ವರನಟ ಡಾಕ್ಟರ್ ರಾಜ್ಕುಮಾರ್ (Rajkumar) ಅವರಿಗೆ ಇಂದು (ಏಪ್ರಿಲ್ 24) ಜನ್ಮದಿನ. ಅವರು ಇಲ್ಲದೇ ಹಲವು ವರ್ಷಗಳು ಕಳೆದಿವೆ. ಅವರನ್ನು ನೆನಪಿಸಿಕೊಳ್ಳುವ ಕೆಲಸವನ್ನು ಫ್ಯಾನ್ಸ್ ಮಾಡುತ್ತಿದ್ದಾರೆ. ರಾಜ್ಕುಮಾರ್ ಹೆಸರಲ್ಲಿ ನಾನಾ ಒಳ್ಳೆಯ ಕಾರ್ಯಗಳು ನಡೆಯುತ್ತಿವೆ. ರಾಜ್ಕುಮಾರ್ ಅವರಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ ಇತ್ತು. ಅವರು ಎಂದಿಗೂ ಮಕ್ಕಳನ್ನು ಬೈದವರಲ್ಲ, ಕೋಪ ಮಾಡಿಕೊಂಡವರಲ್ಲ. ಈ ಬಗ್ಗೆ ಅವರ ಪತ್ನಿ ಪಾರ್ವತಮ್ಮ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.
ರಾಜ್ಕುಮಾರ್ ತಂದೆಯಿಂದ ಸಾಕಷ್ಟು ಪೆಟ್ಟು ತಿಂದಿದ್ದರು. ಆದರೆ, ರಾಜ್ಕುಮಾರ್ ಅವರು ಮಕ್ಕಳಿಗೆ ಹೊಡೆಯುತ್ತಿರಲಿಲ್ಲ. ‘ಶಿವರಾಜ್ಕುಮಾರ್ನ ಒಮ್ಮೆ ಹೊಡೆದಿದ್ದು ನೋಡಿದ್ದೆ ಅಷ್ಟೇ. ತಂಗಿ ಮಗನ ತಳ್ಳಿದ ಕೋಪಕ್ಕೆ ಹೊಡೆದಿದ್ದರು. ಅದೇ ಕೊನೆ, ಅದಾದ ಬಳಿಕ ಅವರು ಮಕ್ಕಳ ಮೇಲೆ ಸಿಟ್ಟು ಮಾಡೋದು ನಿಲ್ಲಿಸಿದರು. ಕೋಪ ಮಾಡಿಕೊಳ್ಳುತ್ತಲೇ ಇರಲಿಲ್ಲ ಎಂದಲ್ಲ, ಕೋಪ ಮಾಡಿಕೊಂಡರೆ ಮಾತನಾಡುವುದನ್ನೇ ಅವರು ನಿಲ್ಲಿಸುತ್ತಿದ್ದರು’ ಎಂದಿದ್ದಾರೆ ಪಾರ್ವತಮ್ಮ.
‘ದೊಡ್ಡ ಮಗನ ಮೇಲೆ ಕೋಪ ಬಂದಿತ್ತು. ಮೂರು ದಿನ ಆಗಿತ್ತು, ಸರಿಯಾಗಿ ಮಾತೇ ಆಡಿರಲಿಲ್ಲ. ಇದರಿಂದ ಅವರು ಕೂಡ ಸಾಕಷ್ಟು ಹಿಂಸೆ ಪಡುತ್ತಿದ್ದರು. ಕೊನೆಗೆ ಹಿರಿಮಗನೇ ಹೋಗಿ ಅಪ್ಪನ ತಬ್ಬಿಕೊಂಡು ಕ್ಷಮೆ ಕೇಳಿದ. ಆ ಬಳಿಕ ಎಲ್ಲವೂ ಸರಿ ಆಯಿತು’ ಎಂದಿದ್ದರು ಪಾರ್ವತಮ್ಮ. ಈ ವೇಳೆ ರಾಘವೇಂದ್ರ ರಾಜ್ಕುಮಾರ್ಗೆ ಒಂದು ಕಿವಿಮಾತು ಹೇಳಿದ್ದರು ರಾಜ್. ‘ನೀನು ಒಂಭತ್ತು ವರ್ಷಗಳ ಬಳಿಕ ಹುಟ್ಟಿದ್ದೀಯಾ. ನಿನಗೆ ನಾನು ಹೊಡೆಯೋಕೆ ಆಗಲ್ಲ’ ಎಂದು ರಾಜ್ಕುಮಾರ್ ರಾಘವೇಂದ್ರ ರಾಜ್ಕುಮಾರ್ಗೆ ಹೇಳಿದ್ದರು.
‘ದೊಡ್ಡ ಮಗಳ ಮೇಲೆ ಸಾಕಷ್ಟು ಪ್ರೀತಿ ಇತ್ತು. ಒಮ್ಮೆ ದೊಡ್ಡದಾಗಿ ಮಾತನಾಡಿದ್ದಕ್ಕೆ ಅವಳಿಗೆ ಏರು ಧ್ವನಿಯಲ್ಲಿ ತಿಳಿ ಹೇಳಿದ್ದರು. ಇದರಿಂದ ಇಬ್ಬರ ಮಧ್ಯೆ ಏಳು ದಿನ ಮಾತುಕತೆಯೇ ಇರಲಿಲ್ಲ. ವಾರದ ಬಳಿಕ ಅವಳು ಹೋಗಿ ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಕೇಳಿದಳು’ ಎಂದಿದ್ದಾರೆ ಪಾರ್ವತಮ್ಮ.
ಇದನ್ನೂ ಓದಿ: ರಾಜ್ಕುಮಾರ್ನ ಶರ್ಟ್ಲೆಸ್ ಆಗಿ ನೋಡಬೇಕು ಎಂದು ಹಠ ಹಿಡಿದಿದ್ದ ಕಾಲೇಜು ಹುಡುಗಿಯರು
ಪಾರ್ವತಮ್ಮ ಹಾಗೂ ರಾಜ್ಕುಮಾರ್ ಮಧ್ಯೆ ಜಗಳ ಆಗುತ್ತಿದ್ದುದ್ದು ಶೂಟಿಂಗ್ ವಿಚಾರಕ್ಕಂತೆ. ‘ಹಣ ಕೊಟ್ಟಿಲ್ಲ ಅಂದರೂ ಶೂಟಿಂಗ್ ಹೋಗ್ತೀರಾ, ನಾವು ಅದನ್ನು ಹೇಗೆ ಕಲೆಕ್ಟ್ ಮಾಡಿಕೊಳ್ಳಬೇಕು ಎಂದು ಕೇಳುತ್ತಿದ್ದೆ. ಹಬ್ಬದ ದಿನವೂ ಶೂಟಿಂಗ್ ಹೋಗುತ್ತಿದ್ದರು. ಈ ವಿಚಾರಕ್ಕೆ ಜಗಳ ಆಗುತ್ತಿತ್ತು’ ಎಂದಿದ್ದರು ಪಾರ್ವತಮ್ಮ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.