ಎನ್​ಟಿಆರ್​ಗೆ 20 ಸಾವಿರ, ರಾಜ್​ಕುಮಾರ್​ಗೆ 2 ಸಾವಿರ ನಂತರ ಆಗಿದ್ದೇನು?

Dr Rajkumar: ಡಾ ರಾಜ್​​ಕುಮಾರ್ ಅಪಾರ ಪ್ರತಿಭಾವಂತ ನಟ. ದಕ್ಷಿಣ ಭಾರತದಲ್ಲಿ ಅವರ ನಟನೆಗೆ ಸಾಟಿಯಾಗಿ ನಿಲ್ಲಬಲ್ಲ ನಟರು ಯಾರೂ ಇರಲಿಲ್ಲವೆಂದೇ ಹೇಳಬೇಕು. ಆದರೆ ಅವರ ಪ್ರತಿಭೆಗೆ ತಕ್ಕಂತೆ ಸಂಭಾವನೆ ಅವರಿಗೆ ಎಂದಿಗೂ ಸಿಗಲಿಲ್ಲ. ಒಮ್ಮೆಯಂತೂ ಒಂದೇ ಸಿನಿಮಾಕ್ಕೆ ಪರಭಾಷೆ ನಟನಿಗೆ 20 ಸಾವಿರ ಸಂಭಾವನೆ ಕೊಟ್ಟರೆ ರಾಜ್​ಕುಮಾರ್ ಅವರಿಗೆ ಎರಡು ಸಾವಿರ ಸಂಬಳ ಕೊಡುತ್ತಿದ್ದರು. ಆದರೆ ಅಣ್ಣಾವ್ರು ಮಾಡಿದ್ದೇನು?

ಎನ್​ಟಿಆರ್​ಗೆ 20 ಸಾವಿರ, ರಾಜ್​ಕುಮಾರ್​ಗೆ 2 ಸಾವಿರ ನಂತರ ಆಗಿದ್ದೇನು?
Dr Rajkumar

Updated on: Aug 27, 2025 | 8:55 AM

ಡಾ ರಾಜ್​ಕುಮಾರ್ (Dr Rajkumar) ವಿನಯದ ಸಾಕಾರ ಮೂರ್ತಿ. ಆದರೆ ಅಷ್ಟೇ ಸ್ವಾಭಿಮಾನಿಯೂ ಹೌದು. ಚೆನ್ನೈನಲ್ಲಿದ್ದಾಗ ನೆರೆ ಚಿತ್ರರಂಗಗಳ ಸಾಕಷ್ಟು ಅವಮಾನಗಳನ್ನು ಸಹಿಸಿಕೊಂಡು ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದರು ಡಾ ರಾಜ್​ಕುಮಾರ್. ಅಪಾರ ಪ್ರತಿಭಾವಂತರಾದ ರಾಜ್​​ಕುಮಾರ್ ಅವರಿಗೆ ಎಂದಿಗೂ ಅವರ ಪ್ರತಿಭೆಗೆ ತಕ್ಕಷ್ಟು ಸಂಭಾವನೆ ಸಿಗಲಿಲ್ಲ. ಆರಂಭದಲ್ಲಂತೂ ನೆರೆಯ ಚಿತ್ರರಂಗದವರಿಗಿಂತಲೂ ಬಹಳ ಕಡಿಮೆ ಸಂಭಾವನೆಗೂ ಹೆಚ್ಚು ಕೆಲಸ ಮಾಡಿದ್ದರು ರಾಜ್​​ಕುಮಾರ್. ಅಂಥಹುದೇ ಒಂದು ಘಟನೆಯ ಸ್ಮರಣೆ ಇಲ್ಲಿದೆ.

1958ರಲ್ಲಿ ನಿರ್ದೇಶಕ ಕೆ ಶಂಕರ್ ‘ಭೂಕೈಲಾಸ’ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದರು. ಆಗೆಲ್ಲ ದಕ್ಷಿಣ ಭಾರತದ ಎಲ್ಲ ಸಿನಿಮಾಗಳ ಕೆಲಸಗಳು ಚೆನ್ನೈ ಆಗಿನ ಮದ್ರಾಸ್​​ನಲ್ಲಿ ನಡೆಯುತ್ತಿದ್ದವು. ಅಣ್ಣಾವ್ರು ನಾಯಕನಾಗಿ ಕೇವಲ ನಾಲ್ಕು ವರ್ಷಗಳಾಗಿದ್ದವು. ‘ಭೂ ಕೈಲಾಸ’ ಸಿನಿಮಾಕ್ಕೆ ಮುಂಚೆ ಅಣ್ಣಾವ್ರು ನಾಯಕನಾಗಿ ನಟಿಸಿದ್ದ ಕೇವಲ ಎಂಟು ಸಿನಿಮಾಗಳು ಬಿಡುಗಡೆ ಆಗಿದ್ದವು. ಆದರೆ ಅದಾಗಲೇ ಅಣ್ಣಾವ್ರ ನಟನಾ ಪ್ರತಿಭೆ ದಕ್ಷಿಣ ಭಾರತದಲ್ಲೆಲ್ಲ ಹರಡಿತ್ತು.

ಶಂಕರ್ ಅವರು ‘ಭೂಕೈಲಾಸ’ ಸಿನಿಮಾವನ್ನು ತೆಲುಗು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ದೇಶಿಸಲಿದ್ದರು. ಸಿನಿಮಾಕ್ಕೆ ಎವಿ ಮೇಯಪ್ಪನ್ ಬಂಡವಾಳ ಹೂಡಿದ್ದರು. ತೆಲುಗಿನಲ್ಲಿ ಎನ್​ಟಿಆರ್ ರಾವಣನ ಪಾತ್ರದಲ್ಲಿ ನಟಿಸಲಿದ್ದರೆ, ಕನ್ನಡದಲ್ಲಿ ರಾಜ್​ಕುಮಾರ್ ಅವರು ರಾವಣ. ಸಿನಿಮಾ ನಿರ್ಮಾಣ ಆರಂಭವಾದಾಗ ಎನ್​ಟಿಆರ್ ಅವರಿಗೆ ಆಗಿನ ಕಾಲಕ್ಕೆ 20 ಸಾವಿರ ರೂಪಾಯಿ ಸಂಭಾವನೆಯನ್ನು ಮೇಯಪ್ಪನ್ ನೀಡಿದ್ದರು. ಆದರೆ ಅಣ್ಣಾವ್ರಿಗೆ ಕೇವಲ ಎರಡು ಸಾವಿರ ರೂಪಾಯಿ ಸಂಭಾವನೆ ನೀಡುವುದಾಗಿ ಹೇಳಿದರು. ಆದರೆ ಸ್ವಾಭಿಮಾನಿ ಅಣ್ಣಾವ್ರು ಅದನ್ನು ತಿರಸ್ಕರಿಸಿದರು.

ಇದನ್ನೂ ಓದಿ:ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್

ನೀಡುವುದಾದರೆ ಕನಿಷ್ಟ ಐದು ಸಾವಿರ ರೂಪಾಯಿಗಳನ್ನಾದರೂ ನೀಡಿರಿ ಇಲ್ಲದೇ ಹೋದಲ್ಲಿ ನಾವು ನಟಿಸುವುದಿಲ್ಲವೆಂದು ಹೇಳಿ ಹೊರಟೇ ಬಿಟ್ಟರು. ಆದರೆ ಮೇಯಪ್ಪನ್ ಸಹ ಗರ್ವಿ. ನೀನಿಲ್ಲದಿದ್ದರೆ ಇನ್ನೊಬ್ಬ ಎಂದು ಹೇಳಿ ಉದಯ್ ಕುಮಾರ್ ಅವರನ್ನು ಕರೆತಂದು ಅವರಿಗೆ ರಾವಣನ ಮೇಕಪ್ ಹಾಕಿಸಿದರು. ಆದರೆ ಯಾಕೋ ರಾವಣನ ಕಳೆ ಉದಯ್ ಕುಮಾರ್ ಅವರಲ್ಲಿ ಕಾಣಲಿಲ್ಲ. ಬಳಿಕ ಕಲ್ಯಾಣ್ ಕುಮಾರ್ ಅವರನ್ನು ಕೆರತರಲಾಯ್ತು ಆದರೆ ನಿರ್ದೇಶಕ ಶಂಕರ್ ಅವರಿಗೆ ಅದು ಸರಿಬರಲಿಲ್ಲ. ಕೊನೆಗೆ ಮೇಯಪ್ಪ, ಮುತ್ತುರಾಜನನ್ನೇ ಕರೆತನ್ನಿ ಎಂದು ರಾಜ್​ಕುಮಾರ್ ಅವರನ್ನು ಕರೆಸಿ ಅವರಿಗೆ ಐದು ಸಾವಿರ ರೂಪಾಯಿ ಸಂಭಾವನೆ ಕೊಟ್ಟು ರಾವಣನ ಪಾತ್ರದಲ್ಲಿ ನಟಿಸುವಂತೆ ಮಾಡಿದರು.

ಭೂಕೈಲಾಸ ಸಿನಿಮಾ ತೆಲುಗು ಹಾಗೂ ಕನ್ನಡದಲ್ಲಿ ಏಕಕಾಲದಲ್ಲಿ ನಿರ್ಮಾಣವಾಯ್ತು. ಅಣ್ಣಾವ್ರು ತಮ್ಮ ಅತ್ಯದ್ಭುತ ನಟನೆಯಿಂದ ನಿರ್ದೇಶಕ ಶಂಕರ್ ಅವರನ್ನು ಸೆಳೆದರು. ಮಾತ್ರವಲ್ಲದೆ ಸ್ವತಃ ಎನ್​ಟಿಆರ್ ಅವರೇ ರಾಜ್​ಕುಮಾರ್ ನಟನೆ ನೋಡಿ ‘ಅದ್ಭುತ ಸಹೋದರ’ ಎಂದಿದ್ದರಂತೆ. ರಾವಣನ ಪಾತ್ರ ಮಾಡಲು ಬಂದಿದ್ದ ಕಲ್ಯಾಣ್ ಕುಮಾರ್ ನಾರದನ ಪಾತ್ರದಲ್ಲಿ ನಟಿಸಿದರು. ತೆಲುಗಿನಲ್ಲಿ ಈ ಪಾತ್ರವನ್ನು ಎಎನ್​ಆರ್ ನಿರ್ವಹಿಸಿದ್ದರು. ಸಿನಿಮಾ ಎರಡೂ ಭಾಷೆಗಳಲ್ಲಿ ಸೂಪರ್ ಹಿಟ್ ಆಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ