ನಟ ಕೋಮಲ್​ಗೆ ಕೊರೊನಾ; ರಹಸ್ಯವಾಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಜಗ್ಗೇಶ್​​

Komal Kumar: ನಾನು ಇಷ್ಟು ದಿನ ಮುಚ್ಚಿಟ್ಟು ಪಡುತ್ತಿದ್ದ ಯಾತನೆ ರಾಯರಿಗೆ ಮಾತ್ರ ಗೊತ್ತು. ನನ್ನ ತಮ್ಮನಿಗೆ ಸಾವು ಗೆಲ್ಲುವ ಶಕ್ತಿ ನೀಡಿ ಅಂತ ರಾಯರು ಬಳಿ ಬೇಡಿಕೊಂಡಿದ್ದೆ ಎಂದು ಜಗ್ಗೇಶ್​ ಹೇಳಿದ್ದಾರೆ.

ನಟ ಕೋಮಲ್​ಗೆ ಕೊರೊನಾ; ರಹಸ್ಯವಾಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಜಗ್ಗೇಶ್​​
ಜಗ್ಗೇಶ್​ - ಕೋಮಲ್​ ಕುಮಾರ್​
Madan Kumar

|

Apr 27, 2021 | 4:37 PM

ಕೊರೊನಾ ವೈರಸ್​ ಎರಡನೇ ಅಲೆಗೆ ಜನಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಯಾತನೆ ಅನುಭವಿಸುವಂತಾಗಿದೆ. ಅನೇಕ ಕಲಾವಿದರು ಕೊವಿಡ್​ ಸೋಂಕಿಗೆ ಒಳಗಾಗಿ ಕಷ್ಟಪಡುತ್ತಿದ್ದಾರೆ. ಸೋಮವಾರವಷ್ಟೇ (ಏ.26) ನಿರ್ಮಾಪಕ ಕೋಟಿ ರಾಮು ಕೊರೊನಾ ವೈರಸ್​ಗೆ ಬಲಿ ಆಗಿದ್ದಾರೆ. ಸ್ಯಾಂಡಲ್​ವುಡ್​ನ ಖ್ಯಾತ ನಟ ಕೋಮಲ್​ ಕುಮಾರ್​ ಅವರಿಗೂ ಈ ಮಹಾಮಾರಿ ತಗುಲಿತ್ತು. ಆದರೆ ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಕೋಮಲ್​ ಅಣ್ಣ ಜಗ್ಗೇಶ್​ ಅವರು ಈ ವಿಚಾರವನ್ನು ಸೋಶಿಯಲ್​ ಮೀಡಿಯಾ ಮೂಲಕ ಬಹಿರಂಗ ಪಡಿಸಿದ್ದಾರೆ. ಅಚ್ಚರಿ ಏನೆಂದರೆ, ಹಲವು ದಿನಗಳ ಹಿಂದೆಯೇ ಕೋಮಲ್​ ಅವರಿಗೆ ಕೊರೊನಾ ಪಾಸಿಟಿವ್​ ಆಗಿತ್ತು. ಆದರೆ ಈ ವಿಷಯವನ್ನು ಜಗ್ಗೇಶ್​ ಮುಚ್ಚಿಟ್ಟಿದ್ದರು. ಯಾರಿಗೂ ಗೊತ್ತಾಗದಂತೆ ರಹಸ್ಯವಾಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಂತೂ ಕೋಮಲ್​ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯನ್ನು ಈಗ ಜಗ್ಗೇಶ್​ ಹಂಚಿಕೊಂಡಿದ್ದಾರೆ.

‘ಚಿತ್ರರಂಗದಲ್ಲಿ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕಲು ಸ್ವಂತ ವ್ಯವಹಾರವನ್ನು ಬೆಂಗಳೂರಿನ ಕಾರ್ಪೊರೇಷನ್​ನಲ್ಲಿ ಶುರುಮಾಡಿ ಯಶಸ್ವಿಯಾದ. ಆದರೆ ಇತ್ತೀಚೆಗೆ ತನಗೆ ಬರಬೇಕಾದ ಬಿಲ್​ಗೆ ಅಲ್ಲಿನ ಕೆಲ ಲಂಚಬಾಕ ಅಧಿಕಾರಿಗಳು ಹಣಕ್ಕೆ ಪೀಡಿಸಿ ಅಲೆಸಿಬಿಟ್ಟರು. ಅದನ್ನು ಪಡೆಯಲು ದಿನ ಓಡಾಡುತ್ತಿದ್ದ ತಮ್ಮನಿಗೆ ಕೊರೊನಾ ಮಾರಿ ಮೈಸೇರಿ ತುಂಬ ಸೀರಿಯಸ್​ ಆಗಿಬಿಟ್ಟ. ದೇವರಿಗೆ ಗೊತ್ತು ನಾನು ಎಲ್ಲರಿಂದ ಮುಚ್ಚಿಟ್ಟು ಅಣ್ಣನಾಗಿ ಅವನ ಉಳಿಸಿಕೊಂಡ ಕಷ್ಟ. ಅವನಿಗೆ ಸಹಾಯ ಮಾಡಿದ ಡಾ. ಮಧುಮತಿ, ನಾದನಿ ಡಾ. ಲಲಿತಾ, ನರ್ಸಗಳ ಪಾದಕ್ಕೆ ನನ್ನ ನಮನ’ ಎಂದು ಜಗ್ಗೇಶ್​ ಟ್ವೀಟ್​ ಮಾಡಿದ್ದಾರೆ.

ಈ ಟ್ವೀಟ್​ನ ಜೊತೆಯಲ್ಲಿ ಕೋಮಲ್​ ಆಕ್ಸಿಜನ್​ ಪಡೆಯುತ್ತಿರುವ ಫೋಟೋವನ್ನು ಕೂಡ ಅವರು ಹಂಚಿಕೊಂಡಿದ್ದಾರೆ. ‘ನಾನು ಇಷ್ಟು ದಿನ ಮುಚ್ಚಿಟ್ಟು ಪಡುತ್ತಿದ್ದ ಯಾತನೆ ರಾಯರಿಗೆ ಮಾತ್ರ ಗೊತ್ತು. ನನ್ನ ತಮ್ಮನಿಗೆ ಸಾವು ಗೆಲ್ಲುವ ಶಕ್ತಿ ನೀಡಿ ಎಂದು ರಾಯರು ಬಳಿ ನಾನು ಇಟ್ಟ ಬೇಡಿಕೆಗೆ ಬೃಂದಾವನದಿಂದ ಎದ್ದುಬಂದು ಪಕ್ಕನಿಂತು ಅವನ ಉಳಿಸಿಬಿಟ್ಟರು. ಈಗ ಕೋಮಲ್​ ಸುರಕ್ಷಿತನಾಗಿದ್ದಾನೆ’ ಎಂದು ಜಗ್ಗೇಶ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೊರೊನಾ ಸಾವಿನ ಫೇಕ್​ ವಿಡಿಯೋಗಳು ವೈರಲ್​; ಎಚ್ಚರಿಕೆ ನೀಡಿದ ಜಗ್ಗೇಶ್​

ತಿನ್ನಲು ಅನ್ನ ಸಿಗದೇ ಸಾಯುತ್ತೀರಿ! ಜಗ್ಗೇಶ್​ ತೀವ್ರವಾಗಿ ನೊಂದು ಹೀಗೆ ಶಾಪ ಹಾಕಿದ್ದು ಯಾರಿಗೆ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada