಾಡಿದ ಸಂಗೀತವಾಗಿದೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

ತನ್ಮಯ್ ಗುರುರಾಜ್ ಅವರು ತಮ್ಮ ಇನ್​​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅಜನೀಶ್ ಅವರು ‘ಡೆವಿಲ್’ ಸಿನಿಮಾದ ಹಾಡಿನಲ್ಲಿ ಬಳಸಿರುವ ಸಂಗೀತ ಹಾಗೂ ತಾವು ‘ಮಿಸ್ಸಿಂಗ್’ ಹೆಸರಿನ ಸಿನಿಮಾನಲ್ಲಿ ಬಳಸಿರುವ ಸಂಗೀತವನ್ನು ಒಂದರ ಹಿಂದೊಂದರಂತೆ ಪ್ಲೇ ಮಾಡಿದ್ದು, ಅದು ತಮ್ಮದೇ ಸಂಗೀತ ಎಂದಿದ್ದಾರೆ. ಹಾಗೆಂದು ಅವರು ಅಜನೀಶ್ ವಿರುದ್ಧ ಕೃತಿಚೌರ್ಯದ ಆರೋಪ ಮಾಡಿಲ್ಲ, ಬದಲಿಗೆ ಸಂಗೀತ ಕ್ಷೇತ್ರ ಎಂಬುದು ಕ್ರಿಯಾತ್ಮಕ ಕ್ಷೇತ್ರ, ಇಲ್ಲಿ ಒಬ್ಬರಿಗೆ ಬಂದಿರುವ ಐಡಿಯಾ, ಆಲೋಚನೆ ಇನ್ನೊಬ್ಬರಿಗೂ ಬಂದಿರಬಹುದು ಎಂದಿದ್ದಾರೆ. ಮುಂದೊಂದು ದಿನ ಕನ್ನಡದ ಕೇಳುಗ ಹೆಮ್ಮೆ ಪಡುವಂಥಹಾ ಸಂಗೀತ ನೀಡುವುದೇ ನನ್ನ ಗುರಿ’ ಎಂದಿದ್ದಾರೆ ಅವರು.

ಆದರೆ ಅವರ ವಿಡಿಯೋಕ್ಕೆ ಬಂದಿರುವ ಕಮೆಂಟ್​​ಗಳಲ್ಲಿ ಅಜನೀಶ್ ವಿರುದ್ಧ ಅಸಮಾಧಾನ, ಆಕ್ರೋಶ ವ್ಯಕ್ತವಾಗಿದೆ. ಯುವ ಸಂಗೀತ ನಿರ್ದೇಶಕ ತನ್ಮಯ್ ಗುರುರಾಜ್ ಅವರಿಗೆ ‘ಡೆವಿಲ್’ ಸಿನಿಮಾದ ಹಾಡಿನ ಕ್ರೆಡಿಟ್ ನೀಡಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ. ಇನ್ನು ಕೆಲವರು ಅಜನೀಶ್ ಅವರು ಕೃತಿಚೌರ್ಯ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಅಸಲಿಗೆ ‘ಡೆವಿಲ್’ ಸಿನಿಮಾದ ‘ಅಲೋಹೊಮರ’ ಹಾಡಿನಲ್ಲಿ ಒಂದು ನಿರ್ದಿಷ್ಟ ಬೀಟ್​​ನ ಹೊರತಾಗಿ ಇನ್ಯಾವುದೂ ಸಹ ತನ್ಮಯ್ ಗುರುರಾಜ್ ಅವರ ಸಂಗೀತಕ್ಕೆ ಹೋಲಿಕೆ ಇಲ್ಲ. ಆದರೆ ‘ರತತ್ತತ್ತ ಥಾ…’ ಎಂಬ ಕ್ಯಾಚಿ ಬೀಟ್​ ಮಾತ್ರ ಯಥಾವತ್ತು ‘ಮಿಸ್ಸಿಂಗ್’ ಸಿನಿಮಾದ ಹಾಡಿನಲ್ಲಿ ಇರುವಂತೆಯೇ ಇದೆ. ಆದರೆ ಟೆಂಪೊ ಮತ್ತು ಸ್ಪೀಡ್ ಮಾತ್ರ ತುಸು ಬದಲಾಗಿದೆ. ಈ ಬಗ್ಗೆ ಅಜನೀಶ್ ಅವರು ಈ ವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ