ನಟಿ ರಮ್ಯಾ ಅವರು ಸಿನಿಮಾಗಳಿಂದ ದೂರು ಉಳಿದು ಹಲವು ವರ್ಷಗಳಾಗಿವೆ. ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಅವರು ಈಗ ಸಿನಿಮಾರಂಗದಿಂದ ಸಂಪೂರ್ಣ ದೂರ ಸರಿದಿದ್ದಾರೆ. ನಟನೆ ಮಾತ್ರವಲ್ಲದೇ ಚಿತ್ರರಂಗದ ಎಲ್ಲ ಬಗೆಯ ಚಟುವಟಿಕೆಗಳಿಂದಲೂ ಅವರು ಅಂತರ ಕಾಪಾಡಿಕೊಂಡಿದ್ದಾರೆ. ಒಂದಷ್ಟು ಸಮಯ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಈಗ ಅದರಿಂದಲೂ ಹೊರಬಂದಿದ್ದಾರೆ. ಸದ್ಯ ರಮ್ಯಾ ಮದುವೆ ಯಾವಾಗ ಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ.
ಸೋಶಿಯಲ್ ಮೀಡಿಯಾದ ಮೂಲಕ ಫ್ಯಾನ್ಸ್ ಜೊತೆ ರಮ್ಯಾ ಸಂಪರ್ಕದಲ್ಲಿ ಇದ್ದಾರೆ. ಭಾನುವಾರ (ಏ.25) ಅವರು ಇನ್ಸ್ಟಾಗ್ರಾಮ್ನಲ್ಲಿ ಅಭಿಮಾನಿಗಳ ಪ್ರಶ್ನೆ ಉತ್ತರಿಸಿದರು. ನೆಟ್ಟಿಗರಿಂದ ಅವರಿಗೆ ಹಲವು ಬಗೆಯ ಪ್ರಶ್ನೆಗಳು ಎದುರಾದವು. ಅದರಲ್ಲಿ ಹೆಚ್ಚು ಹೈಲೈಟ್ ಆಗಿದ್ದು ಮದುವೆ ವಿಚಾರ. ಒಬ್ಬ ಅಭಿಮಾನಿಯಂತೂ ‘ನಿಮ್ಮ ಮದುವೆ ಯಾವಾಗ? ನೀವು ರಕ್ಷಿತ್ ಶೆಟ್ಟಿ ಜೊತೆ ಮದುವೆ ಆಗಿ’ ಎಂದು ಬೇಡಿಕೆ ಇಟ್ಟಿದ್ದಾರೆ!
ಈ ಪ್ರಶ್ನೆ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ರಮ್ಯಾ ಮತ್ತು ರಕ್ಷಿತ್ ಶೆಟ್ಟಿಯನ್ನು ಜೋಡಿಯಾಗಿಸಬೇಕು ಎಂದು ಕನಸು ಕಂಡ ಆ ಅಭಿಮಾನಿ ಯಾರು ಎಂಬುದು ಸದ್ಯಕ್ಕೆ ಬಹಿರಂಗ ಆಗಿಲ್ಲ. ಆದರೆ ಆ ಪ್ರಶ್ನೆಗೆ ರಮ್ಯಾ ತುಂಬ ಕೂಲ್ ಆಗಿ ಉತ್ತರ ನೀಡಿದ್ದಾರೆ. ಸಿಂಪಲ್ ಆಗಿ ರಕ್ಷಿತ್ ಶೆಟ್ಟಿ ಅವರ ಹೆಸರನ್ನು ಟ್ಯಾಗ್ ಮಾಡುವ ಮೂಲಕ ಜೋರಾಗಿ ನಗುತ್ತಿರುವ ಎಮೋಜಿಗಳನ್ನು ರಮ್ಯಾ ಹಂಚಿಕೊಂಡಿದ್ದಾರೆ. ಮದುವೆ ಆಗುತ್ತೇನೆ ಅಥವಾ ಆಗಲ್ಲ ಎಂದು ನೇರವಾಗಿ ಅವರು ಏನನ್ನೂ ಹೇಳಿಲ್ಲ.
ಮದುವೆಗೆ ಸಂಬಂಧಿಸಿದಂತೆ ಇನ್ನೂ ಅನೇಕ ಪ್ರಶ್ನೆಗಳು ಬಂದಿವೆ. ಅದನ್ನು ಕೇಳಿ ಕೇಳಿ ರಮ್ಯಾಗೆ ಸುಸ್ತಾಗಿದೆ. ‘ಮದುವೆ ಮದುವೆ ಮದುವೆ. ಮಾಡೋಕೆ ಇದೊಂದೇ ಕೆಲಸ ಇರುವುದು ಅನ್ನೋ ಹಾಗೆ! ಮದುವೆಯಾಗಿ ಖುಷಿಯಿಂದ ಇರೋಕೆ ಆಗಲ್ಲ ಗೊತ್ತಾ?’ ಎಂದಿದ್ದಾರೆ ರಮ್ಯಾ.
ಮದುವೆ ಆಗುವುದಾದರೆ ಯಾವ ರೀತಿಯ ಹುಡುಗನನ್ನು ಬಯಸುತ್ತೀರಿ ಎಂಬ ಪ್ರಶ್ನೆಗೆ, ‘ಫನ್ನಿ ಪ್ರಶ್ನೆ, ಆದರೆ ಸಹಾನುಭೂತಿ, ಕರುಣೆ ಮತ್ತು ಮುಕ್ತ ಮನಸ್ಸು ಇರುವ ವ್ಯಕ್ತಿ ಬೇಕು’ ಎಂದು ರಮ್ಯಾ ಉತ್ತರಿಸಿದ್ದಾರೆ. ಸದ್ಯಕ್ಕೆ ತಾವು ಯಾರ ಜೊತೆಗೂ ಡೇಟಿಂಗ್ ಮಾಡುತ್ತಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ರಮ್ಯಾ-ರಕ್ಷಿತಾ ನಡುವೆ ಈಗ ಎಂತಹ ಸಂಬಂಧ ಉಳಿದಿದೆ? ಇಲ್ಲಿದೆ ಉತ್ತರ
Ramya: ಇನ್ಸ್ಟಾಗ್ರಾಮ್, ಟ್ವಿಟರ್ನಲ್ಲಿ ಅಭಿಮಾನಿಗಳಿಗೆ ಸಡನ್ ಶಾಕ್ ನೀಡಿದ ರಮ್ಯಾ! ಕಾರಣ ಏನು?
(Fans want Ramya and Rakshit Shetty to get married)
Published On - 12:09 pm, Sun, 25 April 21