‘ಮಿಸ್ಗೈಡ್’ ಮಾಡಿದ ನಿರ್ದೇಶಕನಿಗೆ ನಾಗೇಂದ್ರ ಪ್ರಸಾದ್ ಶುಭ ಹಾರೈಕೆ
ಮಂಜು ಕವಿ ನಿರ್ದೇಶನ ಮಾಡಿರುವ ‘ಮಿಸ್ಗೈಡ್’ ಚಿತ್ರಕ್ಕೆ ಈಗಾಗಲೇ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿವೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ 4 ಹಾಡುಗಳಿವೆ. ಅಮ್ಮ-ಮಗನ ಸೆಂಟಿಮೆಂಟ್ ಹಾಡಿಗೆ ಗುರುಕಿರಣ್ ಧ್ವನಿ ನೀಡಿದ್ದಾರೆ. ರಂಗಭೂಮಿ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಮಂಜು ಕವಿ ಅವರು ಮಿಸ್ಗೈಡ್ (Misguide) ಮಾಡಿದ್ದಾರೆ. ಹಾಗಂತ ಅವರು ಯಾರನ್ನೂ ದಾರಿ ತಪ್ಪಿಸಿಲ್ಲ. ಮಂಜು ಕವಿ (Manju Kavi) ನಿರ್ದೇಶನ ಮಾಡಿರುವ ಹೊಸ ಸಿನಿಮಾದ ಹೆಸರೇ ‘ಮಿಸ್ಗೈಡ್’! ‘ಸೀಟಡೀಲ್ ಫಿಲಂಸ್’ ಮತ್ತು ‘ರಾಜ್ ಫಿಲ್ಮ್ಸ್’ ಸಂಸ್ಥೆಯ ಮೂಲಕ ನಾಗರಾಜ್ ಮತ್ತು ಸುಬ್ಬು ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಇತ್ತೀಚೆಗೆ ‘ಮಿಸ್ಗೈಡ್’ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಗೀತರಚನಕಾರ ವಿ. ನಾಗೇಂದ್ರ ಪ್ರಸಾದ್ (V. Nagendra Prasad) ಆಗಮಿಸಿದ್ದರು. ಟೀಸರ್ ಬಿಡುಗಡೆ ಮಾಡಿ ಅವರು ಶುಭ ಕೋರಿದರು.
‘ಮಿಸ್ಗೈಡ್’ ಸಿನಿಮಾಗೆ ಮಂಜು ಕವಿ ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ. ಅಷ್ಟೇ ಅಲದೇ, ಸಂಗೀತವನ್ನೂ ನೀಡಿದ್ದಾರೆ. ಟೀಸರ್ ಅನಾವರಣ ಮಾಡಿದ ನಾಗೇಂದ್ರ ಪ್ರಸಾದ್ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಗಗನ್ ರಾಜ್ ಕೂಡ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಇದು ಮಂಜು ಕವಿ ನಿರ್ದೇಶನ ಮಾಡಿರುವ ಎರಡನೇ ಸಿನಿಮಾ.
ಇದನ್ನೂ ಓದಿ: ‘ದೇಸಾಯಿ’ ಟೀಸರ್ಗೆ ಲಕ್ಷ್ಮಣ ಸವದಿ ಹಾರೈಕೆ; ‘ಲವ್ 360’ ಹುಡುಗನ ಹೊಸ ಸಿನಿಮಾ
‘ನನ್ನ ಕಥೆಯನ್ನು ಇಷ್ಟಪಟ್ಟು ನಾಗರಾಜ್ ಮತ್ತು ಸುಬ್ಬು ಅವರು ನಿರ್ಮಾಣ ಮಾಡಿದ್ದಾರೆ. ಹಾವು ಮತ್ತು ಮುಂಗುಸಿ ಕಥೆ ಸ್ಫೂರ್ತಿಯಾಗಿ ಇಟ್ಟುಕೊಂಡು ಈ ಸಿನಿಮಾದ ಕಥೆ ಸಿದ್ಧಪಡಿಸಲಾಗಿದೆ. ಮುಂಗುಸಿಯು ಹಾವಿನೊಂದಿಗೆ ಸೆಣೆಸಾಡಿ ಮಗುವನ್ನು ಕಾಪಾಡುತ್ತದೆ. ಆದರೆ ಅದರ ಬಾಯಲ್ಲಿ ರಕ್ತವನ್ನು ನೋಡಿದ ಮಗುವಿನ ತಾಯಿ, ಮುಂಗುಸಿಯೇ ತನ್ನ ಮಗುವಿಗೆ ಏನೋ ಮಾಡಿದೆ ಎಂದು ಭಾವಿಸುತ್ತಾಳೆ. ನಮ್ಮ ಚಿತ್ರಕ್ಕೆ ಈ ಕಥೆಯೇ ಸ್ಫೂರ್ತಿ’ ಎಂದು ಮಂಜು ಕವಿ ಹೇಳಿದ್ದಾರೆ.

‘ಮಿಸ್ಗೈಡ್’ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮ
ಮಂಜು ಕವಿ ಹೇಳಿದ ಕಥೆ ತಮಗೆ ಇಷ್ಟವಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿರುವುದಾಗಿ ನಿರ್ಮಾಪಕರಾದ ಸುಬ್ಬು ಮತ್ತು ನಾಗರಾಜ್ ಹೇಳಿದ್ದಾರೆ. ಸುಬ್ಬು ಅವರು ನಿರ್ಮಾಣ ಮಾಡುವುದರ ಜೊತೆಗೆ ಸಿನಿಮಾದ ಒಂದು ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ. ಅವರ ಜತೆ ನಾಯಕನಾಗಿ ನಿತೀಶ್ ವಿನಯ್ ರಾಜ್ ಕೂಡ ಅಭಿನಯಿಸಿದ್ದಾರೆ. ಫರೀನ್ ಮತ್ತು ರಕ್ಷಾ ನಾಯಕಿಯಾಗಿ ನಟಿಸಿದ್ದಾರೆ. ನಟರಾದ ಪ್ರಾಣೇಶ್, ಜಗದೀಶ್ ಕೊಪ್ಪ, ಹಿನ್ನೆಲೆ ಸಂಗೀತ ನೀಡಿರುವ ವಿನು ಮನಸು, ಫೈಟ್ ಮಾಸ್ಟರ್ ಮಾಸ್ ಮಾದ ಕೂಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.