ಚಿತ್ರರಂಗದ​ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ: ಸಿನಿಮಾ ಹಾಲ್​ಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅವಕಾಶ ನೀಡಲು ಒಪ್ಪಿಗೆ

| Updated By: ganapathi bhat

Updated on: Apr 06, 2022 | 8:15 PM

ಕನ್ನಡ ಚಿತ್ರರಂಗದ​ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ, ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಒಪ್ಪಿಗೆ ಸೂಚಿಸಿದೆ. ಆರೋಗ್ಯ ಸಚಿವ ಡಾ.ಸುಧಾಕರ್ ಈ ಬಗ್ಗೆ ಮಾತನಾಡಿದ್ದಾರೆ.

ಚಿತ್ರರಂಗದ​ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ: ಸಿನಿಮಾ ಹಾಲ್​ಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅವಕಾಶ ನೀಡಲು ಒಪ್ಪಿಗೆ
ಸಿನಿಮಾ ಹಾಲ್​ಗಳಿಗೆ ಶೇ. 100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ
Follow us on

ಬೆಂಗಳೂರು: ಕನ್ನಡ ಚಿತ್ರರಂಗದ​ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ, ಚಿತ್ರಮಂದಿರಗಳ ಪೂರ್ಣ ಸಾಮರ್ಥ್ಯದ (ಶೇ 100) ಪ್ರವೇಶಾವಕಾಶ ನೀಡಲು ಒಪ್ಪಿಗೆ ಸೂಚಿಸಿದೆ. ಆರೋಗ್ಯ ಸಚಿವ ಡಾ.ಸುಧಾಕರ್, ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಒಪ್ಪಿಗೆ ನೀಡಿದ್ದಾರೆ.

ಸುಮಾರು ಒಂದು ಲಕ್ಷ ಮಂದಿ ಚಿತ್ರರಂಗದ ಮೇಲೆ ಅವಲಂಬಿತರಾಗಿದ್ದಾರೆ. ಚಿತ್ರರಂಗದ ಬೇಡಿಕೆ ಮೇರೆಗೆ, ಮುಖ್ಯಮಂತ್ರಿ ಸೂಚನೆ ಅನುಸರಿಸಿ ಎಲ್ಲ ಚಿತ್ರಮಂದಿರಗಳಲ್ಲಿ ನಾಲ್ಕು ವಾರಗಳ ಅವಧಿಗೆ ಶೇ 100ರಷ್ಟು ಆಸನ ಭರ್ತಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಸುಧಾಕರ್ ಹೇಳಿದರು.

ಈ ಬಗ್ಗೆ ಸೂಕ್ತ ಮಾರ್ಗಸೂಚಿ ರಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಮಾರ್ಗಸೂಚಿಯೊಂದಿಗೆ ಈ ಸಂಬಂಧ ನಾಳೆ ಆದೇಶ ಹೊರಡಿಸುತ್ತೇವೆ. ಸಿನಿಮಾ ನೋಡಲು ಬರುವ ಪ್ರೇಕ್ಷಕರು, ಥಿಯೇಟರ್ ಮಾಲೀಕರು ಸಹಕರಿಸಬೇಕು. 4 ವಾರಗಳ ನಂತರ ಪರಿಸ್ಥಿತಿ ಗಮನಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ತೀವಿ. ಕೋವಿಡ್-19 ಈ ಕಾರಣದಿಂದ ಹೆಚ್ಚಾದರೆ ಕಠಿಣ ನಿರ್ಬಂಧ ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.

ನಾಳೆ ಸಂಜೆಯೊಳಗೆ ಸರ್ಕಾರಿ ಆದೇಶ ಹೊರಡಿಸುತ್ತೇವೆ: ಸಚಿವ ಸಿ.ಸಿ.ಪಾಟೀಲ್
ಕಳೆದ 10 ತಿಂಗಳಿನಿಂದ ಚಿತ್ರರಂಗ ಸಮಸ್ಯೆ ಅನುಭವಿಸಿದೆ. ಮುಖ್ಯಮಂತ್ರಿ ಸೂಚನೆ ಮೇರೆಗೆ, ಸಲಹಾ ಸಮಿತಿಯ ಅಸಮಾಧಾನದ ನಡುವೆಯೂ ನಾಳೆ ಸಂಜೆಯೊಳಗೆ ಸರ್ಕಾರಿ ಆದೇಶ ಹೊರಡಿಸುತ್ತೇವೆ. ಶುಕ್ರವಾರದಿಂದ ಚಲನಚಿತ್ರಗಳು ಆರಂಭವಾಗುತ್ತವೆ ಎಂದು ವಾರ್ತಾ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಮಾತನಾಡಿದ್ದಾರೆ.

ನೋಡಲು ಬರುವ ಪ್ರೇಕ್ಷಕರು ಸಹ ಜವಾಬ್ದಾರಿಯಿಂದ ವರ್ತಿಸಬೇಕು. ತಾಂತ್ರಿಕ ಸಲಹಾ ಸಮಿತಿಯ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಚಿತ್ರಮಂದಿರಗಳ ಮಾಲೀಕರು ಪಾಲಿಸಲು ಒಪ್ಪಿಗೆ ನೀಡಿದ್ದಾರೆ. ಒಂದು ತಿಂಗಳ ತಾತ್ಕಾಲಿಕ ಅನುಮತಿ ಇದು ಎಂದು ಪಾಟೀಲ್ ವಿವರಿಸಿದ್ದಾರೆ.

ಇದನ್ನೂ ಓದಿ: Dhruva Sarja Tweet ರಾಜ್ಯ ಸರ್ಕಾರದ ವಿರುದ್ಧ ಧ್ರುವ ಸರ್ಜಾ ತೀವ್ರ ಅಸಮಾಧಾನ; ಟ್ವಿಟರ್​ನಲ್ಲಿ 3 ಪ್ರಶ್ನೆ ಮುಂದಿಟ್ಟ ನಟ

ಸೂತ್ರಗಳು ಸರಳವಾಗಿರಬೇಕು ಎಂದು ಸರ್ಕಾರವನ್ನು ವಿನಂತಿಸುತ್ತೇನೆ: ನಟ ಶಿವರಾಜ್​ಕುಮಾರ್
ಸಾಕಷ್ಟು ಚರ್ಚೆಗಳ ನಂತರ ಸರ್ಕಾರ ಈ ಅನುಮತಿ ನೀಡಿದೆ. ನಮ್ಮ ಅಹವಾಲು ಆಲಿಸಿದ್ದಾರೆ. ಅವರು ನಮ್ಮ ಪರವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ನಮಗೆ ಜವಾಬ್ದಾರಿಯ ಪಾಠ. ಚಿತ್ರಮಂದಿರಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹವಾನಿಯಂತ್ರಕಗಳ ಉಷ್ಣಾಂಶ ಮಿತಿಯಲ್ಲಿರಬೇಕು. 4 ವಾರ ಅನ್ನೋದು ಪ್ರಶ್ನೆಯೇ ಅಲ್ಲ. ಸರ್ಕಾರ ನಮ್ಮ ಮೇಲೆ ಹೊರಿಸಿರುವ ಜವಾಬ್ದಾರಿಯನ್ನು ನಾವು ನಿಮ್ಮ ಮೇಲೆ ಹೊರೆಸ್ತಾ ಇದ್ದೀವಿ. ನೀವು ಜವಾಬ್ದಾರಿಯಿಂದ ನಡೆದುಕೊಂಡು, ಈಡೇರಿಸಬೇಕು ಎಂದು ಶಿವರಾಜ್​ಕುಮಾರ್ ತಿಳಿಸಿದ್ದಾರೆ.

ಸಲಹಾ ಸಮಿತಿ ನೀಡುವ ಮಾರ್ಗದರ್ಶಿ ಸೂತ್ರಗಳು ಸರಳವಾಗಿರಬೇಕು ಎಂದು ಸರ್ಕಾರವನ್ನು ವಿನಂತಿಸುತ್ತೇನೆ. ನಾವು ಪಾಲಿಸಲು ಬದ್ಧರಾಗಿದ್ದೇವೆ ಎಂದು ಶಿವರಾಜ್​ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಚಿತ್ರರಂಗದ ಗಣ್ಯರ ಜತೆ ಈ ಸಭೆ ನಡೆಸಲಾಗಿತ್ತು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ, ಚಿತ್ರರಂಗದ ಗಣ್ಯರ ಜೊತೆ ನಡೆದ ಸಭೆಯಲ್ಲಿ ಸುಧಾಕರ್, ನಟ ಶಿವರಾಜ್ ಕುಮಾರ್, ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಚಲನಚಿತ್ರ ರಂಗದ ಹಿರಿಯರು ಪಾಲ್ಗೊಂಡಿದ್ದಾರೆ.

ಸಿನಿಮಾ ಹಾಲ್ ಪ್ರವೇಶಕ್ಕೆ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿ, ನಿನ್ನೆ (ಫೆ. 2) ಮಾರ್ಗಸೂಚಿ ಹೊರಡಿಸಲಾಗಿತ್ತು. ಈ ಬಗ್ಗೆ ಚಿತ್ರರಂಗ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ನಟ ಶಿವರಾಜ್​ಕುಮಾರ್, ನಿರ್ದೇಶಕ ಪ್ರಶಾಂತ್ ನೀಲ್, ಸಿಂಪಲ್ ಸುನಿ, ನಟ ರಕ್ಷಿತ್ ಶೆಟ್ಟಿ, ದುನಿಯಾ ವಿಜಯ್, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮುಂತಾದವರು ಶೇ. 100 ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಟ್ವೀಟ್ ಮಾಡಿದ್ದರು.

ಶಿವರಾಜ್​ಕುಮಾರ್ ಟ್ವೀಟ್: ಸಿನಿಮಾ ಹಾಲ್​ ಭರ್ತಿಯಾಗುವಷ್ಟು ಪ್ರೇಕ್ಷಕರು ಬರಲು ಅವಕಾಶ ಬೇಕು

Published On - 6:39 pm, Wed, 3 February 21