‘ಪಂಚೇಂದ್ರಿಯಂ’ ಎಂಬ ಡಿಫರೆಂಟ್ ಶೀರ್ಷಿಕೆಯಲ್ಲಿ ಸಿನಿಮಾ ಮೂಡಿಬರುತ್ತಿದೆ. ಹೆಚ್. ಸೋಮಶೇಖರ್ ಅವರು ಈ ಸಿನಿಮಾವನ್ನು ‘ರಾಜ್ ಪ್ರಿಯ ಪ್ರೊಡಕ್ಷನ್ಸ್’ ಲಾಂಛನದ ಮೂಲಕ ನಿರ್ಮಿಸಿದ್ದಾರೆ. ಆರನ್ ಕಾರ್ತಿಕ್ ವೆಂಕಟೇಶ್ ಅವರು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ‘ಪಂಚೇಂದ್ರಿಯಂ’ (Panchendriyam) ಸಿನಿಮಾದ ಹಾಡುಗಳು ಮತ್ತು ಟೀಸರ್ ರಿಲಿಸ್ ಮಾಡಲಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ಗೀತರಚನಕಾರ ಡಾ. ವಿ. ನಾಗೇಂದ್ರ ಪ್ರಸಾದ್ (Dr V Nagendra Prasad) ಅವರು ಟೀಸರ್ ಮತ್ತು ಹಾಡುಗಳನ್ನು ಅನಾವರಣ ಮಾಡಿ ‘ಪಂಚೇಂದ್ರಿಯಂ’ ತಂಡಕ್ಕೆ ಶುಭ ಕೋರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ.
ನಿರ್ದೇಶಕ ಆರನ್ ಕಾರ್ತಿಕ್ ವೆಂಕಟೇಶ್ ಅವರು ‘ಪಂಚೇಂದ್ರಿಯಂ’ ಸಿನಿಮಾ ಬಗ್ಗೆ ವಿವರ ನೀಡಿದರು. ‘ದೃಷ್ಟಿ, ಶ್ರವಣ, ರುಚಿ, ವಾಸನೆ ಮತ್ತು ಸ್ಪರ್ಶ ಇವು ಮನುಷ್ಯನ ದೇಹವನ್ನು ರೂಪಿಸುವ 5 ಅಂಗಗಳು. ದೇವರು ಈ ಪಂಚೇಂದ್ರಿಯಗಳನ್ನು ಸದ್ಬಳಿಕೆಗಾಗಿ ಮನುಷ್ಯನಿಗೆ ಕೊಟ್ಟಿದ್ದಾನೆ. ನಾವು ಅವುಗಳ ದುರ್ಬಳಕೆ ಮಾಡಿಕೊಂಡಾಗ ಏನಾಗುತ್ತದೆ ಎಂಬುದೇ ಈ ಸಿನಿಮಾದ ಮುಖ್ಯ ಕಥಾಹಂದರ’ ಎಂದು ಅವರು ಹೇಳಿದ್ದಾರೆ.
ಈ ಸಿನಿಮಾದಲ್ಲಿ 6 ಹಾಡುಗಳಿವೆ. ನಿರ್ದೇಶಕರೇ ಸಂಗೀತ ನೀಡಿದ್ದಾರೆ. ನಾಲ್ಕು ಫೈಟಿಂಗ್ ಸೀನ್ಗಳಿವೆ. ಹೆಚ್. ಸೋಮಶೇಖರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಸಿನಿಮಾದ ದ್ವಿತೀಯ ನಾಯಕನಾಗಿ ಅಫ್ಜಲ್ ಅವರು ನಟಿಸಿರುವುದೂ ಅಲ್ಲದೇ, ಕಾರ್ಯಕಾರಿ ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದಾರೆ. ವಿನಯ್ ಸೂರ್ಯ ಅವರು ‘ಪಂಚೇಂದ್ರಿಯಂ’ ಚಿತ್ರಕ್ಕೆ ನಾಯಕರಾಗಿದ್ದಾರೆ. ವಿದ್ಯಾಶ್ರೀ ಹಾಗೂ ರಾಘವಿ ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ತೆರೆಗೆ ಬರಲು ಸಿದ್ಧವಾಯ್ತು ‘ದಾಸವರೇಣ್ಯ ಶ್ರೀ ವಿಜಯ ದಾಸರು’ ಸಿನಿಮಾ; ವಿದೇಶದಲ್ಲೂ ರಿಲೀಸ್
ದಾಬಸ್ ಪೇಟೆ, ದೇವರಾಯನದುರ್ಗ ಮುಂತಾದ ಕಡೆಗಳಲ್ಲಿ ‘ಪಂಚೇಂದ್ರಿಯಂ’ ಸಿನಿಮಾಗೆ ಚಿತ್ರೀಕರಣ ಮಾಡಲಾಗಿದೆ. ಅಂದುಕೊಂಡಂತೆ ನಡೆದರೆ ಏಪ್ರಿಲ್ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡವದರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ‘ಇದು ನಮ್ಮ ಸಂಸ್ಥೆಯಲ್ಲಿ ನಿರ್ಮಾಣವಾದ 2ನೇ ಚಿತ್ರ. ನಿಮ್ಮೆಲ್ಲರ ಪ್ರೋತ್ಸಾಹ ಬೇಕು’ ಎಂದು ನಿರ್ಮಾಪಕ ಹೆಚ್. ಸೋಮಶೇಖರ್ ಹೇಳಿದ್ದಾರೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಒಂದು ಸ್ಕ್ಯಾಮ್ ಕಥೆ; ಏಪ್ರಿಲ್ 12ರಂದು ಬಯಲಾಗುತ್ತೆ ಹಗರಣ
ವಿನಯ್ ಸೂರ್ಯ ಅವರು ಈ ಮೊದಲು ‘ಜಕ್ಕಣಾಚಾರಿ ಅವನ ತಮ್ಮ ಶುಕ್ಲಾಚಾರಿ’ ಸಿನಿಮಾದಲ್ಲಿ ಬಾಲನಟನಾಗಿ ನಟಿಸಿದ್ದರು. ಈಗ ಅವರು ‘ಪಂಚೇಂದ್ರಿಯಂ’ ಸಿನಿಮಾದ ಮೂಲಕ ಹೀರೋ ಆಗಿದ್ದಾರೆ. ‘ಸಿರಿ ಮ್ಯೂಸಿಕ್’ ಸುರೇಶ್ ಚಿಕ್ಕಣ್ಣ ಕೂಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಯತಿರಾಜ್, ಗಣೇಶ್ ರಾವ್, ವಿಕ್ಟರಿ ವಾಸು, ಪವನ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.