AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸಾವಿನ ಫೇಕ್​ ವಿಡಿಯೋಗಳು ವೈರಲ್​; ಎಚ್ಚರಿಕೆ ನೀಡಿದ ಜಗ್ಗೇಶ್​

ವೈರಲ್​ ಆಗಿರುವ ವಿಡಿಯೋಗಳ ಸತ್ಯಾಸತ್ಯತೆ ಏನು ಎಂಬುದು ಯಾರಿಗೂ ತಿಳಿದಿಲ್ಲ. ಹಾಗಿದ್ದರೂ ಅವುಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಲಾಗುತ್ತಿದೆ. ಅದರ ಬಗ್ಗೆ ನಟ ಜಗ್ಗೇಶ್​ ಪ್ರತಿಕ್ರಿಯೆ ನೀಡಿದ್ದಾರೆ.

ಕೊರೊನಾ ಸಾವಿನ ಫೇಕ್​ ವಿಡಿಯೋಗಳು ವೈರಲ್​; ಎಚ್ಚರಿಕೆ ನೀಡಿದ ಜಗ್ಗೇಶ್​
ನಟ ಜಗ್ಗೇಶ್​​
ಮದನ್​ ಕುಮಾರ್​
|

Updated on: Apr 27, 2021 | 4:03 PM

Share

ಕೊರೊನಾ ಎಂದರೆ ಸಾಕು ಜನರು ಬೆಚ್ಚಿ ಬೀಳುವಂತಹ ವಾತಾವರಣ ನಿರ್ಮಾಣ ಆಗಿದೆ. ಪ್ರತಿ ದಿನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಅದೇ ರೀತಿ ಸಾವಿನ ಪ್ರಮಾಣದಲ್ಲೂ ಏರಿಕೆ ಆಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ, ಇದೇ ಸಮಯವನ್ನು ಬಳಸಿಕೊಂಡು ಕೆಲವರು ದುಡ್ಡು ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಇದೆ. ಪರಿಸ್ಥಿತಿ ಹೀಗೆ ಚಿಂತಾಜನಕ ಆಗಿರುವಾಗ ಜನರನ್ನು ಇನ್ನಷ್ಟು ಬೆಚ್ಚಿ ಬೀಳಿಸುವ ವಿಡಿಯೋಗಳು ಈಗ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಲಾಕ್​ಡೌನ್​ನಿಂದ ಕೆಲಸ ಇಲ್ಲದೆ ಮನೆಯಲ್ಲಿ ಕೂತಿರುವ ಹಲವರು ಸೋಶಿಯಲ್​ ಮೀಡಿಯಾವನ್ನು ಮನಬಂದಂತೆ ಬಳಸುತ್ತಿದ್ದಾರೆ. ಕೊರೊನಾ ಸೋಂಕಿತರನ್ನು ಆಸ್ಪತ್ರೆಯಲ್ಲಿ ಚಿತ್ರ ಹಿಂಸೆ ನೀಡಿ ಸಾಯಿಸಲಾಯಿತು ಎಂಬಂತೆ ಬಿಂಬಿಸಿರುವ ಕೆಲವು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಅವುಗಳ ಸತ್ಯಾಸತ್ಯತೆ ಏನು ಎಂಬುದು ಯಾರಿಗೂ ತಿಳಿದಿಲ್ಲ. ಹಾಗಿದ್ದರೂ ಅಂಥ ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಲಾಗುತ್ತಿದೆ. ಅದರ ಬಗ್ಗೆ ನಟ ಜಗ್ಗೇಶ್​ ಪ್ರತಿಕ್ರಿಯೆ ನೀಡಿದ್ದಾರೆ.

‘ದಯವಿಟ್ಟು ಹಿರಿಯನಾಗಿ ಸಲಹೆ. ಫ್ಯಾಕ್ಟ್​ ಚೆಕ್​ ಮಾಡದೆ ಇಂಥ ವಿಡಿಯೋ ಶೇರ್​ ಮಾಡದಿರಿ! ಒಂದುವೇಳೆ ಸುಳ್ಳಾಗಿದ್ದರೆ ಕಾನೂನಿನ ಕುಣಿಕೆ ನಿಮ್ಮ ಬಳಿ ಬರುತ್ತದೆ. ಸಾಮಾಜಿಕ ಜಾಲತಾಣಕ್ಕೆ ಅದರದ್ದೇ ಆದ ಕಾನೂನು ಇದೆ. ಸ್ವಲ್ಪ ವ್ಯತ್ಯಾಸವಾದರೂ ನಿಮ್ಮ ಸಹಾಯಕ್ಕೆ ಯಾರೂ ಬರರು. ಕೊವಿಡ್​ ಸಮಯದಲ್ಲಿ ಕೇಸ್​ ಬಿದ್ದರೆ ಬಹಳ ಕಷ್ಟಪಡಬೇಕಾಗುತ್ತೆ. ನಿಮ್ಮ ಒಳಿತಿಗೆ ನನ್ನ ಸಲಹೆ ಸಹೋದರ’ ಎಂದು ಟ್ವಿಟರ್​ ಬಳಕೆದಾರರೊಬ್ಬರಿಗೆ ಜಗ್ಗೇಶ್​ ಎಚ್ಚರಿಕೆ ನೀಡಿದ್ದಾರೆ.

(ಜಗ್ಗೇಶ್​ ಟ್ವೀಟ್​)

ಈಗಾಗಲೇ ಕೊರೊನಾಗೆ ಸಂಬಂಧಿಸಿದಂತೆ ಅನೇಕ ಸುಳ್ಳು ಮಾಹಿತಿಗಳು ಹರಿದಾಡುತ್ತಿವೆ. ಅದರ ಜೊತೆಗೆ ಇಂದಿನ ಯುವ ಜನತೆ ಮೊಬೈಲ್​ ಮತ್ತು ಸಾಮಾಜಿಕ ಜಾಲತಾಣವನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿದೆ. ಇದರ ಬಗ್ಗೆ ಜಗ್ಗೇಶ್​ ಬೇಸರ ವ್ಯಕ್ತಪಡಿಸಿದ್ದಾರೆ.

Jaggesh tweet

(ಜಗ್ಗೇಶ್​ ಟ್ವೀಟ್​)

‘ಏನು ಹೇಳಬೇಕೋ ಇಂದಿನ ಮಕ್ಕಳಿಗೆ ಅರಿವಾಗದು. ಜ್ಞಾನಾರ್ಜನೆಗೋ, ಸಮಾಜದ ಉಪಯುಕ್ತ ಸಂದೇಶಕ್ಕೋ ಇಂಥ ಅದ್ಭುತ ಅವಿಷ್ಕಾರ ಬಳಸದೆ, ದೊಡ್ಡವರು ಚಿಕ್ಕವರು ಅನ್ನೋ ಮರ್ಯಾದೆ ಕೊಡದೆ, ಕೇಳಬಾರದ ಕೆಟ್ಟ ಪದಪುಂಜ ಬಳಕೆ ಆಗುತ್ತಿದೆ. ಅಶ್ಲೀಲ ಸೈಟ್​ ಕಳಿಸೋದು ನೆಗೆಟಿವ್​ ಕಮೆಂಟ್ಸ್​ ಹಾಕೋದು ಯಾವ ಪುರುಷಾರ್ಥಕ್ಕೆ ಗೊತ್ತಿಲ್ಲ’ ಎಂದು ಜಗ್ಗೇಶ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ನಟಿ ಮಾಲಾಶ್ರೀ ಪತಿ, ಖ್ಯಾತ ನಿರ್ಮಾಪಕ ಕೋಟಿ ರಾಮು ಕೊವಿಡ್​ಗೆ ಬಲಿ

ತಿನ್ನಲು ಅನ್ನ ಸಿಗದೇ ಸಾಯುತ್ತೀರಿ! ಜಗ್ಗೇಶ್​ ತೀವ್ರವಾಗಿ ನೊಂದು ಹೀಗೆ ಶಾಪ ಹಾಕಿದ್ದು ಯಾರಿಗೆ?