ತೆರೆಗೆ ಬರುತ್ತಿದೆ ‘ತೂತ್ ಕಾಸು’: ಇದು ಹಂಸಲೇಖ ಶಿಷ್ಯರ ಸಿನಿಮಾ
Hamsalekha: ಸಂಗೀತ ನಿರ್ದೇಶಕ ಹಂಸಲೇಖ ಅವರ ದೇಸಿ ಶಾಲೆಯ ವಿದ್ಯಾರ್ಥಿಗಳು ಕೆಲವರು ಸೇರಿ ನಿರ್ಮಿಸಿರುವ ‘ತೂತ್ ಕಾಸು’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ.
ಕನ್ನಡ ಚಿತ್ರರಂಗದಲ್ಲಿ (Sandalwood) ಗುರು-ಶಿಷ್ಯ ಪರಂಪರೆ ಚೆನ್ನಾಗಿದೆ. ಕಾಶಿನಾಥ್-ಉಪೇಂದ್ರ, ಎಸ್ ನಾರಾಯಣ್ ಶಿಷ್ಯ ಆರ್ ಚಂದ್ರು, ಯೋಗರಾಜ್ ಭಟ್ಟರ ಶಿಷ್ಯ ಪವನ್ ಕುಮಾರ್, ಪವನ್ ಒಡೆಯರ್, ದುನಿಯಾ ವಿಜಯ್ ಶಿಷ್ಯರು ಸಹ ಒಳ್ಳೆಯ ಸಿನಿಮಾಗಳನ್ನು ನೀಡುತ್ತಿದ್ದಾರೆ. ಒಳ್ಳೆಯ ಗುರು-ಶಿಷ್ಯ ಪರಂಪರೆ ಕನ್ನಡ ಚಿತ್ರರಂಗದ ನಿರ್ದೇಶಕ ವಿಭಾಗದಲ್ಲಿದೆ. ಚಿತ್ರ ಸಾಹಿತಿ, ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಬಹಳ ದೊಡ್ಡ ಶಿಷ್ಯ ವರ್ಗವಿದೆ. ಹೆಸರು ಮಾಡಿರುವ ಹಲವು ನಿರ್ದೇಶಕರು, ಸಂಗೀತ ನಿರ್ದೇಶಕರುಗಳಲ್ಲಿ ಹಂಸಲೇಖ ಅವರ ಶಿಷ್ಯರಿದ್ದಾರೆ. ಇದೀಗ ಹಂಸಲೇಖರ ಕೆಲವು ಶಿಷ್ಯರು ಸೇರಿಕೊಂಡು ನಿರ್ಮಿಸಿರುವ ಹೊಸ ಕನ್ನಡ ಸಿನಿಮಾ ಒಂದು ಬಿಡುಗಡೆಗೆ ರೆಡಿಯಾಗಿದೆ.
‘ತೂತ್ ಕಾಸು’ ಸಿನಿಮಾ ಬಿಡುಗಡೆಗೆ ರೆಡಿಯಾಗಿರುವ ಸಿನಿಮಾ. ಹೊಸಬರ ತಂಡ ಸೇರಿಕೊಂಡು ಪ್ರೀತಿಯಿಂದ ನಿರ್ಮಿಸಿರುವ ಈ ಸಿನಿಮಾ ಇದಾಗಿದ್ದು, ಇತ್ತೀಚಿಗಷ್ಟೇ ಸಿನಿಮಾದ ಹಾಡು ಮತ್ತು ಟ್ರೈಲರ್ ಬಿಡುಗಡೆ ಮಾಡುವ ನೆಪದಲ್ಲಿ ಮಾಧ್ಯಮದ ಮುಂದೆ ಚಿತ್ರತಂಡ ಹಾಜರಾಗಿತ್ತು. ಹಂಸಲೇಖ ಅವರ ದೇಸಿ ಶಾಲೆಯಲ್ಲಿ ಪಳಗಿದ ಒಂದಿಷ್ಟು ಪ್ರತಿಭೆಗಳು ಸೇರಿಕೊಂಡು ಮಾಡಿರುವ ಸಿನಿಮಾ ಇದಾಗಿದೆ. ಕಾಮಿಡಿ ಜಾನರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ರವಿ ತೇಜಸ್ ಆಕ್ಷನ್ ಕಟ್ ಹೇಳಿದ್ದಾರೆ. ರವಿತೇಜಸ್ ಅವರಿಗೆ ಇದು ಮೊದಲ ಸಿನಿಮಾ.
ಇದನ್ನೂ ಓದಿ:ಕನ್ನಡ ಸಿನಿಮಾದಲ್ಲಿ ನಟಿಸ್ತಾರಾ ಆಮಿರ್ ಖಾನ್? ನೀಡಿದ ಉತ್ತರವೇನು?
ವರುಣ್ ದೇವಯ್ಯ ‘ತೂತ್ ಕಾಸು’ ಸಿನಿಮಾ ನಾಯಕನಾಗಿ ನಟಿಸಿದ್ದಾರೆ. ಇನ್ನು ನಾಯಕಿಯರಾಗಿ ಪ್ರಿಷಾ ಹಾಗೂ ಪ್ರೇರಣ ಭಟ್ ಕಾಣಿಸಿಕೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರವಿ ತೇಜಸ್ ‘ತೂತ್ ಕಾಸು’ 1942ರಿಂದ 1947ರವರೆಗೆ ಚಲಾವಣೆಯಲ್ಲಿದ್ದ ನಾಣ್ಯ. ಸ್ವಾತಂತ್ರ್ಯ ನಂತರ ತೂತ್ ಕಾಸಿನ ಚುನಾವಣೆಯನ್ನು ನಿಲ್ಲಿಸಲಾಯಿತು. ಸಿನಿಮಾದಲ್ಲಿ ಇದೊಂದು ಕೋಡ್ ವರ್ಡ್ ಆಗಿ ಬಳಸಲಾಗಿದೆ. ನಮ್ಮ ಚಿತ್ರ ಮಾಫಿಯಾ ಗ್ಯಾಂಗ್ ಬಗ್ಗೆ ಇದೆ’ ಎಂದು ಹೇಳಿದರು.
ಇನ್ನು ನಾಯಕ ವರುಣ್ ದೇವಯ್ಯ ಮಾತನಾಡಿ, ’10 ವರ್ಷದ ಗ್ಯಾಪ್ ನ ನಂತರ ಮಾಡಿರುವ ಸಿನಿಮಾ ಇದು. ನಾವೆಲ್ಲ ಚಿತ್ರಕ್ಕಾಗಿ ತುಂಬಾ ಶ್ರಮಪಟ್ಟಿದ್ದೇವೆ. ಸಿನಿಮಾ ನೋಡಿ ಬೆಂಬಲ ನೀಡಿ’ ಎಂದು ಮನವಿ ಮಾಡಿದರು. ಚಿತ್ರದಲ್ಲಿ ವಿನೋದ್ ಆನಂದ್ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ