ರಮ್ಯಾ-ರಕ್ಷಿತಾ ನಡುವೆ ಈಗ ಎಂತಹ ಸಂಬಂಧ ಉಳಿದಿದೆ? ಇಲ್ಲಿದೆ ಉತ್ತರ

ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ನಟಿ ರಕ್ಷಿತಾ ಪ್ರೇಮ್ ಒಂದು ಉಡುಗೊರೆಯ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಕಂಡು ರಮ್ಯಾ ಫ್ಯಾನ್ಸ್ ಖುಷಿ ಆಗಿದ್ದಾರೆ.

  • TV9 Web Team
  • Published On - 23:46 PM, 20 Apr 2021
ರಮ್ಯಾ-ರಕ್ಷಿತಾ ನಡುವೆ ಈಗ ಎಂತಹ ಸಂಬಂಧ ಉಳಿದಿದೆ? ಇಲ್ಲಿದೆ ಉತ್ತರ
ರಮ್ಯಾ-ರಕ್ಷಿತಾ

ಸ್ಯಾಂಡಲ್​ವುಡ್​ನಲ್ಲಿ ಹಲವು ವರ್ಷಗಳ ಕಾಲ ಸ್ಟಾರ್​ ನಟಿಯರಾಗಿ ಮೆರೆದವರು ರಮ್ಯಾ ಮತ್ತು ರಕ್ಷಿತಾ. ಹಲವು ಸೂಪರ್​ ಹಿಟ್​ ಸಿನಿಮಾಗಳು ಈ ನಟಿಯರ ಖಾತೆಯಲ್ಲಿವೆ. ದರ್ಶನ್​, ಸುದೀಪ್​ ಮುಂತಾದ ಸ್ಟಾರ್​ ನಟರ ಸಿನಿಮಾಗಳಿಗೆ ಬ್ಯಾಕ್​ ಟು ಬ್ಯಾಕ್​ ನಾಯಕಿಯರಾಗಿ ಆಯ್ಕೆ ಆಗಿದ್ದು ಈ ನಟಿಯರ ಹೆಚ್ಚುಗಾರಿಕೆ. ಆದರೆ ಈಗ ಇವರಿಬ್ಬರೂ ಸಿನಿಮಾಗಳಿಂದ ದೂರ ಉಳಿದುಕೊಂಡಿದ್ದಾರೆ. ನಟನೆ ಬದಿಗಿಟ್ಟು ಬೇರೆ ಕೆಲಸಗಳ ಕಡೆಗೆ ಗಮನ ಹರಿಸಿದ್ದಾರೆ. ಒಂದು ಕಾಲದಲ್ಲಿ ಪರಸ್ಪರ ಪೈಪೋಟಿ ನೀಡುತ್ತಿದ್ದ ರಮ್ಯಾ ಮತ್ತು ರಕ್ಷಿತಾ ನಡುವೆ ಈಗ ಎಂತಹ ಸಂಬಂಧ ಇದೆ ಎಂಬುದು ಹಲವರ ಮನದಲ್ಲಿ ಇರುವ ಪ್ರಶ್ನೆ. ಇದಕ್ಕೆ ಈಗ ಉತ್ತರ ಸಿಕ್ಕಿದೆ.

2002ರಲ್ಲಿ ಅಪ್ಪು ಸಿನಿಮಾ ಮೂಲಕ ರಕ್ಷಿತಾ ಸ್ಯಾಂಡಲ್​ವುಡ್​ಗೆ ಕಾಲಿಟ್ಟರೆ, 2003ರಲ್ಲಿ ಅಭಿ ಚಿತ್ರದ ಮೂಲಕ ರಮ್ಯಾ ಬಣ್ಣದ ಲೋಕ ಪ್ರವೇಶಿಸಿದರು. ಇಬ್ಬರೂ ಸ್ಟಾರ್​ ಪಟ್ಟ ಪಡೆದುಕೊಂಡರು. ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಇಬ್ಬರ ನಡುವೆ ಸಖತ್​ ಪೈಪೋಟಿ ಇತ್ತು. ಹಾಗಾಗಿ ಕೆಲವೊಮ್ಮೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುತ್ತಿರಲಿಲ್ಲ ಎಂಬ ಮಾತು ಕೇಳಿಬಂದಿದ್ದು ಉಂಟು. ಆದರೆ ಈಗ ಅದನ್ನೆಲ್ಲ ಮರೆತು ಒಬ್ಬರಿಗೊಬ್ಬರು ಪ್ರೀತಿ ತೋರಿಸುತ್ತಿದ್ದಾರೆ.

ಹೌದು, ರಕ್ಷಿತಾ ಮತ್ತು ರಮ್ಯಾ ನಡುವೆ ಸಿಕ್ಕಾಪಟ್ಟೆ ಫ್ರೆಂಡ್​ಶಿಪ್​ ಶುರುವಾಗಿದೆ. ಅದಕ್ಕೆ ಅವರಿಬ್ಬರ ಸೋಶಿಯಲ್ ಮೀಡಿಯಾ ಪೋಸ್ಟ್​ಗಳೇ ಸಾಕ್ಷಿ ಒದಗಿಸುತ್ತಿವೆ. ಮಾ.31ರಂದು ರಕ್ಷಿತಾ ಜನ್ಮದಿನವಿತ್ತು. ಅಂದು ಅವರಿಗೆ ಟ್ವಿಟರ್​ನಲ್ಲಿ ವಿಶ್​ ಮಾಡುವ ಮೂಲಕ ರಮ್ಯಾ ಪ್ರೀತಿ ತೋರಿಸಿದ್ದರು. ಈಗ ಒಂದು ವಿಶೇಷ ಗಿಫ್ಟ್​ ಕೂಡ ಕಳಿಸಿಕೊಟ್ಟಿದ್ದಾರೆ. ಅದನ್ನು ರಕ್ಷಿತಾ ತುಂಬಾ ಇಷ್ಟಪಟ್ಟಿದ್ದಾರೆ.

ಹುಟ್ಟುಹಬ್ಬದ ಪ್ರಯುಕ್ತ ರಕ್ಷಿತಾಗೆ ರಮ್ಯಾ ಸೀರೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದರ ಜೊತೆಗೆ ಒಂದು ಪತ್ರವನ್ನೂ ಬರೆದಿದ್ದಾರೆ. ‘ನಿನಗೆ ಈ ಸೀರೆ ಇಷ್ಟ ಆಗುತ್ತದೆ ಮತ್ತು ನೀನು ಧರಿಸುತ್ತೀಯ ಎಂಬ ಭರವಸೆ ನನಗಿದೆ. ಎಲ್ಲ ನೆನಪುಗಳಿಗಾಗಿ ಧನ್ಯವಾದಗಳು’ ಎಂದು ಚಿಕ್ಕ ಪತ್ರದಲ್ಲಿ ರಮ್ಯಾ ಪ್ರೀತಿ ತುಂಬಿ ಕಳಿಸಿದ್ದಾರೆ. ಅದಕ್ಕೆ ಈಗ ರಕ್ಷಿತಾ ಕಡೆಯಿಂದ ಉತ್ತರ ಬಂದಿದೆ.

Ramya Rakshita Prem 1

(ನಟಿ ರಕ್ಷಿತಾ ಪ್ರೇಮ್​ ಇನ್​ಸ್ಟಾಗ್ರಾಮ್​ ಸ್ಟೋರಿ)

ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ರಕ್ಷಿತಾ ಈ ಉಡುಗೊರೆಯ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ‘ಖಂಡಿತವಾಗಿಯೂ ನೆನಪುಗಳಿಗೆ ಧನ್ಯವಾದಗಳು. ನಿನ್ನ ಬಗ್ಗೆ ಹೇಳದಿದ್ದರೆ ನನ್ನ ಪಯಣ ಪೂರ್ಣ ಆಗುವುದಿಲ್ಲ’ ಎಂದು ರಕ್ಷಿತಾ ಪ್ರತಿಕ್ರಿಯಿಸಿದ್ದಾರೆ. ಇದನ್ನು ಕಂಡು ಈ ಇಬ್ಬರೂ ನಟಿಯರ ಫ್ಯಾನ್ಸ್ ಖುಷಿ​ ಆಗಿದ್ದಾರೆ.

ಸಿನಿಮಾ ಬಿಟ್ಟು ರಾಜಕೀಯದ ಕಡೆಗೆ ತೆರಳಿದ್ದ ರಮ್ಯಾ ಈಗ ಬ್ರೇಕ್​ ಪಡೆದುಕೊಂಡಿದ್ದಾರೆ. ಅತ್ತ ರಕ್ಷಿತಾ ಅವರು ನಿರ್ಮಾಪಕಿಯಾಗಿ ತೊಡಗಿಕೊಂಡಿದ್ದಾರೆ. ಕಿರುತೆರೆ ಕಾರ್ಯಕ್ರಮಗಳ ಜಡ್ಜ್​ ಆಗಿಯೂ ಅವರು ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ನಟಿಯರು ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ. ಆ ಮೂಲಕ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇದ್ದಾರೆ.

ಇದನ್ನೂ ಓದಿ: Ramya: ಇನ್​ಸ್ಟಾಗ್ರಾಮ್​, ಟ್ವಿಟರ್​ನಲ್ಲಿ ಅಭಿಮಾನಿಗಳಿಗೆ ಸಡನ್​ ಶಾಕ್​ ನೀಡಿದ ರಮ್ಯಾ! ಕಾರಣ ಏನು?