ತಲೆ ಬಾಗಿ ಕ್ಷಮೆ ಕೋರುವೆ; ರಾಮು ನಿಧನದ ಬಗ್ಗೆ ಮಾಲಾಶ್ರೀಗೆ ಜಗ್ಗೇಶ್ ಹೀಗೆ ಹೇಳಿದ್ದೇಕೆ?
ಪತಿಯ ನಿಧನದಿಂದ ಕಂಗೆಟ್ಟಿರುವ ಮಾಲಾಶ್ರೀ ಅವರಿಗೆ ಚಿತ್ರರಂಗದ ಅನೇಕರು ಸಾಂತ್ವನ ಹೇಳುತ್ತಿದ್ದಾರೆ. ಜಗ್ಗೇಶ್ ಕೂಡ ಮಾಲಾಶ್ರೀಗೆ ಸಮಾಧಾನದ ಮಾತುಗಳನ್ನು ಹೇಳಲು ಪ್ರಯತ್ನಿಸಿದ್ದಾರೆ.
ಕೊರೊನಾ ವೈರಸ್ನಿಂದ ಊರೆಲ್ಲವೂ ಸ್ಮಶಾನದಂತೆ ಕಾಣಲು ಆರಂಭಿಸಿದೆ. ಜನಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಈ ಸಂದರ್ಭದಲ್ಲಿ ಅಸಹಾಯಕರಾಗಿದ್ದಾರೆ. ಸೋಂಕಿತರ ಜೊತೆಯಲ್ಲಿ ಇದ್ದು ಅವರನ್ನು ಆರೈಕೆ ಮಾಡುವ ಅವಕಾಶವನ್ನೂ ನೀಡದಷ್ಟು ಕ್ರೂರಿ ಆಗಿದೆ ಈ ಕಾಯಿಲೆ. ಅದಕ್ಕಿಂತಲೂ ಮುಖ್ಯವಾಗಿ ವ್ಯವಸ್ಥೆಯೇ ಹಳಿ ತಪ್ಪಿದೆ. ಕೆಲವೇ ದಿನಗಳ ಹಿಂದೆ ಖ್ಯಾತ ನಿರ್ಮಾಪಕ ಕೋಟಿ ರಾಮು ನಿಧನರಾದರು. ಆ ಬಗ್ಗೆ ನಟ ಜಗ್ಗೇಶ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೋಟಿ ರಾಮು ಅಸುನೀಗಿದ್ದಾರೆ ಎಂದು ಯಾರಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ. ಏಕಾಏಕಿ ಅವರು ಕೊರೊನಾಗೆ ಬಲಿಯಾದರು. ರಾಮು ನಿಧನದಿಂದ ಹೆಚ್ಚು ಆಘಾತಕ್ಕೆ ಒಳಗಾಗಿರುವುದು ಅವರ ಪತ್ನಿ, ನಟಿ ಮಾಲಾಶ್ರೀ. ಪತಿಯ ನಿಧನದಿಂದ ಕಂಗೆಟ್ಟಿರುವ ಅವರಿಗೆ ಚಿತ್ರರಂಗದ ಅನೇಕರು ಸಾಂತ್ವನ ಹೇಳುತ್ತಿದ್ದಾರೆ. ಜಗ್ಗೇಶ್ ಕೂಡ ಮಾಲಾಶ್ರೀಗೆ ಸಮಾಧಾನದ ಮಾತುಗಳನ್ನು ಹೇಳಲು ಪ್ರಯತ್ನಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.
‘ಮಾಲಾಶ್ರೀ ಮೇಡಂ, ನಿಮ್ಮ ಸಂಕಷ್ಟದಲ್ಲಿ ಭಾಗಿ ಆಗುವ ಯೋಗ್ಯತೆ ಇಲ್ಲದಂತೆ ಮಾಡಿದ ಈ ಸಮಯಕ್ಕೆ ತಲೆ ಬಾಗಿ ಕ್ಷಮೆ ಕೋರುವೆ. ತಮ್ಮ ನೋವಿಗೆ ಸಾಂತ್ವನ ಹೇಳುವ ಶಕ್ತಿಮಾತ್ರ ಉಳಿದಿದೆ. ಕನ್ನಡ ಚಿತ್ರರಂಗಕ್ಕೆ ಅನನ್ಯ ಸೇವೆ ಮಾಡಿ ಚಿತ್ರರಂಗದ ಅನೇಕ ಕಾರ್ಮಿಕರಿಗೆ ಅನ್ನ ನೀಡಿದ ಮಹನೀಯ ನನ್ನ ತಮ್ಮ ರಾಮು. ಅವನ ಆತ್ಮಕ್ಕೆ ಶಾಂತಿಕೋರಿ ನಿಮ್ಮ ಮನೆಯಲ್ಲೇ ರಾಮು ಹುಟ್ಟಿಬರಲಿ ಎಂದು ರಾಯರಲ್ಲಿ ಪ್ರಾರ್ಥನೆ’ ಅಂತ ಜಗ್ಗೇಶ್ ಬರೆದುಕೊಂಡಿದ್ದಾರೆ.
‘ದಯಮಾಡಿ ನೀವು ಧೈರ್ಯದಿಂದ ಈ ಸಂಕಷ್ಟ ಎದುರಿಸಿ. ಮಕ್ಕಳನ್ನು ರಾಮು ಎತ್ತರಕ್ಕೆ ಬೆಳಸಿ. ನಿಮ್ಮ ಜೊತೆ ನಾವು ಉದ್ಯಮದ ಎಲ್ಲಾ ಸ್ನೇಹಿತರು ಸದಾ ಇರುತ್ತೇವೆ. ಮುಂದಿನ ಸಾಂಸಾರಿಕ ಜೀವನ ನಿಭಾಯಿಸುವ ಶಕ್ತಿ ರಾಯರು ನಿಮಗೆ ನೀಡಲಿ’ ಎಂದು ಜಗ್ಗೇಶ್ ಅವರು ಮಾಲಾಶ್ರೀಗೆ ಧೈರ್ಯ ತುಂಬಿದ್ದಾರೆ. ಕೆಲವು ದಿನಗಳಿಂದ ಸ್ವತಃ ಜಗ್ಗೇಶ್ ಅವರ ಕುಟುಂಬದಲ್ಲಿ ಕೊರೊನಾ ಕಣ್ಣಾಮುಚ್ಚಾಲೆ ಆಡಿದೆ. ಅವರ ಸಹೋದರ ಕೋಮಲ್ ಕುಮಾರ್ ಅವರಿಗೂ ಕೊವಿಡ್ ಸೋಂಕು ತಗುಲಿತ್ತು.
@RamuMalashree ಮೇಡಂ ನಿಮ್ಮ ಸಂಕಷ್ಟದಲ್ಲಿ ಭಾಗಿ ಆಗುವ ಯೋಗ್ಯತೆ ಇಲ್ಲದಂತೆ ಮಾಡಿದ ಈ ಸಮಯಕ್ಕೆ ತಲೆಬಾಗಿ ಕ್ಷಮೆ ಕೋರುವೆ! ತಮ್ಮ ನೋವಿಗೆ ಸಾಂತ್ವನ ಹೇಳುವ ಶಕ್ತಿಮಾತ್ರ ಉಳಿದಿದೆ! ಕನ್ನಡ ಚಿತ್ರರಂಗಕ್ಕೆ ಅನನ್ಯ ಸೇವೆಮಾಡಿ ಅನೇಕ ಚಿತ್ರರಂಗದ ಕಾರ್ಮಿಕರಿಗೆ ಅನ್ನನೀಡಿದ ಮಹನೀಯ ನನ್ನ ತಮ್ಮ ರಾಮು. ಅವನ ಆತ್ಮಕ್ಕೆ ಶಾಂತಿಕೋರಿ ನಿಮ್ಮ ಮನೆಯಲ್ಲೆ
— ನವರಸನಾಯಕ ಜಗ್ಗೇಶ್ (@Jaggesh2) April 30, 2021
ನಟ ಕೋಮಲ್ ಕುಮಾರ್ಗೆ ಕೊರೊನಾ ವೈರಸ್ ತಗುಲಿರುವ ವಿಚಾರವನ್ನು ಜಗ್ಗೇಶ್ ಮುಚ್ಚಿಟ್ಟಿದ್ದರು. ರಹಸ್ಯವಾಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಅಂತೂ ಕೋಮಲ್ ಗುಣಮುಖರಾಗಿದ್ದಾರೆ. ಅವರು ಗುಣಮುಖರಾದ ಬಳಿಕವೇ ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಜಗ್ಗೇಶ್ ಹಂಚಿಕೊಂಡರು.
ಇದನ್ನೂ ಓದಿ: ನಟ ಕೋಮಲ್ಗೆ ಕೊರೊನಾ; ರಹಸ್ಯವಾಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಜಗ್ಗೇಶ್
Ramu Death: ನಿಧನಕ್ಕೂ ಮುನ್ನ ಫೋನ್ನಲ್ಲಿ ಕೊವಿಡ್ ಕಷ್ಟ ವಿವರಿಸಿದ್ದ ಕೋಟಿ ರಾಮು