ಸಂಚಾರಿ ವಿಜಯ್ ದಾನ ಮಾಡಿದ ಅಂಗಗಳು ಯಾವುವು? ಉಳಿದ ಜೀವಗಳೆಷ್ಟು? ಇಲ್ಲಿದೆ ಪ್ರಮಾಣ ಪತ್ರ
ಯಕೃತ್, ಹೃದಯದ ಕವಾಟಗಳು, ಕಿಡ್ನಿಗಳು ಮತ್ತು ಕಣ್ಣುಗಳನ್ನು ಸಂಚಾರಿ ವಿಜಯ್ ದಾನ ಮಾಡಿದ್ದರು. ‘ಜೀವ ಸಾರ್ಥಕತೆ’ ಸಂಸ್ಥೆ ಮೂಲಕ ಅವುಗಳನ್ನು ಅಗತ್ಯ ಇರುವವರಿಗೆ ಕಸಿ ಮಾಡಿಸಲಾಗಿತ್ತು.
ನಟ ಸಂಚಾರಿ ವಿಜಯ್ ಅವರು ಎಲ್ಲರ ನೆಚ್ಚಿನ ಕಲಾವಿದ ಆಗಿದ್ದರು. ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಕನ್ನಡಕ್ಕೆ ಕೀರ್ತಿ ತಂದುಕೊಟ್ಟಿದ್ದರು. ನಿಧನರಾದ ನಂತರವೂ ಅವರಿಗೆ ಮೆಚ್ಚುಗೆ ಪತ್ರ ಸಿಕ್ಕಿದೆ. ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡಿದ ಕಾರಣಕ್ಕೆ ಅವರು ಮಹಾನ್ ಎನಿಸಿಕೊಂಡಿದ್ದಾರೆ. ಇಹಲೋಹ ತ್ಯಜಿಸಿದ ಬಳಿಕವೂ ಸಂಚಾರಿ ವಿಜಯ್ ಅವರು ಹಲವರ ಜೀವಗಳನ್ನು ಉಳಿಸಿದ್ದಾರೆ. ಅದಕ್ಕಾಗಿ ‘ಜೀವ ಸಾರ್ಥಕತೆ’ ಸಂಸ್ಥೆಯಿಂದ ಅವರಿಗೆ ಮೆಚ್ಚುಗೆ ಪತ್ರ ಅಥವಾ ಪ್ರಮಾಣ ಪತ್ರ ನೀಡಲಾಗಿದೆ.
ರಸ್ತೆ ಅಪಘಾತದಲ್ಲಿ ನಿಧನರಾದ ಸಂಚಾರಿ ವಿಜಯ್ ಅವರ ಹಲವು ಅಂಗಗಳನ್ನು ದಾನ ಮಾಡಲಾಯಿತು. ಅದರಿಂದ ಒಟ್ಟು 7 ಜನರಿಗೆ ಮರುಜೀವ ಸಿಕ್ಕಂತಾಗಿದೆ. ಯಕೃತ್, ಹೃದಯ ಕವಾಟಗಳು, ಕಿಡ್ನಿಗಳು ಮತ್ತು ಕಣ್ಣುಗಳನ್ನು ಸಂಚಾರಿ ವಿಜಯ್ ದಾನ ಮಾಡಿದ್ದರು. ‘ಜೀವ ಸಾರ್ಥಕತೆ’ ಸಂಸ್ಥೆ ಮೂಲಕ ಅವುಗಳನ್ನು ಅಗತ್ಯ ಇರುವವರಿಗೆ ಕಸಿ ಮಾಡಿಸಲಾಗಿತ್ತು. ಕೊನೆಯುಸಿರು ಎಳೆದ ನಂತರವೂ 7 ಜನರಿಗೆ ಸಂಚಾರಿ ವಿಜಯ್ ನೆರವಾಗಿದ್ದಾರೆ. ಆ ಮೂಲಕ ಅವರು ಮರುಜೀವಿಸುತ್ತಿದ್ದಾರೆ ಎನ್ನಬಹುದು.
‘ಅಂಗಾಂಗಗಳನ್ನು ದಾನ ಮಾಡಿ 7 ಜನರ ಜೀವ ಉಳಿಸಿದ ಸಂಚಾರಿ ವಿಜಯ್ ಅವರ ಮಹಾನ್ ಕಾರ್ಯಕ್ಕೆ ಈ ಮೆಚ್ಚುಗೆ ಪತ್ರ ನೀಡಲಾಗುತ್ತಿದೆ’ ಎಂದು ‘ಜೀವ ಸಾರ್ಥಕತೆ’ ಸಂಸ್ಥೆ ತಿಳಿಸಿದೆ. ನಟನೆಯಲ್ಲಿ ಅನೇಕರಿಗೆ ಮಾದರಿ ಆಗಿದ್ದ ವಿಜಯ್ ಅವರು ಅಂಗಾಂಗ ದಾನದ ವಿಚಾರದಲ್ಲೂ ಸಮಾಜಕ್ಕೆ ಮಾದರಿ ಆಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ, ಸ್ನೇಹಿತರಿಗೆ, ಕುಟುಂಬದವರಿಗೆ ಹೆಮ್ಮೆ ಆಗುವಂತಹ ವಿಷಯ. ಆದರೂ ಒಬ್ಬ ಅದ್ಭುತ ಕಲಾವಿದನನ್ನು, ಸಹೃದಯ ವ್ಯಕ್ತಿಯನ್ನು ಕಳೆದುಕೊಂಡ ನೋವು ನಿರಂತರವಾಗಿ ಕಾಡುವಂಥದ್ದು.
ಜು.17ರಂದು ಅವರ ಜನ್ಮದಿನ. ಈ ಬಾರಿಯ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆದಿದೆ. ಅವರ ಬದುಕಿನ ಕುರಿತು ಪುಸ್ತಕ ಹೊರಬರುತ್ತಿದೆ. ಜು.17ರಂದೇ ಆ ಕೃತಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಅಂಬರೀಶ್, ಸುದೀಪ್ ಜೀವನದ ಕುರಿತು ಪುಸ್ತಕ ಬರೆದಿರುವ ರಾಜ್ಯ ಪ್ರಶಸ್ತಿ ವಿಜೇತ ಬರಹಗಾರ ಮತ್ತು ಪತ್ರಕರ್ತ ಡಾ. ಶರಣು ಹುಲ್ಲೂರು ಅವರ ಸಂಪಾದಕತ್ವದಲ್ಲಿ ಈ ಕೃತಿ ಬರುತ್ತಿದೆ. ಖ್ಯಾತ ಲೇಖಕರಾದ ವಸುಧೇಂದ್ರ, ಜೋಗಿ, ಸಂಧ್ಯಾರಾಣಿ, ನಿರ್ದೇಶಕರಾದ ಬಿ.ಎಸ್. ಲಿಂಗದೇವರು, ಮಂಸೋರೆ, ಅರವಿಂದ್ ಕುಪ್ಳಿಕರ್, ಎಂ.ಎಸ್. ರಮೇಶ್, ರಂಗ ನಿರ್ದೇಶಕಿ ಮಂಗಳಾ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ರಾಷ್ಟ್ರ ಪ್ರಶಸ್ತಿ ವಿಜೇತ ಲೇಖಕ ಕೆ. ಪುಟ್ಟಸ್ವಾಮಿ ಹೀಗೆ ಸಿನಿಮಾ ರಂಗದ ಹಾಗೂ ವಿಜಯ್ ಅವರನ್ನು ಹತ್ತಿರದಿಂದ ಬಲ್ಲ 32ಕ್ಕೂ ಹೆಚ್ಚು ಲೇಖಕರು ಬರೆದ ಬರಹಗಳು ಇದರಲ್ಲಿವೆ.
ಇದನ್ನೂ ಓದಿ:
ಸಂಚಾರಿ ವಿಜಯ್ಗೆ ಅಪಘಾತವಾದ ದಿನ ನಿಜಕ್ಕೂ ನಡೆದಿದ್ದೇನು? ಪೊಲೀಸರಿಗೆ ಹೇಳಿಕೆ ನೀಡಿದ ಸ್ನೇಹಿತ ನವೀನ್
ಅಮೆರಿಕದಲ್ಲಿ ಸಂಚಾರಿ ವಿಜಯ್ಗೆ ಗೌರವ; ಪ್ರತಿಷ್ಠಿತ ಫ್ರಾಂಕ್ಲಿನ್ ಥಿಯೇಟರ್ನಿಂದ ನಮನ