‘ಘೋಸ್ಟ್ 2’ ಸಿನಿಮಾ ಘೋಷಿಸಿದ ನಿರ್ದೇಶಕ ಶ್ರೀನಿ: ಸಿಗಲಿವೆ ಹಲವು ಪ್ರಶ್ನೆಗೆ ಉತ್ತರ

|

Updated on: Oct 21, 2023 | 6:15 PM

Ghost: 'ಘೋಸ್ಟ್' ಸಿನಿಮಾ ನೋಡಿದ ಕೆಲವರಿಗೆ ಸಿನಿಮಾದ ಅವಧಿ ಚಿಕ್ಕದು ಎನ್ನಿಸಿತ್ತು. ಇನ್ನು ಕೆಲವರು ಸಿನಿಮಾದ ಕೆಲವು ದೃಶ್ಯಗಳಿಗೆ ಲಾಜಿಕ್ ಇಲ್ಲ ಎಂದು ಅಪಸ್ವರ ಎತ್ತಿದ್ದರು. ಇದೀಗ ನಿರ್ದೇಶಕ ಶ್ರೀನಿ 'ಘೋಸ್ಟ್ 2' ಸಿನಿಮಾ ಮಾಡುವುದಾಗಿ ಘೋಷಿಸಿದ್ದು, ಆ ಸಿನಿಮಾದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರವನ್ನು ನೀಡಲಿದ್ದಾರೆ. ಯಾವುದು ಆ ಪ್ರಶ್ನೆಗಳು? ಇಲ್ಲಿದೆ ಮಾಹಿತಿ.

ಘೋಸ್ಟ್ 2 ಸಿನಿಮಾ ಘೋಷಿಸಿದ ನಿರ್ದೇಶಕ ಶ್ರೀನಿ: ಸಿಗಲಿವೆ ಹಲವು ಪ್ರಶ್ನೆಗೆ ಉತ್ತರ
ಶಿವರಾಜ್ ಕುಮಾರ್
Follow us on

ಶಿವರಾಜ್ ಕುಮಾರ್ (Shiva Rajkumar) ನಟನೆಯ ‘ಘೋಸ್ಟ್’ ಸಿನಿಮಾ ಎರಡು ದಿನದ ಹಿಂದಷ್ಟೆ ಬಿಡುಗಡೆ ಆಗಿ ಹಿಟ್ ಆಗುವತ್ತ ಸಾಗುತ್ತಿದೆ. ಸಿನಿಮಾವನ್ನು ಪ್ರೇಕ್ಷಕರು, ಶಿವಣ್ಣನ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸಿನಿಮಾದಲ್ಲಿ ಶಿವಣ್ಣನ ಮಾಸ್ ಅವತಾರವನ್ನು ಕೊಂಡಾಡುತ್ತಿದ್ದಾರೆ. ಆದರೆ ಸಿನಿಮಾದ ಅವಧಿ ಚಿಕ್ಕದಾಯಿತು ಎಂದು ಕೆಲವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ‘ಘೋಸ್ಟ್’ ಅನ್ನು ಮೆಚ್ಚಿಕೊಂಡ ಪ್ರೇಕ್ಷಕರಿಗೆ ಶ್ರೀನಿ ಖುಷಿ ಸುದ್ದಿಯೊಂದನ್ನು ನೀಡಿದ್ದು, ‘ಘೋಸ್ಟ್’ ಸಿನಿಮಾದ ಎರಡನೇ ಭಾಗ ನಿರ್ಮಾಣವಾಗಲಿದೆ ಎಂದಿದ್ದಾರೆ.

ಈ ಕುರಿತು ಇಂದು (ಅಕ್ಟೋಬರ್ 21) ಟ್ವೀಟ್ ಮಾಡಿರುವ ನಿರ್ದೇಶಕ ಶ್ರೀನಿ ‘ಘೋಸ್ಟ್ 2.0’ ಬರಲಿದೆ ಎಂದಿದ್ದಾರೆ. ಮಾತ್ರವಲ್ಲದೆ, ಈಗಿನ ‘ಘೋಸ್ಟ್’ ಸಿನಿಮಾದಲ್ಲಿ ಉತ್ತರ ನೀಡದೇ ಬಿಟ್ಟಿದ್ದ ಹಲವು ಪ್ರಶ್ನೆಗಳಿಗೆ ‘ಘೋಸ್ಟ್ 2.0’ ಸಿನಿಮಾದಲ್ಲಿ ಉತ್ತರ ನೀಡುವುದಾಗಿಯೂ ಹೇಳಿದ್ದಾರೆ. ದಳವಾಯಿ ಬದುಕಿದ್ದಾನ ?, ಅಂಡರ್​ಪಾಸ್ ಒಳಗಡೆ ಕಾರು, ಬೈಕ್​ಗಳು ಹೆಂಗೆ ಬಂದವು ? ಶಿವಣ್ಣ, ಆ ವಿಗ್ರಹದ ಒಳಗಡೆ ಹೇಗೆ ಹೋದರು? ಬೋಟ್​ಗಳನ್ನು ಆಪರೇಟ್ ಮಾಡಿದ್ದು ಯಾರು? ದಳವಾಯಿ ಮಗ ಯಾರು ? ಈ ಎಲ್ಲ ಪ್ರಶ್ನೆಗಳಿಗೂ ‘ಘೋಸ್ಟ್ 2.0’ ನಲ್ಲಿ ಉತ್ತರ ಸಿಗಲಿದೆ ಎಂದಿದ್ದಾರೆ.

ಇದನ್ನೂ ಓದಿ:ಜೈಲರ್ ಬಳಿಕ ಹಲವು ತಮಿಳು ಅವಕಾಶ: ಮಾಹಿತಿ ನೀಡಿದ ಶಿವರಾಜ್ ಕುಮಾರ್

‘ಘೋಸ್ಟ್’ ಸಿನಿಮಾದಲ್ಲಿ ಕೆಲವು ಸನ್ನಿವೆಶಗಳಲ್ಲಿ ಲಾಜಿಕ್ ಮಿಸ್ ಆಗಿದೆ, ಕೆಲವು ದೃಶ್ಯಗಳಿಗೆ ಸೂಕ್ತ ಕಾರಣಗಳೇ ಇಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಈಗ ಶ್ರೀನಿ ಮಾಡಿರುವ ಟ್ವೀಟ್​ನ ಪ್ರಕಾರ, ಶ್ರೀನಿ ಉದ್ದೇಶಪೂರ್ವಕವಾಗಿಯೇ ಕೆಲವು ವಿಷಯಗಳನ್ನು ಮುಚ್ಚಿಟ್ಟಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ‘ಘೋಸ್ಟ್ 2.0’ ಸಿನಿಮಾ ಮೂಲಕ ಆ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ನೀಡಲಿದ್ದಾರೆ. ಅಥವಾ ಘೋಸ್ಟ್​ ಸಿನಿಮಾ ನೋಡಿ ಜನ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲೆಂದೇ ‘ಘೋಸ್ಟ್ 2’ ನಿರ್ದೇಶಿಸುತ್ತಿದ್ದಾರೆಯೋ ಎಂಬ ಅನುಮಾನವೂ ಇಲ್ಲದಿಲ್ಲ.

‘ಘೋಸ್ಟ್’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಭಿನ್ನ ಷೇಡ್​ನ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ಸಹ ಇದ್ದಾರೆ. ಮಲಯಾಳಂ ನಟ ಜಯರಾಂ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಕೆಜಿಎಫ್’ ಸಿನಿಮಾದ ಯಶ್​ರ ತಾಯಿ ಅರ್ಚನಾ ಜೋಯಿಸ್ ಸಹ ಇದ್ದಾರೆ. ಸಿನಿಮಾವನ್ನು ಶ್ರೀನಿ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ಸಂದೇಶ್ ನಾಗರಾಜ್. ಸಿನಿಮಾಕ್ಕೆ ಸಂಗೀತವನ್ನು ಅರ್ಜುನ್ ಜನ್ಯ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ