‘ಅಪ್ಪ, ಅಮ್ಮ, ಅಪ್ಪು ಅವರನ್ನು ಕಳೆದುಕೊಂಡ ನೋವು ಕಾಡುತ್ತಿದೆ’ ಎಂದು ಬರ್ತ್​ಡೇ ಆಚರಣೆಗೆ ದುನಿಯಾ ವಿಜಯ್​ ಬ್ರೇಕ್​

‘ಅಪ್ಪ, ಅಮ್ಮ, ಅಪ್ಪು ಅವರನ್ನು ಕಳೆದುಕೊಂಡ ನೋವು ಕಾಡುತ್ತಿದೆ’ ಎಂದು ಬರ್ತ್​ಡೇ ಆಚರಣೆಗೆ ದುನಿಯಾ ವಿಜಯ್​ ಬ್ರೇಕ್​
ದುನಿಯಾ ವಿಜಯ್

Duniya Vijay Birthday: ‘ಹುಟ್ಟುಹಬ್ಬದ ದಿನ ನಾನು ಮನೆಯಲ್ಲಿ ಇರುವುದಿಲ್ಲ. ಹಾಗಾಗಿ ಯಾರೂ ಮನೆಯ ಬಳಿ ಬರಬೇಡಿ. ನೀವಿದ್ದ ಕಡೆಯಿಂದಲೇ ನನಗೆ ಹಾರೈಸಿ’ ಎಂದು ದುನಿಯಾ ವಿಜಯ್​ ಮನವಿ ಮಾಡಿಕೊಂಡಿದ್ದಾರೆ.

TV9kannada Web Team

| Edited By: Madan Kumar

Jan 19, 2022 | 2:49 PM


ಕನ್ನಡ ಚಿತ್ರರಂಗದ ಖ್ಯಾತ ನಟ ದುನಿಯಾ ವಿಜಯ್​ (Duniya Vijay) ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ಅವರು ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡುತ್ತ ನಂತರ ಹೀರೋ ಆಗಿ ಸ್ಟಾರ್​ ಪಟ್ಟ ಪಡೆದುಕೊಂಡಿದ್ದು ದುನಿಯಾ ವಿಜಯ್​ ಅವರ ಸಾಧನೆ. ಕಳೆದ ವರ್ಷ ಅವರು ‘ಸಲಗ’ (Salaga Movie) ಸಿನಿಮಾ ಮೂಲಕ ನಿರ್ದೇಶಕನಾಗಿಯೂ ಯಶಸ್ಸು ಗಳಿಸಿದರು. ಈಗ ಅವರು ತಮ್ಮ ಬರ್ತ್​ಡೇ ಆಚರಣೆ ಬಗ್ಗೆ ಮುಖ್ಯವಾದ ನಿರ್ಧಾರ ಕೈಗೊಂಡಿದ್ದಾರೆ. ಜ.20ರಂದು ದುನಿಯಾ ವಿಜಯ್​ ಹುಟ್ಟುಹಬ್ಬ. ಆದರೆ ಎಲ್ಲರ ಜೊತೆ ಸೇರಿ ಜನ್ಮದಿನವನ್ನು (Duniya Vijay Birthday) ಸಂಭ್ರಮಿಸುವಂತಹ ವಾತಾವರಣ ಇಲ್ಲ. ಕೊರೊನಾ ವೈರಸ್​ ಹರಡುವ ಭೀತಿ ಕೂಡ ಜೋರಾಗಿದೆ. ಆ ಕಾರಣದಿಂದ ಅವರು ಈ ಬಾರಿ ಅಭಿಮಾನಿಗಳ ಜೊತೆ ಸೇರಿ ಬರ್ತ್​ಡೇ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸೋಶಿಯಲ್​ ಮೀಡಿಯಾ ಮೂಲಕ ದುನಿಯಾ ವಿಜಯ್​ ಮಾಹಿತಿ ಹಂಚಿಕೊಂಡಿದ್ದಾರೆ.

ಈ ವರ್ಷ ಫ್ಯಾನ್ಸ್​ ಜೊತೆ ಬರ್ತ್​ಡೇ ಸಂಭ್ರಮಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ದುನಿಯಾ ವಿಜಯ್​ ವಿವರಿಸಿದ್ದಾರೆ. ಅಪ್ಪ-ಅಮ್ಮ ಮತ್ತು ಅಪ್ಪು ಅವರನ್ನು ಕಳೆದುಕೊಂಡಿರುವುದು ಅವರಿಗೆ ತೀವ್ರ ನೋವುಂಟು ಮಾಡಿದೆ. ‘ಅಭಿಮಾನಿಗಳಿಗೆ ನಮಸ್ಕಾರ. ಇಡೀ ಜಗತ್ತು ಸಂಕಷ್ಟದಲ್ಲಿರುವ ಸಮಯವಿದು. ಇಂತಹ ಸಮಯದಲ್ಲಿ ನನಗೊಂದು ಅಭೂತಪೂರ್ವ ಗೆಲುವನ್ನು ನೀವೆಲ್ಲರೂ ಕೊಟ್ಟಿದ್ದೀರಿ. ಇಂತಹ ಹೊತ್ತಿನಲ್ಲಿ ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕು ಎಂಬ ಆಸೆ ನಿಮಗೆ ಇದೆ ಎಂಬುದು ನನಗೆ ಗೊತ್ತು. ನಾನು ಸಹ ನಿಮ್ಮನ್ನೆಲ್ಲಾ ನನ್ನ ಹುಟ್ಟುಹಬ್ಬದ ದಿನ ಭೇಟಿ ಆಗಬೇಕು ಎಂದುಕೊಂಡಿದ್ದೆ. ಕಳೆದ ನಾಲ್ಕು ದಶಕಗಳಿಂದ ನನ್ನನ್ನು ಸಾಕಿ ಸಲಹಿದ ನನ್ನಮ್ಮ, ಅಪ್ಪ ವಿಧಿಯಾಟಕ್ಕೆ ಬಲಿಯಾದರು. ಆತ್ಮೀಯರಾದ ಪುನೀತ್ ರಾಜ್​ಕುಮಾರ್ ಸಹ ನಮ್ಮನ್ನೆಲ್ಲಾ ಬಿಟ್ಟು ಹೋದರು. ಈ ನೋವುಗಳನ್ನು ಇಟ್ಟುಕೊಂಡು ನಾನು ಹುಟ್ಟು ಹಬ್ಬವನ್ನು ಹೇಗೆ ಸಂಭ್ರಮಿಸಲಿ’ ಎಂದಿದ್ದಾರೆ ದುನಿಯಾ ವಿಜಯ್​.

‘ಕೊವಿಡ್ ಕೇಸುಗಳು ಸಹ ದಿನೇ ದಿನೇ ಹೆಚ್ಚಾಗುತ್ತಿವೆ. ನಿಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಮತ್ತು ನನಗೆ ಅಪ್ಪ, ಅಮ್ಮ, ಅಪ್ಪು ಅವರನ್ನು ಕಳೆದುಕೊಂಡ ನೋವು ಕಾಡುತ್ತಿರುವುದರಿಂದ ಈ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹುಟ್ಟುಹಬ್ಬದ ದಿನ ನಾನು ಮನೆಯಲ್ಲಿ ಇರುವುದಿಲ್ಲ. ಹಾಗಾಗಿ ಯಾರೂ ಮನೆಯ ಬಳಿ ಬರಬೇಡಿ. ನೀವಿದ್ದ ಕಡೆಯಿಂದಲೇ ನನಗೆ ಹಾರೈಸಿ. ಅಪ್ಪ ಅಮ್ಮನನ್ನು ಕಳೆದುಕೊಂಡ ನನಗೆ ನನ್ನ ಅಭಿಮಾನಿಗಳೇ ಅಪ್ಪ-ಅಮ್ಮ ಎಲ್ಲವೂ. ಹಾಗಾಗಿ‌‌ ನಿಮ್ಮ ಹಾರೈಕೆ, ಆಶೀರ್ವಾದ ಎರಡೂ ನನ್ನ ಮೇಲಿರಲಿ’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:

ಮೇಕೆದಾಟು ಪಾದಯಾತ್ರೆಯಲ್ಲಿ ದುನಿಯಾ ವಿಜಯ್ ಭಾಗಿ; ​ನೀರಿಗಾಗಿ ಹೋರಾಟಕ್ಕೆ ‘ಸಲಗ’ ಬೆಂಬಲ

‘ರಾಜಕೀಯ ದುರುಪಯೋಗಕ್ಕೆ ಲಾಕ್​ಡೌನ್ ಬೇಡ’; ದುನಿಯಾ ವಿಜಯ್​ ಮನವಿ

Follow us on

Related Stories

Most Read Stories

Click on your DTH Provider to Add TV9 Kannada