ಹಿರಿಯ ನಟ ದೊಡ್ಡಣ್ಣ ಮೃತಪಟ್ಟಿದ್ದಾರೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬುಧವಾರ (ಮೇ 5) ಕಾಡ್ಗಿಚ್ಚಿನಂತೆ ಹಬ್ಬಿತ್ತು. ಅನೇಕರಿಗೆ ಈ ವಿಚಾರ ಶಾಕ್ ನೀಡಿತ್ತು. ‘ಇದು ಕಿಡಿಗೇಡಿಗಳ ಕೆಲಸ. ನಾನು ಆರಾಮಾಗಿದ್ದೇನೆ’ ಎಂದು ಸ್ವತಃ ದೊಡ್ಡಣ್ಣ ಸ್ಪಷ್ಟನೆ ನೀಡಿದ್ದಾರೆ.
ಇಂದು ಮುಂಜಾನೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ದೊಡ್ಡಣ್ಣ ಅವರ ಫೋಟೋವನ್ನು ಹಾಕಿ RIP ಎಂದು ಬರೆದುಕೊಂಡಿದ್ದರು. ಕೊರೊನಾದಿಂದ ಚಿತ್ರರಂಗದ ಅನೇಕರು ಮೃತಪಡುತ್ತಿದ್ದಾರೆ. ಇದು ಸಿನಿಪ್ರಿಯರಿಗೆ ಸಾಕಷ್ಟು ಬೇಸರ ತರಿಸಿದೆ. ಇತ್ತೀಚೆಗೆ ನಿರ್ಮಾಪಕ ಕೋಟಿ ರಾಮು ತೀರಿಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೊಡೆತ ನೀಡಿತ್ತು. ಹೀಗಾಗಿ, ದೊಡ್ಡ ಮೃತಪಟ್ಟಿದ್ದಾರೆ ಎಂಬುದು ನಿಜ ಇರಬಹುದು ಎಂದು ಕೆಲವರು ಭಾವಿಸಿದ್ದರು.
ಈ ವಿಚಾರ ದೊಡ್ಡಣ್ಣ ಅವರ ಕಿವಿಗೂ ಬಿದ್ದಿದೆ. ಈ ಬಗ್ಗೆ ಅವರು ವಿಡಿಯೋ ಒಂದನ್ನು ಮಾಡಿ ಹಾಕಿದ್ದಾರೆ. ‘ಎಲ್ಲರಿಗೂ ನನ್ನ ನಮಸ್ಕಾರ. ಇವತ್ತು ಮುಂಜಾನೆ ಸಾಮಾಜಿಕ ಜಾಲತಾಣದಲ್ಲಿ ಯಾರೋ ಕಿಡಿಗೇಡಿಗಳು ನನ್ನ ಫೋಟೋ ಹಾಕಿ RIP ಎಂದು ಬರೆದಿದ್ದರು. ಹೀಗಾಗಿ ದೊಡ್ಡಣ್ಣ ನಿಧನರಾದರು ಎನ್ನುವ ಸುದ್ದಿ ಹರಿದಾಡಿತ್ತು. ಮಾಧ್ಯಮ ಮಿತ್ರರು, ನನ್ನ ಗೆಳೆಯರು, ಅಭಿಮಾನಿಗಳು ಕರೆ ಮಾಡುತ್ತಿದ್ದಾರೆ. ನಾನು ಮನೆಯಲ್ಲೇ ಇದ್ದೇನೆ. ಆರೋಗ್ಯವಾಗಿದ್ದೇನೆ. ಯಾರೂ ಭಯಪಡುವ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.
ದೊಡ್ಡಣ್ಣ ವಿಡಿಯೋ ಹಾಕುವುದಕ್ಕೂ ಮೊದಲು ಹಿರಿಯ ಕಲಾವಿದ ಡಿಂಗ್ರಿ ನಾಗರಾಜ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ದೊಡ್ಡಣ್ಣ ಕ್ಷೇಮವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಸುಳ್ಳು ಸುದ್ದಿ ಎಂದು ಅವರು ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ: ತಲೆ ಬಾಗಿ ಕ್ಷಮೆ ಕೋರುವೆ; ರಾಮು ನಿಧನದ ಬಗ್ಗೆ ಮಾಲಾಶ್ರೀಗೆ ಜಗ್ಗೇಶ್ ಹೀಗೆ ಹೇಳಿದ್ದೇಕೆ?
Published On - 5:20 pm, Wed, 5 May 21