ಕೌತುಕ ಮೂಡಿಸಿದ ‘19.20.21’ ಕನ್ನಡ ಸಿನಿಮಾ; ಮಂಸೋರೆ ಹೊಸ ಚಿತ್ರ ಅನೌನ್ಸ್
‘19.20.21’ ಚಿತ್ರದ ಕುರಿತು ನಿರ್ದೇಶಕ ಮಂಸೋರೆ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಪೋಸ್ಟರ್ಗೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ (Director Mansore) ಅವರು ಪ್ರತಿ ಪ್ರಯತ್ನದಲ್ಲೂ ಭಿನ್ನವಾದ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ‘ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್-1978’ (Act 1978) ಚಿತ್ರಗಳ ಮೂಲಕ ಅವರು ಗಮನ ಸೆಳೆದರು. ಮಂಸೋರೆ ಅವರು ‘ಅಬ್ಬಕ್ಕ’ ಸಿನಿಮಾ ಮಾಡುವ ಕುರಿತು ಈ ಹಿಂದೆ ಮಾಹಿತಿ ಹಂಚಿಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಆ ಚಿತ್ರ ಮುಂದಕ್ಕೆ ಹೋಗಿದೆ. ಈಗ ಅವರು ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ‘19.20.21’ ಎಂಬುದು ಈ ಚಿತ್ರದ ಶೀರ್ಷಿಕೆ. ಇದರ ಜೊತೆಗೆ ಪೋಸ್ಟರ್ ಕೂಡ ಕೌತುಕಭರಿತವಾಗಿದೆ. ‘ಆ್ಯಕ್ಟ್-1978’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ದೇವರಾಜ್ ಅವರು ‘19.20.21’ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸತ್ಯ ಹೆಗಡೆ, ವೀರೇಂದ್ರ ಮಲ್ಲಣ್ಣ ಕೂಡ ಟೀಮ್ನಲ್ಲಿ ಇದ್ದಾರೆ. ಇದೊಂದು ನೈಜ ಘಟನೆ ಆಧಾರಿತ ಸಿನಿಮಾ ಎಂಬುದು ವಿಶೇಷ. ಈ ಚಿತ್ರದ (19.20.21 Movie) ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಿರ್ದೇಶಕ ಮಂಸೋರೆ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟರ್ಗೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರದಲ್ಲಿ ಯಾವೆಲ್ಲ ಕಲಾವಿದರು ಅಭಿನಯಿಸಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
ಈ ಸಿನಿಮಾದ ಕುರಿತು ಮಂಸೋರೆ ಈ ರೀತಿ ಬರೆದುಕೊಂಡಿದ್ದಾರೆ. ‘ಸ್ನೇಹಿತರೇ ಹಾಗೂ ಸಿನಿಪ್ರಿಯರೇ.. ನಾವು ಈ ಹಿಂದೆ ನಿಮ್ಮೊಂದಿಗೆ ಹಂಚಿಕೊಂಡಿದ್ದ ನನ್ನ ಬಹುವರ್ಷಗಳ ಕನಸು ‘ಅಬ್ಬಕ್ಕ’ ಸಿನಿಮಾ ಮಾಡುವ ಯೋಜನೆಯನ್ನು ಕೊರೊನಾ ಕಾಲದಲ್ಲಿ ಜರುಗುತ್ತಿರುವ ಅನಿಶ್ಚಿತತೆಗಳ ಕಾರಣದಿಂದ ತಾತ್ಕಾಲಿಕವಾಗಿ ಮುಂದೂಡಿದ್ದೇವೆ. ಮುಂದೆ ಸಮಯ ಕೈಗೂಡಿ ಬಂದಾಗ ಖಂಡಿತ ‘ಅಬ್ಬಕ್ಕ’ ತೆರೆಯ ಮೇಲೆ ತರುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ. ಮುಂದೆ? ಉತ್ತರ ‘19.20.21’ ಚಿತ್ರ’ ಎಂದು ಅವರು ಬರಹ ಆರಂಭಿಸಿದ್ದಾರೆ.
‘ನಮಗೆ ಸಿನಿಮಾ ಬಿಟ್ಟು ಬೇರೆ ಜಗತ್ತು ತಿಳಿಯದು. ಸಿನಿಮಾನೇ ನಮ್ಮ ಜೀವನ. ಸಿನಿಮಾ ಕನಸು ಕಾಣದೆ ನಮ್ಮ ಜೀವನವನ್ನು ಊಹಿಸಿಕೊಳ್ಳುವುದು ನಮಗೇ ಅಸಾಧ್ಯ. ಹಾಗಾಗಿ, ‘ಅಬ್ಬಕ್ಕ’ ಯೋಜನೆಯ ಕನಸಿನ ಜೊತೆಜೊತೆಗೆ ಈ ಕೊರೊನಾ ಕಾಲದಲ್ಲಿ, ವರ್ಷ ಪೂರ್ತಿ ಮನೆಯಲ್ಲೇ ಕಾಲ ಕಳೆಯುವಾಗ ಬಹಳ ಕಷ್ಟವೆನಿಸಿದರೂ, ಆ ಎರಡು ವರ್ಷಗಳಲ್ಲಿ ನಮಗೆ ಸಾಕಷ್ಟು ಹೋಮ್ ವರ್ಕ್ ಮಾಡಲು, ಕನಸುಗಳನ್ನು ಕಾಣಲು ಸಮಯವೂ ಸಿಕ್ಕಿತು. ಅದರ ಫಲವೇ ಈಗ ಹೊಸ ಸಿನಿಮಾ’ ಎಂದು ಮಂಸೋರೆ ಪೋಸ್ಟ್ ಮಾಡಿದ್ದಾರೆ.
‘ಹೊಸ ಪ್ರಯತ್ನವೊಂದರ ಬೆನ್ನತ್ತಿ ಹೊರಟಿದ್ದೇವೆ. ಆದರೆ ಇದು ಕನಸಲ್ಲ, ಕತೆಯಲ್ಲ, ಸತ್ಯ ಘಟನೆ ಆಧಾರಿತ. ಬಹಳ ಹಿಂದೆಯೇ ಸಿನಿಮಾ ಮಾಡಬೇಕು ಅಂದುಕೊಂಡಿದ್ದ ಒಂದು ಘಟನೆಯು ದೃಶ್ಯರೂಪ ಪಡೆದುಕೊಳ್ಳಲು ಈಗ ಕಾಲ ಕೂಡಿಬಂದಿದೆ. ಈ ವರ್ಷವೇ ಸಿನಿಮಾನ ನಿಮ್ಮ ಮುಂದೆ ತರುವ ಆಶಯದೊಂದಿಗೆ, ಅತಿ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಹೋಗುವ ಸಿದ್ಧತೆಯಲ್ಲಿದ್ದೇವೆ. ‘ಹತ್ತೊಂಬತ್ತು, ಇಪ್ಪತ್ತು, ಇಪ್ಪತ್ತೊಂದು’ ಎಲ್ಲರ ಬದುಕಿಗೆ ಬಹಳ ಮುಖ್ಯವಾದ ಸಂಖ್ಯೆಗಳು. ಅದು ಏನು? ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುವ ಕುತೂಹಲ ಸಿನಿಮಾ ನೋಡುವ ತನಕ ಉಳಿದಿರಲಿ. ಸಿನಿಮಾದ ಪಾತ್ರವರ್ಗ ಮತ್ತು ತಾಂತ್ರಿಕ ವರ್ಗದ ಕುರಿತಾಗಿ ಮುಂಬರುವ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತೇವೆ. ನಿಮ್ಮ ಪ್ರೀತಿಯ ಹಾರೈಕೆ ಮತ್ತು ಬೆಂಬಲದ ಆಶೀರ್ವಾದ ಸದಾ ನಮ್ಮೊಂದಿಗೆ ಇರಲಿ’ ಎಂದು ಮಂಸೋರೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:
ಡಿಫರೆಂಟ್ ಪಾತ್ರದಲ್ಲಿ ಪುನೀತ್; ‘ಮಿಷನ್ ಕೊಲಂಬಸ್’ ಚಿತ್ರಕ್ಕಾಗಿ ಮಂಸೋರೆ ಕಂಡಿದ್ದ ಕನಸು ಭಗ್ನ
ಅಗಲಿದ ಗೆಳೆಯ ಸಂಚಾರಿ ವಿಜಯ್ಗಾಗಿ ‘ಪುಕ್ಸಟ್ಟೆ ಲೈಫು’ ಚಿತ್ರದ ಟಿಕೆಟ್ ಖರೀದಿಸಿ, ಪತ್ರ ಬರೆದ ಮಂಸೋರೆ