‘ಜೈಲರ್’ ಬಳಿಕ ಹಲವು ತಮಿಳು ಅವಕಾಶ: ಮಾಹಿತಿ ನೀಡಿದ ಶಿವರಾಜ್ ಕುಮಾರ್
Shiva Rajkumar: 'ಜೈಲರ್' ಸಿನಿಮಾ ಬಳಿಕ ತಮಿಳಿನಿಂದ ಹಲವು ಆಫರ್ಗಳು ಶಿವಣ್ಣನನ್ನು ಅರಸಿ ಬರುತ್ತಿವೆ. ತಮಗೆ ಕತೆ ಹೇಳಿರುವ ನಿರ್ದೇಶಕರು, ಸಿನಿಮಾ ಮಾಡಲು ಮುಂದೆ ಬಂದಿರುವ ತಮಿಳು ನಿರ್ಮಾಪಕರ ಪಟ್ಟಿಯನ್ನು ಶಿವಣ್ಣ ನೀಡಿದ್ದಾರೆ.
‘ಜೈಲರ್‘ (Jailer) ಸಿನಿಮಾದ ಅತಿಥಿ ಪಾತ್ರ ಶಿವರಾಜ್ ಕುಮಾರ್ (Shiva Rajkumar) ಅವರಿಗೆ ಅವಕಾಶಗಳ ಹೆಬ್ಬಾಗಿಲನ್ನು ತಮಿಳು-ತೆಲುಗು ಚಿತ್ರರಂಗದಲ್ಲಿ ತೆರೆದಿಟ್ಟಿದೆ. ‘ಜೈಲರ್’ ಸಿನಿಮಾ ಬಳಿಕ ತಮಿಳು ಸಿನಿಮಾ ಪ್ರೇಕ್ಷಕರು ಶಿವಣ್ಣನನ್ನು ತಮ್ಮವರೇ ಎಂಬಂತೆ ಆದರಿಸುತ್ತಿದ್ದಾರೆ. ತಮಿಳರ ಪಾಲಿಗೆ ಇಷ್ಟು ದಿನ ಶಿವರಾಜ್ ಕುಮಾರ್ ಆಗಿದ್ದವರು ಈಗ ಶಿವಣ್ಣನೇ ಆಗಿದ್ದಾರೆ. ತಮಿಳು ಅಭಿಮಾನಿಗಳ ಆದರದ ಜೊತೆಗೆ ಹಲವು ಸಿನಿಮಾ ಅವಕಾಶಗಳು ಸಹ ತಮಿಳಿನಿಂದ ಶಿವಣ್ಣನಿಗಾಗಿ ಬರುತ್ತಿವೆ. ಈ ಬಗ್ಗೆ ಸ್ವತಃ ಶಿವರಾಜ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ತಮಿಳು ಸಿನಿಮಾ ವಿಮರ್ಶಕರೊಬ್ಬರಿಗೆ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಚೆನ್ನೈ ಜೊತೆಗಿನ ತಮ್ಮ ಬಂಧದ ಜೊತೆಗೆ ಹಲವು ವಿಷಯಗಳನ್ನು ಶಿವರಾಜ್ ಕುಮಾರ್ ಮಾತನಾಡಿದ್ದು, ಜೊತೆಗೆ ‘ಜೈಲರ್’ ಸಿನಿಮಾದ ಬಳಿಕ ತಮಿಳಿನಿಂದ ಬರುತ್ತಿರುವ ಅವಕಾಶಗಳು, ಕತೆ ಹೇಳಿರುವ ನಿರ್ದೇಶಕರು, ನಿರ್ಮಾಪಕರ ಮಾಹಿತಿಯನ್ನೂ ಸಹ ಶಿವಣ್ಣ ಬಿಚ್ಚಿಟ್ಟಿದ್ದಾರೆ.
”ತಮಿಳಿನ ಕೆಲವು ನಿರ್ಮಾಪಕರು, ನಿರ್ದೇಶಕರು ಈಗಾಗಲೇ ಸಂಪರ್ಕ ಮಾಡಿದ್ದಾರೆ. ಎರಡು ಮೂರು ಬಹಳ ಒಳ್ಳೆಯ ಕತೆಗಳನ್ನು ಕೇಳಿದ್ದೇನೆ. ನಿರ್ಮಾಪಕರುಗಳಂತೂ ಬಹಳ ಉತ್ಸುಕರಾಗಿದ್ದಾರೆ. ನಾನೇ ತುಸು ಹಿಂಜರಿಯುತ್ತಿದ್ದೇನೆ. ಬಜೆಟ್ ಹೆಚ್ಚಾಗುತ್ತದೇನೋ, ಸ್ವಲ್ಪ ಕಡಿಮೆ ಬಜೆಟ್ನಲ್ಲಿ ಮಾಡಬಹುದೇನೋ ಎಂದಿದ್ದೇನೆ. ಆದರೆ ಅವರು ಪರ್ವಾಗಿಲ್ಲ, ನಿಮಗೆ ಶಕ್ತಿ ಇದೆ, ಖಂಡಿತ ದೊಡ್ಡದಾಗಿಯೇ ಮಾಡೋಣ ಅನ್ನುತ್ತಿದ್ದಾರೆ” ಎಂದಿದ್ದಾರೆ ಶಿವಣ್ಣ.
ಇದನ್ನೂ ಓದಿ:ಬಾಲಿವುಡ್ನಲ್ಲಿ ಹವಾ ಎಬ್ಬಿಸಲು ಶಿವರಾಜ್ ಕುಮಾರ್ ರೆಡಿ: ಏನಿದು ಹೊಸ ಸುದ್ದಿ?
”ಕುಮ್ಕಿ’ ಸಿನಿಮಾ ನಿರ್ದೇಶನ ಮಾಡಿರುವ ಪ್ರಭು ಸಾಲೋಮನ್ ಬಹಳ ಒಳ್ಳೆಯ ಕತೆ ಹೇಳಿದ್ದಾರೆ. ಅದಾದ ಬಳಿಕ ಕಮಲ್ ಹಾಸನ್ ಅವರ ಮ್ಯಾನೇಜರ್ ಆಗಿದ್ದ ತೆನ್ನಪ್ಪನ್ ಅವರು ಒಂದು ಬಹಳ ಒಳ್ಳೆಯ ಕತೆ ತೆಗೆದುಕೊಂಡು ಬಂದಿದ್ದರು. ಸಿನಿಮಾದ ಹೆಸರು ‘ಪೋರ್ನು ಮನ್ನನ್’ ಎಂದು ಅದು ಸಹ ಬಹಳ ಚೆನ್ನಾಗಿದೆ. ಇನ್ನೊಬ್ಬರು ವಡಿವೇಲು ಎಂದೇನೋ ಹೆಸರಿದೆ ಅವರು ಸಹ ಕತೆ ಹೇಳಿದ್ದಾರೆ. ಎಲ್ಲವೂ ಭಿನ್ನವಾದ ಕತೆಗಳು, ಸಾಮಾನ್ಯ ಕತೆಗಳ ಮಾದರಿ ಇಲ್ಲ. ನೋಡೋಣ ಏನಾಗುತ್ತದೆಯೋ” ಎಂದಿದ್ದಾರೆ ಶಿವರಾಜ್ ಕುಮಾರ್.
ಈಗ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ನಿರ್ಮಾಣ ಮಾಡುತ್ತಿರುವ ಅರ್ಜುನ್ ತ್ಯಾಗರಾಜನ್ ಹಾಗೂ ಸೆಂದಿಲ್ ತ್ಯಾಗರಾಜನ್ ಅವರು ಸಹ ಇನ್ನೊಂದು ಸಿನಿಮಾ ಮಾಡುವ ಬಗ್ಗೆ ಹೇಳಿದ್ದಾರೆ. ಈ ಹಿಂದೆಯೇ ಅವರೊಟ್ಟಿಗೆ ಸಿನಿಮಾ ಮಾಡಬೇಕಿತ್ತು, ಆ ಸಿನಿಮಾವನ್ನು ರವಿ ಅರಸು ಅವರು ನಿರ್ದೇಶನ ಮಾಡಬೇಕಿತ್ತು. ಆದರೆ ಆ ಸಿನಿಮಾ ಕೋವಿಡ್ ಕಾರಣಕ್ಕೆ ನಿಂತಿತು. ಮತ್ತೆ ಮುಂದುವರೆಸುವ ಯೋಜನೆಯೂ ಇದೆ. ಅದಕ್ಕೂ ಮುನ್ನ ತಮಿಳಿನ ‘ವಿಸ್ವಾಸಂ’ ಸಿನಿಮಾದ ರೀಮೇಕ್ ಅವರ ನಿರ್ಮಾಣದಲ್ಲಿಯೇ ಮಾಡಬೇಕಿತ್ತು, ಆದರೆ ಆ ಯೋಜನೆ ಕೈಬಿಟ್ಟೆವು” ಎಂದು ಮಾಹಿತಿ ನೀಡಿದ್ದಾರೆ ಶಿವರಾಜ್ ಕುಮಾರ್.
ಶಿವಣ್ಣನಿಗೆ ಕತೆ ಹೇಳಿರುವ ಪ್ರಭು ಸಾಲೋಮನ್ ತಮಿಳಿನ ಪ್ರತಿಭಾವಂತ ನಿರ್ದೇಶಕರಲ್ಲೊಬ್ಬರು. ಮಾಮೂಲಿ ಕಮರ್ಶಿಯಲ್, ಮಾಸ್ ಮಸಾಲ ಸಿನಿಮಾಗಳ ಬದಲಿಗೆ ಹಳ್ಳಿಗಾಡು, ಅರಣ್ಯ ವಾಸಿಗಳ ಜನರ ಬಗ್ಗೆ ಹೆಚ್ಚು ಸಿನಿಮಾ ಮಾಡಿದ್ದಾರೆ. ಈ ಹಿಂದೆ ‘ಕುಮ್ಕಿ’, ‘ಮೈನಾ’, ‘ಅರಣ್ಯಂ’ ಇನ್ನೂ ಕೆಲವು ಅತ್ಯುತ್ತಮ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದಾರೆ. ಇನ್ನು ಕಮಲ್ ಹಾಸನ್ ಮ್ಯಾನೇಜರ್ ಆಗಿದ್ದ ತೇನಪ್ಪನ್ ಈಗ ತಮಿಳಿನ ಜನಪ್ರಿಯ ನಿರ್ಮಾಪಕರಲ್ಲಿ ಒಬ್ಬರಾಗಿದ್ದು, ‘ಪಡೆಯಪ್ಪ’, ‘ತೆನಾಲಿ’, ‘ಪಂಚತಂತಿರಂ’, ‘ವಲ್ಲವನ್’, ‘ಕತ್ತಲ ಕತ್ತಲ’ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಮಲಯಾಳಂನ ‘ಪೇರಂಬು’ ಸಿನಿಮಾದ ನಿರ್ಮಾಪಕರು ಸಹ ಇವರೇ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ