ತಾರಾ ಜೊತೆಗಿನ 26ನೇ ಸಿನಿಮಾದಲ್ಲಿ ಶಶಿಕುಮಾರ್ ‘ರುದ್ರ ಅವತಾರ’
ಕನ್ನಡ ಚಿತ್ರರಂಗದ ಹಿರಿಯ ನಟ ಶಶಿಕುಮಾರ್ ಅವರ ‘ರುದ್ರ ಅವತಾರ’ ಸಿನಿಮಾ ಬಗ್ಗೆ ಮಾಹಿತಿ ಇಲ್ಲಿದೆ. ಸವಾದ್ ನಿರ್ದೇಶನ ಮಾಡುತ್ತಿದ್ದು, ನವೆಂಬರ್ 24ರಿಂದ ‘ರುದ್ರ ಅವತಾರ’ ಸಿನಿಮಾದ ಚಿತ್ರೀಕರಣ ಆರಂಭ ಆಗಲಿದೆ. ಯಶ್ ಶೆಟ್ಟಿ, ಸಂಗೀತಾ, ತಾರಾ, ವರ್ಧನ್ ತೀರ್ಥಳ್ಳಿ ಅವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ನಟ ಶಶಿಕುಮಾರ್ ಅವರ ಹೊಸ ಸಿನಿಮಾ ‘ರುದ್ರ ಅವತಾರ’ (Rudra Avatara) ಸೆಟ್ಟೇರಿದೆ. ಸವಾದ್ ಮಂಗಳೂರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಶಿಕುಮಾರ್ (Shahi Kumar) ಅವರು ಒಬ್ಬ ಜವಾಬ್ದಾರಿಯುತ ತಂದೆಯ ಪಾತ್ರ ಮಾಡಲಿದ್ದಾರೆ. ಸವಾದ್ ಮಂಗಳೂರು ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ದಾಂಡೇಲಿಯ ಉದ್ಯಮಿ ಡಾ. ಪ್ರೇಮಾನಂದ್ ವಿ. ಗವಸ ಅವರು ‘ಪ್ರೇಮ್ ಜಿ. ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪಾತ್ರಗಳನ್ನು ಪರಿಚಯಿಸುವ ಟೀಸರ್ ರಿಲೀಸ್ ಮಾಡಲಾಯಿತು. ಬಳಿಕ ಸುದ್ದಿಗೋಷ್ಠಿ ನಡೆಸಲಾಯಿತು. ನವೆಂಬರ್ 24ರಿಂದ ‘ರುದ್ರ ಅವತಾರ’ ಶೂಟಿಂಗ್ ಆರಂಭ ಆಗಲಿದೆ.
ನಿರ್ಮಾಪಕ ಪ್ರೇಮಾನಂದ್ ಮಾತನಾಡಿದರು. ‘ನಾನೊಬ್ಬ ಉದ್ಯಮಿ. ಹಣ ಮಾಡೋದಕ್ಕಿಂತ ಸಮಾಜಕ್ಕೆ ಉತ್ತಮ ಸಂದೇಶ ನೀಡುವುದು ನನ್ನ ಉದ್ದೇಶ. ಸಿನಿಮಾ ಮಾಡಬೇಕು ಎಂಬುದು ನನ್ನ ಬಹುದಿನಗಳ ಆಸೆ ಆಗಿತ್ತು. ನಿರ್ದೇಶಕರು ಹೇಳಿದ ಈ ಕಥೆ ನನಗೆ ಬಹಳ ಇಷ್ಟ ಆಯಿತು. ನಾನೂ ಕೂಡ ಒಂದು ಪವರ್ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ಅವರು ಮಾಹಿತಿ ನೀಡಿದರು.
ನಿರ್ದೇಶಕ ಸವಾದ್ ಮಂಗಳೂರು ಅವರು ಮಾತನಾಡಿ, ‘ರುದ್ರ ಅವತಾರ ಶಿವನ ಮತ್ತೊಂದು ರೂಪ. ಮಧ್ಯಮ ವರ್ಗದ ಜನತೆ ತಮ್ಮ ಮಕ್ಕಳ ರಕ್ಷಣೆಗೋಸ್ಕರ ಯಾವ ರೀತಿ ಹೋರಾಡುತ್ತಾರೆ? ಹೇಗೆ ರುದ್ರ ಅವತಾರ ತಾಳುತ್ತಾರೆ ಎಂಬುದನ್ನು ಈ ಸಿನಿಮಾದ ಮೂಲಕ ಹೇಳಹೊರಟಿದ್ದೇನೆ. ಈ ಕಥೆಯಲ್ಲಿ ಪ್ರಮುಖವಾಗಿ 3 ಪಾತ್ರಗಳನ್ನು ಶಿವನ ರುದ್ರ ಅವತಾರದಲ್ಲಿ ನೋಡಬಹುದು. ಅವರಲ್ಲಿ ಮುಖ್ಯವಾಗಿ ಬರುವವರೇ ಶಶಿಕುಮಾರ್’ ಎಂದರು.
ಶಶಿಕುಮಾರ್ ಅವರಿಗೂ ಈ ಸಿನಿಮಾದ ಕಥೆ ತುಂಬಾ ಇಷ್ಟ ಆಗಿದೆ. ‘ಇದು ಹೀರೋ, ಹೀರೋಯಿನ್ ಕಥೆಯಲ್ಲ. ಇಲ್ಲಿ ಕಂಟೆಂಟ್ ಹೀರೋ. ಈ ಸಿನಿಮಾದಲ್ಲಿ ನಾನೊಬ್ಬ ಆಟೋ ಡ್ರೈವರ್ ಪಾತ್ರ ಮಾಡುತ್ತಿದ್ದೇನೆ. ಹೆಣ್ಣುಮಗಳ ತಂದೆಯಾಗಿ ಅಭಿನಯಿಸುತ್ತಿದ್ದೇನೆ. ಸಂಗೀತಾ ನನ್ನ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಗಳಿಗಾಗಿ ಹೋರಾಡುವ ತಂದೆಯ ಪಾತ್ರ ನನ್ನದು. ಸಿನಿಮಾದಲ್ಲಿ ಹೃದಯಸ್ಪರ್ಶಿ ದೃಶ್ಯಗಳು ಬಹಳ ಇವೆ. ಫಸ್ಟ್ ಹಾಫ್ ಕಥೆ ಕೇಳಿದಾಗಲೇ ರೋಮಾಂಚನ ಆಯಿತು’ ಎಂದು ಶಶಿಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಶಶಿಕುಮಾರ್ ಬಂದು ಆಫರ್ ಕಿತ್ತುಕೊಂಡಾಗ ಅತ್ತಿದ್ದ ಜಗ್ಗೇಶ್; ಇಲ್ಲಿದೆ ಅಪರೂಪದ ಘಟನೆ
ನಟಿ ತಾರಾ ಮಾತನಾಡಿ, ‘ಈ ಸಿನಿಮಾದ ಎಲ್ಲ ಪಾತ್ರಗಳು ಕಥೆಯ ಮುಖ್ಯ ಭಾಗವೇ ಆಗಿವೆ. ಬಹಳ ವರ್ಷಗಳ ನಂತರ ಶಶಿಕುಮಾರ್, ಸಂಗೀತಾ ಜೊತೆ ಸಿನಿಮಾ ಮಾಡುತ್ತಿದ್ದೇನೆ’ ಎಂದು ಸಂತಸ ಹಂಚಿಕೊಂಡರು. ಯಶ್ ಶೆಟ್ಟಿ, ವರ್ಧನ್ ತೀರ್ಥಳ್ಳಿ, ಅಂಕಿತಾ ಜಯರಾಮ್, ಸಾಧನಾ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಅಲನ್ ಭರತ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಸತೀಶ್ ಬ್ರಹ್ಮಾವರ್ ಅವರು ನಿರ್ಮಾಣ ನಿರ್ವಹಣೆ ಮಾಡುತ್ತಿದ್ದಾರೆ. ಪಾಲ್ ಅಲೆಕ್ಸ್ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಶ್ರೀಕಾಂತ್ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




