‘ಭೀಮ’ ಯಶಸ್ಸಿನ ಬೆನ್ನಲ್ಲೆ ತಮಿಳು ಸಿನಿಮಾದಿಂದ ದುನಿಯಾ ವಿಜಿಗೆ ಬುಲಾವ್

|

Updated on: Aug 15, 2024 | 3:54 PM

Duniya Viji: ‘ಭೀಮ’ ಸಿನಿಮಾದ ಗೆಲುವಿನ ಖುಷಿಯಲ್ಲಿರುವ ದುನಿಯಾ ವಿಜಯ್ ಮತ್ತು ಅವರ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ. ದುನಿಯಾ ವಿಜಯ್ ತಮಿಳಿನ ಸ್ಟಾರ್ ನಿರ್ದೇಶಕರೊಬ್ಬರ ಸಿನಿಮಾದಲ್ಲಿ ನಟಿಸಲಿದ್ದಾರೆ.

‘ಭೀಮ’ ಯಶಸ್ಸಿನ ಬೆನ್ನಲ್ಲೆ ತಮಿಳು ಸಿನಿಮಾದಿಂದ ದುನಿಯಾ ವಿಜಿಗೆ ಬುಲಾವ್
Follow us on

ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಉತ್ತಮ ಗಳಿಕೆ ಮಾಡುತ್ತಿದೆ. ‘ಸಲಗ’ ಬಳಿಕ ವಿಜಯ್ ನಿರ್ದೇಶನ ಮಾಡಿರುವ ಎರಡನೇ ಸಿನಿಮಾ ಇದು. ಸಿನಿಮಾ ಬಿಡುಗಡೆ ಆದ ಕೆಲವೇ ದಿನಗಳಿಗೆ ಚಿತ್ರಮಂದಿರದಲ್ಲಿ 15 ಕೋಟಿ ಗಳಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಚಿತ್ರತಂಡ ಈಗಾಗಲೇ ಸಿನಿಮಾದ ಸಕ್ಸಸ್ ಮೀಟ್ ಆಯೋಜಿಸಿದ್ದಾಗಿದೆ. ದುನಿಯಾ ವಿಜಯ್ ಅಂತೂ ಸತತ ಎರಡನೇ ಬಾರಿಗೆ ನಿರ್ದೇಶನದಲ್ಲಿ ಗೆದ್ದಿದ್ದಾರೆ. ಇದೆಲ್ಲದರ ನಡುವೆ ದುನಿಯಾ ವಿಜಯ್​ಗೆ ತಮಿಳು ಚಿತ್ರರಂಗದಿಂದ ಬುಲಾವ್ ಬಂದಿದೆ ಎನ್ನಲಾಗುತ್ತಿದೆ. ಅಸಲಿಗೆ ‘ಭೀಮ’ ಸಿನಿಮಾಕ್ಕೆ ಮುಂಚೆಯೇ ಈ ಬುಲಾವ್ ಬಂದಿತ್ತಂತೆ.

‘ಭೀಮ’ ಸಿನಿಮಾಕ್ಕೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ದುನಿಯಾ ವಿಜಯ್​, ‘ತಮಿಳಿನಿಂದ ಒಂದು ಆಫರ್ ಬರುವ ಮುನ್ಸೂಚನೆ ಇದೆ. ಲೋಕೇಶ್ ಕನಗರಾಜ್ ಸಿನಿಮಾ ಒಂದರ ಪಾತ್ರಕ್ಕಾಗಿ ನನ್ನ ಬಗ್ಗೆ ಆಲೋಚಿಸಿದ್ದಾರೆ ಎಂಬ ಸುದ್ದಿ ನನ್ನ ವರೆಗೂ ಬಂದಿದೆ. ಚೆನ್ನೈನವರೇ ಹೀಗೆ ಮಾತೊಂದನ್ನು ನನಗೆ ಹೇಳಿದ್ದಾರೆ. ಆದರೆ ನನಗೆ ಲೋಕೇಶ್ ಕನಗರಾಜ್ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಮುಂದೆ ನೋಡೋಣ ಏನಾಗುತ್ತದೆಯೋ’ ಎಂದಿದ್ದಾರೆ ವಿಜಿ.

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯರ ಭೇಟಿಯಾದ ದುನಿಯಾ ವಿಜಿ, ‘ಭೀಮ’ ವೀಕ್ಷಿಸಲು ಆಹ್ವಾನ

‘ಲೋಕೇಶ್ ಕನಗರಾಜ್ ನನ್ನ ಬಹಳ ಮೆಚ್ಚಿನ ನಿರ್ದೇಶಕ. ಅವರ ಮುಂದಿನ ಸಿನಿಮಾದಲ್ಲಿ ನನಗೊಂದು ಪಾತ್ರ ನೀಡುವ ಬಗ್ಗೆ ಅಂದುಕೊಂಡಿದ್ದಾರಂತೆ. ಒಂದೊಮ್ಮೆ ನನ್ನನ್ನು ನಟಿಸಲು ಕರೆದರೆ ಕಂಡಿತ ನಿರಾಕರಣೆ ಮಾಡುವುದಿಲ್ಲ. ಖಂಡಿತ ನಟಿಸುತ್ತೇನೆ. ನನಗೆ ಬಹಳ ಇಷ್ಟದ ನಿರ್ದೇಶಕ ಅವರು’ ಎಂದಿದ್ದಾರೆ. ಅಂದಹಾಗೆ ಲೊಕೇಶ್ ಕನಗರಾಜ್ ಇದೀಗ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅದರ ಬಳಿಕ ‘ವಿಕ್ರಂ 2’, ‘ಖೈದಿ 2’ ಸಿನಿಮಾಗಳನ್ನು ನಿರ್ದೇಶನ ಮಾಡಲಿದ್ದಾರೆ. ಇವುಗಳಲ್ಲಿ ದುನಿಯಾ ವಿಜಯ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಕಾದು ನೋಡಬೇಕಿದೆ.

ಇನ್ನು ದುನಿಯಾ ವಿಜಯ್​ಗೆ ಪರಭಾಷೆ ಸಿನಿಮಾಗಳಲ್ಲಿ ನಟಿಸುವುದು ಹೊಸತೇನೂ ಅಲ್ಲ. ಈ ಹಿಂದೆ ನಂದಮೂರಿ ಬಾಲಕೃಷ್ಣ ನಟಿಸಿರುವ ‘ವೀರ ಸಿಂಹ ರೆಡ್ಡಿ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಮುಖ್ಯ ವಿಲನ್ ಪಾತ್ರದಲ್ಲಿ ದುನಿಯಾ ವಿಜಿ ನಟಿಸಿದ್ದರು. ಸ್ವತಃ ಬಾಲಕೃಷ್ಣ, ದುನಿಯಾ ವಿಜಯ್ ನಟನೆಗೆ ಭೇಷ್ ಎಂದಿದ್ದರು. ಇದೀಗ ತಮಿಳಿನಿಂದಲೂ ಬುಲಾವ್ ಬರುವ ಸಾಧ್ಯತೆ ಇದ್ದು, ವಿಜಿ ಅದನ್ನು ಹೇಗೆ ಬಳಸಿಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ