ಸಿನಿಮಾ ಜಗತ್ತು ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ ಅವಕಾಶಗಳು ಸಿಗುವುದು ತುಂಬ ವಿರಳ. ಮಹಿಳೆಯರು ಹೆಚ್ಚಾಗಿ ನಟನೆ ಕಡೆಗೆ ಆಸಕ್ತಿ ತೋರಿಸುತ್ತಾರೆ. ತೆರೆಹಿಂದೆ ಕೆಲಸ ಮಾಡುವ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲೂ ಕೆಲವು ಮಹಿಳೆಯರು (Female Directors) ನಿರ್ದೇಶನ ವಿಭಾಗಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಆ ರೀತಿ ಆಸಕ್ತಿ ಇರುವ ಹೊಸ ಪ್ರತಿಭೆಗಳಿಗೆ ನಿರ್ದೇಶಕ ಮಂಸೋರೆ (Director Mansore) ಅವರು ಈಗೊಂದು ಆಫರ್ ನೀಡಿದ್ದಾರೆ. ತಮ್ಮ ಹೊಸ ಸಿನಿಮಾದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲು ಮಹಿಳೆ ಅಥವಾ ಯುವತಿಯೊಬ್ಬರಿಗೆ ಅವಕಾಶ ನೀಡುವುದಾಗಿ ಮಂಸೋರೆ ತಿಳಿಸಿದ್ದಾರೆ. ಅದಕ್ಕೆ ಬೇಕಿರುವ ಒಂದು ಪ್ರಮುಖ ಅರ್ಹತೆ ಏನು ಎಂಬುದನ್ನು ಸಹ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ‘ಮಂಗಳೂರು ಕನ್ನಡ ಮತ್ತು ತುಳು (Tulu Language) ಗೊತ್ತಿರುವವರು ಬೇಕು’ ಎಂದು ಮಂಸೋರೆ ತಿಳಿಸಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. ಅದೇನು ಎಂಬುದನ್ನು ಮಂಸೋರೆ ವಿವರಿಸಿದ್ದಾರೆ.
‘ಹರಿವು’, ‘ನಾತಿಚರಾಮಿ’ ಖ್ಯಾತಿಯ ಮಂಸೋರೆ ಅವರು 2020ರಲ್ಲಿ ‘ಆ್ಯಕ್ಟ್ 1978’ ಸಿನಿಮಾ ನಿರ್ದೇಶನ ಮಾಡಿ ಮೆಚ್ಚುಗೆ ಗಳಿಸಿದ್ದರು. ಬಳಿಕ ಅವರು ಸ್ವಲ್ಪ ಸಮಯ ತೆಗೆದುಕೊಂಡು ‘19-20-21’ ಎಂಬ ಹೊಸ ಚಿತ್ರ ಅನೌನ್ಸ್ ಮಾಡಿದರು. ಆ ಸಿನಿಮಾದ ಶೂಟಿಂಗ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ಫೆ.7ರಂದು ಈ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿತ್ತು. ಈ ಸಿನಿಮಾದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲು ಮಹಿಳೆಯೊಬ್ಬರಿಗೆ ಅವಕಾಶ ನೀಡಲಾಗುತ್ತಿದೆ.
‘ನಮ್ಮ ಸಿನಿಮಾದಲ್ಲಿ ಮಂಗಳೂರು ಕನ್ನಡ ಮತ್ತು ತುಳು ಭಾಷೆಯ ಸಂಭಾಷಣೆಗಳು ಬರುತ್ತವೆ. ಅದರ ಉಚ್ಛಾರ ಮತ್ತು ಬಳಕೆಯಲ್ಲಿ ನಿಖರತೆ ಕಾಯ್ದುಕೊಳ್ಳುವ ಸಲುವಾಗಿ ತುಳು ಮತ್ತು ಮಂಗಳೂರು ಕನ್ನಡ ಗೊತ್ತಿರುವವರಿಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಮಹಿಳೆಯರಿಗೆ ಆದ್ಯತೆ ನೀಡಲು ಕಾರಣ ಕೂಡ ಇದೆ. ನಮ್ಮ ಸಿನಿಮಾದಲ್ಲಿ ಹೆಚ್ಚು ಮಹಿಳಾ ಕಲಾವಿದರು ನಟಿಸುತ್ತಿದ್ದಾರೆ. ಅವರಿಗೆ ನಿರ್ದೇಶನದ ತಂಡದ ಜೊತೆ ಸಂಪರ್ಕದಲ್ಲಿ ಇರಲು ಒಂದು ಕಂಫರ್ಟ್ ಇರಬೇಕು ಎಂಬ ಕಾರಣಕ್ಕೆ ಮಹಿಳೆಯರಿಗೆ ಅವಕಾಶ ನೀಡುತ್ತಿದ್ದೇನೆ’ ಎಂದು ಮಂಸೋರೆ ಹೇಳಿದ್ದಾರೆ.
ಶೂಟಿಂಗ್ ಯಾವಾಗ ನಡೆಯಲಿದೆ? ಸ್ಥಳ ಯಾವುದು ಎಂಬ ಬಗ್ಗೆಯೂ ಮಂಸೋರೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಚಿತ್ರೀಕರಣವು ಸಂಪೂರ್ಣವಾಗಿ ಹೊರಾಂಗಣ ಹಾಗೂ ಕಾಡಿನ ಪರಿಸರದ ಇಲ್ಲಿರುತ್ತದೆ. ಮಾರ್ಚ್ 28ರಿಂದ ಎರಡು ತಿಂಗಳ ಕಾಲ ಸತತ ಚಿತ್ರೀಕರಣ ಇರುತ್ತದೆ. ಮಂಗಳೂರು ಪರಿಸರದ ಕನ್ನಡ ಹಾಗೂ ತುಳು ಮಾತನಾಡಲು ಕಡ್ಡಾಯವಾಗಿ ಬರಬೇಕು. ಆಸಕ್ತಿ ಇರುವವರು 9483709735 ಮೊಬೈಲ್ ಸಂಖ್ಯೆಗೆ ಕರೆ ಮಾಡಿ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
ಶೃಂಗಾ, ಕೃಷ್ಣ ಹೆಬ್ಬಾಳೆ, ಬಾಲಾಜಿ ಮನೋಹರ್, ಸಂಪತ್ ಕುಮಾರ್, ವೆಂಕಟೇಶ್ ಪ್ರಸಾದ್ ಸೇರಿದಂತೆ ರಂಗಭೂಮಿ ಹಾಗೂ ಚಿತ್ರರಂಗದ ಹಲವು ನಟ-ನಟಿಯರು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಧಾರವಾಡ, ಯಲ್ಲಾಪುರ ಮತ್ತು ಕರಾವಳಿಯ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ದೇವರಾಜ್ ಆರ್. ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸತ್ಯ ಹೆಗ್ಡೆ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಬಿಂದು ಮಾಲಿನಿ ಹಾಗೂ ಬಕ್ಕೇಶ್ ರೋಣದ ಅವರ ಸಂಗೀತ, ಮಹಾವೀರ್ ಸಾಬಣ್ಣವರ್ ಅವರ ಶಬ್ದ ವಿನ್ಯಾಸ ಈ ಚಿತ್ರಕ್ಕೆ ಇರಲಿದೆ.
ಇದನ್ನೂ ಓದಿ:
ಡಿಫರೆಂಟ್ ಪಾತ್ರದಲ್ಲಿ ಪುನೀತ್; ‘ಮಿಷನ್ ಕೊಲಂಬಸ್’ ಚಿತ್ರಕ್ಕಾಗಿ ಮಂಸೋರೆ ಕಂಡಿದ್ದ ಕನಸು ಭಗ್ನ
ಮಹಿಳಾ ದಿನಾಚರಣೆ ವಿಶೇಷ: ಕಾನ್ಫಿಡೆನ್ಸ್ ಇದ್ರೆ ಮಾರ್ಗ ಸಿಗುತ್ತೆ; ನಿರ್ದೇಶಕಿ ರಿಷಿಕಾ ಶರ್ಮಾ ಮಾತು