ಪುನೀತ್ ರಾಜ್ಕುಮಾರ್ (Puneeth Rajkumar) ಬಗ್ಗೆ ಜನರು ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಅಪ್ಪು ಮಾಡಿದ ಸಾಮಾಜಿಕ ಕೆಲಸಗಳಿಂದಾಗಿ ಅವರನ್ನು ದೇವರ ರೀತಿ ನೋಡುವವರು ಹಲವರಿದ್ದಾರೆ. ಪುನೀತ್ ನಿಧನದ ಬಳಿಕ ಕೋಟ್ಯಂತರ ಅಭಿಮಾನಿಗಳಿಗೆ ತೀವ್ರ ನೋವುಂಟಾಗಿದೆ. ಹೀಗಿರುವಾಗ ಅಪ್ಪು ಫೋಟೋ ಮುಂದೆ ಶಾಂಪೇನ್ (Champagne) ಓಪನ್ ಮಾಡುವ ಮೂಲಕ ‘ಏಕ್ ಲವ್ ಯಾ’ ಚಿತ್ರತಂಡ ವಿವಾದ ಮಾಡಿಕೊಂಡಿದೆ. ‘ಜೋಗಿ’ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ (Ek Love Ya) ಸಿನಿಮಾ ತಂಡದವರು ಮಾಡಿರುವ ಈ ಕೆಲಸಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು (Sa Ra Govindu) ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪುಗೆ ಅವಮಾನ ಆಗುವಂತೆ ನಡೆದುಕೊಂಡಿರುವ ಚಿತ್ರತಂಡದವರು ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
‘ಏಕ್ ಲವ್ ಯಾ’ ಸಿನಿಮಾದಲ್ಲಿ ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಹೀರೋ ಆಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ (ನ.12) ಸಂಜೆ ಈ ಚಿತ್ರದ ಒಂದು ಹಾಡನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಪುನೀತ್ ರಾಜ್ಕುಮಾರ್ ಫೋಟೋಗೆ ಚಿತ್ರತಂಡದವರು ನಮನ ಸಲ್ಲಿಸಿದರು. ಅದೇ ಕಾರ್ಯಕ್ರಮದಲ್ಲಿ ಶಾಂಪೇನ್ ಓಪನ್ ಮಾಡಿ ಸಂಭ್ರಮಿಸಿರುವುದು ಈಗ ವಿವಾದಕ್ಕೆ ಕಾರಣ ಆಗಿದೆ.
‘ನಮ್ಮ ಚಿತ್ರರಂಗದವರೇ ಇಂಥ ಕೆಲಸ ಮಾಡಿದರೆ ನಾವು ಯಾರ ಮೇಲೆ ಆಪಾದನೆ ಮಾಡೋದು ಹೇಳಿ. ಸಾರ್ವಜನಿಕರಿಗೆ ಇದರಿಂದ ಆಕ್ರೋಶ ಬರುತ್ತೋ ಇಲ್ಲವೋ? ದಯವಿಟ್ಟು ಇಂಥದ್ದನ್ನೆಲ್ಲ ಮಾಡಬೇಡಿ. ಪುನೀತ್ ಇಂದು ನಮ್ಮಿಂದ ದೂರವಾಗಿರಬಹುದು. ಆದರೆ ಅವರಿಗೆ ಅವಮಾನ ಆಗುವಂತಹ ಕೆಲಸವನ್ನು ಮಾಡಬೇಡಿ. ಪುನೀತ್ಗೆ ಅವಮಾನ ಆಗುವಂತೆ ನಮ್ಮ ಚಿತ್ರರಂಗದವರು ನಡೆದುಕೊಂಡಿರುವುದರಿಂದ ನಾವೆಲ್ಲರೂ ತಲೆ ತಗ್ಗಿಸುವಂತೆ ಆಗಿದೆ’ ಎಂದು ಸಾ.ರಾ. ಗೋವಿಂದು ಹೇಳಿದ್ದಾರೆ.
‘ಏಕ್ ಲವ್ ಯಾ’ ಚಿತ್ರತಂಡದವರು ಪುನೀತ್ ಅಭಿಮಾನಿಗಳಲ್ಲಿ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಸಾ.ರಾ. ಗೋವಿಂದು ಆಗ್ರಹಿಸಿದ್ದಾರೆ. ಈ ಸಿನಿಮಾದ ಒಂದು ಹಾಡಿನ ರಿಲೀಸ್ ಕಾರ್ಯಕ್ರಮದಲ್ಲಿ ರಕ್ಷಿತಾ ಪ್ರೇಮ್, ಗಾಯಕಿ ಮಂಗ್ಲಿ, ರಚಿತಾ ರಾಮ್, ಅರ್ಜುನ್ ಜನ್ಯ, ಅಕುಲ್ ಬಾಲಾಜಿ, ರಾಣಾ, ನಿಶ್ವಿಕಾ ನಾಯ್ಡು, ಮೇಘನಾ ಗಾಂವ್ಕರ್ ಮುಂತಾದ ಸೆಲೆಬ್ರಿಟಿಗಳು ಭಾಗವಹಿಸಿದ್ದರು.
ಇದನ್ನೂ ಓದಿ:
ಬಸ್ ನಿಲ್ದಾಣದಲ್ಲಿ ಪುನೀತ್ ಫೋಟೋಗೆ ಮುತ್ತಿಟ್ಟು ಕಂಬನಿ ಸುರಿಸಿದ ಅಜ್ಜಿ; ವಿಡಿಯೋ ವೈರಲ್