ಅಗಲಿದ ಗೆಳೆಯ ಸಂಚಾರಿ ವಿಜಯ್ಗಾಗಿ ‘ಪುಕ್ಸಟ್ಟೆ ಲೈಫು’ ಚಿತ್ರದ ಟಿಕೆಟ್ ಖರೀದಿಸಿ, ಪತ್ರ ಬರೆದ ಮಂಸೋರೆ
‘ಪುಕ್ಸಟ್ಟೆ ಲೈಫು’ ಸಿನಿಮಾದ ಪ್ರೀಮಿಯರ್ ಪ್ರದರ್ಶನಗಳಲ್ಲಿ ಸಂಚಾರಿ ವಿಜಯ್ ಅವರಿಗಾಗಿ ಒಂದು ಸೀಟ್ ಕಾಯ್ದು ಇರಿಸಲಾಗಿತ್ತು. ಅದೇ ರೀತಿ, ಬೆಂಗಳೂರಿನ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಸಿನಿಮಾ ನೋಡುತ್ತಿರುವ ಮಂಸೋರೆ ಕೂಡ ವಿಜಯ್ಗಾಗಿ ಒಂದು ಟಿಕೆಟ್ ಖರೀದಿಸಿದ್ದಾರೆ.
ಕನ್ನಡದ ಪ್ರತಿಭಾವಂತ ನಟ ಸಂಚಾರಿ ವಿಜಯ್ ಅವರು ಇಂದು ನಮ್ಮೊಂದಿಗೆ ಇಲ್ಲ ಎಂಬುದು ದುಃಖದ ಸಂಗತಿ. ಆದರೆ ಸಿನಿಮಾಗಳ ಮೂಲಕ ಅವರು ಎಂದಿಗೂ ಜೀವಂತ. ಸಂಚಾರಿ ವಿಜಯ್ ನಟಿಸಿದ ‘ಪುಕ್ಸಟ್ಟೆ ಲೈಫು’ ಸಿನಿಮಾ ಇಂದು (ಸೆ.24) ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಈ ಸಂದರ್ಭದಲ್ಲಿ ಅವರನ್ನು ತುಂಬ ನೆನಪಿಸಿಕೊಂಡಿದ್ದಾರೆ ಗೆಳೆಯ ಮಂಸೋರೆ. ‘ಹರಿವು’, ‘ನಾತಿಚರಾಮಿ’, ‘ಆ್ಯಕ್ಟ್ 1978’ ಸಿನಿಮಾಗಳಲ್ಲಿ ಈ ಗೆಳೆಯರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದರು. ಇಂದು ಸಂಚಾರಿ ವಿಜಯ್ಗಾಗಿ ಮಂಸೋರೆ ಒಂದು ಬಹಿರಂಗ ಪತ್ರ ಬರೆದಿದ್ದಾರೆ.
ಮೈಸೂರು ಮತ್ತು ಬೆಂಗಳೂರಿನಲ್ಲಿ ‘ಪುಕ್ಸಟ್ಟೆ ಲೈಫು’ ಸಿನಿಮಾದ ಪ್ರೀಮಿಯರ್ ಪ್ರದರ್ಶನಗಳು ನಡೆದಿವೆ. ಪ್ರತಿ ಪ್ರದರ್ಶನದಲ್ಲೂ ಸಂಚಾರಿ ವಿಜಯ್ ಅವರಿಗಾಗಿ ಒಂದು ಸೀಟ್ ಕಾಯ್ದು ಇರಿಸಲಾಗಿತ್ತು. ಅದನ್ನು ನೋಡುತ್ತಿದ್ದಂತೆಯೇ ಯಾರಾದರೂ ಒಂದು ಕ್ಷಣ ಭಾವುಕರಾಗಲೇಬೇಕು. ಅದೇ ರೀತಿ, ಇಂದು ಬೆಂಗಳೂರಿನ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಸಿನಿಮಾ ನೋಡುತ್ತಿರುವ ಮಂಸೋರೆ ಕೂಡ ತಮ್ಮ ಗೆಳೆಯ ಸಂಚಾರಿ ವಿಜಯ್ಗಾಗಿ ಒಂದು ಟಿಕೆಟ್ ಖರೀದಿಸಿದ್ದಾರೆ. ಆ ಮೂಲಕ ಭಾವನಾತ್ಮಕವಾಗಿ ವಿಜಯ್ ಇನ್ನೂ ತಮ್ಮೊಂದಿಗೆ ಜೀವಂತವಾಗಿದ್ದಾರೆ ಎಂಬುದನ್ನು ಅವರು ಸಾರಿ ಹೇಳುತ್ತಿದ್ದಾರೆ. ಅದರೊಂದಿಗೆ ಮಂಸೋರೆ ಬರೆದ ಪತ್ರ ಹೀಗಿದೆ…
‘ಸಂಚಾರಿ ವಿಜಯ್ ಸರ್ ನಿಮಗೊಂದು ಪತ್ರ…
ವಿಜಯ್ ಸರ್ ನಿಮ್ಮ ಸಿನಿಮಾ ‘ಪುಕ್ಸಟ್ಟೆ ಲೈಫು’ ರಿಲೀಸ್ ಆಗ್ತಿದೆ. ಇನ್ನೊಂದು ಖುಷಿ ಏನ್ ಗೊತ್ತಾ, ಪೈಯ್ಡ್ ಪ್ರೀಮಿಯರ್ ಶೋ ಹೌಸ್ ಫುಲ್ ಆಗಿ, ಇನ್ನೊಂದು ಶೋ ಮಾಡ್ತಿದ್ದಾರೆ. ನಿಜಕ್ಕೂ ನಾನು ಮಿಸ್ ಮಾಡ್ಕೊಳ್ತಿರೋದು, ನಿಮ್ ಬ್ರಾಡ್‌ಕಾಸ್ಟ್ ಮೆಸೇಜ್ಗಳನ್ನು. ನೀವಿದ್ದಿದ್ರೆ ಇಷ್ಟೊತ್ತಿಗೆ ರೇಜಿಗೆ ಹುಟ್ಸೋವಷ್ಟು ಸಿನಿಮಾ ರಿಲೀಸ್ ಬಗ್ಗೆ ಮೆಸೇಜಸ್ಸು, ನ್ಯೂಸು ಅದೂ ಇದೂ ಕಳಿಸ್ತಿದ್ರಿ. ಅದರ ಬಗ್ಗೆ ಒಂದ್ಸಲ ರೇಗಿದ್ದಕ್ಕೆ ನೀವು ಹೇಳಿದ್ರಿ, ಸಾರ್ ನಿಮ್ಗೆ ಗೊತ್ತಿಲ್ಲಾ ಸುಮ್ನಿರಿ, ಅಷ್ಟು ಮೆಸೇಜ್ ಕಳ್ಸಿದ್ರೂ ಜನ ಬಂದು ಸಿನಿಮಾ ನೋಡೋದು ಕಡಿಮೇನೆ. ಅದಕ್ಕೆ ಅವರಿಗೆ ಪದೇ ಪದೇ ನೆನಪು ಮಾಡ್ತಾನೆ ಇರ್ಬೇಕು ಅಂತ.
ನಿಮಗೆ ಪ್ರತಿ ಸಿನಿಮಾ ಬಿಡುಗಡೆನೂ ಒಂದು ಸಂಭ್ರಮ, ಆತಂಕ ಅನ್ನೋದು ನನಗಿಂತ ಚೆನ್ನಾಗಿ ಯಾರಿಗೆ ಗೊತ್ತು ಅಲ್ವಾ? ಯಾಕೇಳಿ, ನೀವು ಪೂರ್ಣ ಪ್ರಮಾಣದ ಮುಖ್ಯ ಪಾತ್ರವಹಿಸಿ ನಟಿಸಿದ ‘ಹರಿವು’ ಕೊನೆಗೂ ಥಿಯೇಟರ್ ಅಲ್ಲಿ ‘ಅಧಿಕೃತವಾಗಿ’ ಬಿಡುಗಡೆ ಆಗ್ಲೇ ಇಲ್ಲಾ. ಆದ್ರೂ ಆ ಸಿನಿಮಾ ಎಲ್ಲೇ ಶೋ ಆಗಲಿ, ಬಿಡುವಿದ್ರೆ ನನ್ ಜೊತೆ ಬಂದ್ಬಿಡ್ತಿದ್ರಿ, ಶೋ ಮುಗಿಯೋವರೆಗೂ ಅಲ್ಲೇ ಅಕ್ಕ ಪಕ್ಕ ಓಡಾಡ್ಕೊಂಡಿದ್ದು, ಕ್ಲೈಮ್ಯಾಕ್ಸ್ ಅಲ್ಲಿ ಹಾಡು ಬರೋ ಹೊತ್ತಿಗೆ ಎಕ್ಸಿಟ್ ಬಾಗಿಲು ಹತ್ರ ಹೋಗಿ ಇಬ್ರೂ ನಿಂತ್ಕೊಂಡು ಜನಗಳ ಎಕ್ಸ್ಪ್ರೆಷನ್ ನೊಡ್ತಾ ನಿಲ್ತಿದ್ವಿ. ಆ ಅಭ್ಯಾಸ ಮೊನ್ನೆ ಆಕ್ಟ್ ಸಿನಿಮಾವರೆಗೂ ನಿಮಗೆ ಬಿಟ್ಟಿರ್ಲಿಲ್ಲಾ ಅನ್ನೋದೇ ನನಗೆ ಆಶ್ಚರ್ಯ. ಆದ್ರೆ ಫೆಬ್ರವರಿಯಲ್ಲಿ ಪಾಂಡವಪುರದಲ್ಲಿ ಹರಿವು ಪ್ರದರ್ಶನಕ್ಕೆ ಬಂದವರು ಕುತ್ಕೊಂಡು ಪೂರ್ತಿ ಸಿನೆಮಾ ನೋಡಿದ್ರಿ. ಯಾಕೋ ಹೊರಗೆ ಬರ್ಲೇ ಇಲ್ಲಾ ನೀವು.
ಇರ್ಲಿ ಹೇಳ್ತಾ ಹೋದ್ರೆ ತುಂಬಾನೇ ಇದೆ. ಸದ್ಯಕ್ಕೆ ಇಷ್ಟು ಸಾಕು. ಉಳಿದದ್ದು ಈಗ ಬೇಡ. ನಾಳೆ ಬೆಳಗ್ಗೆ ನಿಮಗೆ ತುಂಬಾ ಇಷ್ಟವಾದ ಸಿನಿಮಾ ಬಿಡುಗಡೆ ಆಗ್ತಿದೆ. ಈ ಸಿನಿಮಾ ಶೂಟಿಂಗ್ ಟೈಮಲ್ಲಿ ತುಂಬಾನೇ ಹೇಳಿದ್ರಿ. ಅದ್ವೈತ ಗುರಮೂರ್ತಿ ಕ್ಯಾಮರಾ ವರ್ಕು, ಅರವಿಂದ್ ಕುಪ್ಳಿಕರ್ ಡೈರೆಕ್ಷನ್ನು, ನಾಗರಾಜ್ ಸೋಮಯಾಜಿ ಡೆಡಿಕೇಷನ್ನು ಎಲ್ಲಾ ತುಂಬಾನೆ ಹೊಗಳ್ತಿದ್ರಿ. ಈಗ ಅದೆಲ್ಲಾ ನೋಡೋ ಟೈಂ ಬಂದಿದೆ. ನಾನು ಪ್ರೀಮಿಯರ್ ಶೋ ನೋಡ್ತಿಲ್ಲಾ. ಅಲ್ಲಿಗೆ ಎಲ್ಲಾ ಪರಿಚಯದವರೇ ಬಂದಿರ್ತಾರೆ. ಎಲ್ಲಾ ನಿಮ್ ಬಗ್ಗೆನೇ ಮಾತಿರುತ್ತೆ. ನಾನು ಎಮೋಷನಲಿ ಅಷ್ಟು ಸ್ಟ್ರಾಂಗ್ ಇಲ್ಲಾ, ನಿಮ್ಗೆ ಗೊತ್ತಲ್ಲಾ. ಬಟ್ ಶುಕ್ರವಾರ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ಅದು ನಾನೂ, ಅಖಿಲಾ ಮತ್ತು ನೀವು. ಓಕೆ ನಾ. ಸಿಟ್ಟೆಲ್ಲಾ ಮಾಡ್ಕೋಬೇಡಿ. ಬೆಳಿಗ್ಗೆ ಸಿಗೋಣ.’
ಇದನ್ನೂ ಓದಿ:
ಸಂಚಾರಿ ವಿಜಯ್ ದಾನ ಮಾಡಿದ ಅಂಗಗಳು ಯಾವುವು? ಉಳಿದ ಜೀವಗಳೆಷ್ಟು? ಇಲ್ಲಿದೆ ಪ್ರಮಾಣ ಪತ್ರ
ಸದನದಲ್ಲೂ ಚರ್ಚೆ ಆಯ್ತು ಸಂಚಾರಿ ವಿಜಯ್ ಸಾಧನೆ; ಹಾಡಿ ಹೊಗಳಿದ ಸಿದ್ದರಾಮಯ್ಯ