‘ದೇಸಾಯಿ’ ಟೀಸರ್ಗೆ ಲಕ್ಷ್ಮಣ ಸವದಿ ಹಾರೈಕೆ; ‘ಲವ್ 360’ ಹುಡುಗನ ಹೊಸ ಸಿನಿಮಾ
ಲಕ್ಷ್ಮಣ ಸವದಿ ಅವರು ಅವರು ‘ದೇಸಾಯಿ’ ಚಿತ್ರಕ್ಕೆ ಶುಭ ಕೋರಿದ್ದಾರೆ. ಈ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ಪ್ರವೀಣ್ ಕುಮಾರ್ ಮತ್ತು ರಾಧ್ಯಾ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಖಡಕ್ ಆಗಿ ‘ದೇಸಾಯಿ’ ಟೀಸರ್ ಮೂಡಿಬಂದಿದೆ. ‘ಆನಂದ್ ಆಡಿಯೋ’ ಈ ಟೀಸರ್ ಬಿಡುಗಡೆ ಆಗಿದೆ.
‘ಲವ್ 360’ ಖ್ಯಾತಿಯ ನಟ ಪ್ರವೀಣ್ ಕುಮಾರ್ (Praveen Kumar) ಅವರು ಹೀರೋ ಆಗಿ ನಟಿಸಿರುವ ‘ದೇಸಾಯಿ’ (Desai) ಸಿನಿಮಾದ ಟೀಸರ್ ಇತ್ತೀಚಿಗೆ ಬಿಡುಗಡೆ ಆಯಿತು. ‘ಶ್ರೀ ವೀರಭದ್ರೇಶ್ವರ ಕ್ರಿಯೇಟಿವ್ ಫಿಲ್ಮ್ಸ್’ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಮಹಾಂತೇಶ ವಿ. ಚೋಳಚಗುಡ್ಡ ಅವರು ನಿರ್ಮಾಣ ಮಾಡುವುದರ ಜೊತೆಗೆ ಕಥೆ ಬರೆದಿದ್ದಾರೆ. ನಾಗಿರೆಡ್ಡಿ ಭಡ ಅವರು ‘ದೇಸಾಯಿ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ್ ಸವದಿ (Laxman Savadi) ಅವರು ಈ ಸಿನಿಮಾದ ಟೀಸರ್ ರಿಲೀಸ್ ಮಾಡಿದ್ದಾರೆ. ಬಳಿಕ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಮಹಂತೇಶ ವಿ. ಚೋಳಚಗುಡ್ಡ ಮಾತನಾಡಿದರು. ‘ಸಿನಿಮಾ ನಿರ್ಮಾಣ ಎಂಬುದು ನನ್ನ ಕನಸು. ಚಿತ್ರತಂಡದ ಸಹಕಾರದಿಂದ ಆ ಕನಸು ಇಂದು ನನಸಾಗಿದೆ. ಲಕ್ಷ್ಮಣ ಸವದಿ ಅವರು ನನ್ನ ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸಿದ್ದಾರೆ. ಈಗ ಟೀಸರ್ ಬಿಡುಗಡೆ ಮಾಡಿಕೊಟ್ಟ ಅವರಿಗೆ ಧನ್ಯವಾದಗಳು. ಇದು ಕೌಟುಂಬಿಕ ಕಥೆ ಇರುವ ಸಿನಿಮಾ. ಬಹುತೇಕ ಶೂಟಿಂಗ್ ಬಾಗಲಕೋಟೆಯಲ್ಲಿ ಮಾಡಿದ್ದೇವೆ. ಅಲ್ಲಿನ ಜನರ ಸಹಕಾರವನ್ನು ನಾನು ಸ್ಮರಿಸಿಕೊಳ್ಳುವೆ’ ಎಂದಿರುವ ನಿರ್ಮಾಪಕರು ಆದಷ್ಟು ಬೇಗ ಈ ಸಿನಿಮಾವನ್ನು ಬಿಡುಗಡೆ ಮಾಡುವ ಗುರಿ ಇಟ್ಟುಕೊಂಡಿದ್ದಾರೆ.
‘ದೇಸಾಯಿ’ ಸಿನಿಮಾದ ಟೀಸರ್:
ವಿಜಯಕುಮಾರ್ ಪಿ.ಜಿ, ಮಲ್ಲಿಕಾರ್ಜುನ ಲೋನಿ ಮುಂತಾದ ಗಣ್ಯರು ಕೂಡ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು. ತಾವು ಅಂದುಕೊಂಡ ರೀತಿಯೇ ಈ ಸಿನಿಮಾ ಮೂಡಿಬಂದಿದೆ ಎಂದು ನಿರ್ದೇಶಕ ನಾಗಿರೆಡ್ಡಿ ಭಡ ಅವರು ಹೇಳಿದರು. ಈ ಸಿನಿಮಾದಲ್ಲಿ ಪ್ರವೀಣ್ ಅವರಿಗೆ ಜೋಡಿಯಾಗಿ ನಟಿ ರಾಧ್ಯಾ ಅಭಿನಯಿಸಿದ್ದಾರೆ. ‘ಒರಟ’ ಪ್ರಶಾಂತ್, ಮಧುಸೂದನ್ ರಾವ್, ಚೆಲುವರಾಜು, ಕಲ್ಯಾಣಿ, ನಟನ ಪ್ರಶಾಂತ್, ಹರಿಣಿ, ಸೀತಾ ಬೆನಕ, ಆರತಿ ಕುಲಕರ್ಣಿ, ಸೃಷ್ಟಿ, ಮಂಜುನಾಥ್ ಹೆಗಡೆ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ವಿಯೆಟ್ನಾಂನಲ್ಲಿ ಶೂಟಿಂಗ್ ಪೂರ್ಣಗೊಳಿಸಿದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ತಂಡ
ಮ್ಯೂಸಿಕಲ್ ಹಿಟ್ ಆಗಿದ್ದ ‘ಲವ್ 360’ ಸಿನಿಮಾದ ಮೂಲಕ ಪ್ರವೀಣ್ ಅವರು ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಿದ್ದರು. ಈಗ ಅವರು ‘ದೇಸಾಯಿ’ ಚಿತ್ರದಲ್ಲಿ ಬೇರೆ ರೀತಿಯ ಪಾತ್ರ ಮಾಡಿದ್ದಾರೆ. ‘ಈ ಮೊದಲು ನಾನು ನಟಿಸಿದ್ದ ‘ಲವ್ 360’ ಸಿನಿಮಾ ಪಾತ್ರವೇ ಬೇರೆ. ಈಗ ಈ ಸಿನಿಮಾ ಪಾತ್ರವೇ ಬೇರೆ. ನಾನು ಈ ಸಿನಿಮಾಗಾಗಿ ಬಹಳ ತಯಾರಿ ಮಾಡಿಕೊಂಡಿದ್ದೇನೆ. ಸಿನಿಮಾದಲ್ಲಿ ಪ್ರವೀಣ್ ದೇಸಾಯಿ ಎಂಬುದು ನನ್ನ ಪಾತ್ರದ ಹೆಸರು’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.