ಅಡ್ವೆಂಚರ್ ಕಾಮಿಡಿ ಶೈಲಿಯ ‘ಫಾರೆಸ್ಟ್’ ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನವರಿ 24ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪ್ರೀ-ರಿಲೀಸ್ ಇವೆಂಟ್ ಮಾಡಲಾಯಿತು. ಎನ್.ಎಂ. ಕಾಂತರಾಜ್ ಅವರು ‘ಎನ್.ಎಂ.ಕೆ. ಸಿನಿಮಾಸ್’ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಂದ್ರ ಮೋಹನ್ ಅವರು ನಿರ್ದೇಶನ ಮಾಡಿದ್ದಾರೆ. ಅನೀಶ್ ತೇಜೇಶ್ವರ್, ಚಿಕ್ಕಣ್ಣ, ಗುರುನಂದನ್, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು ಅವರು ‘ಫಾರೆಸ್ಟ್’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
‘ಫಾರೆಸ್ಟ್’ ಎಂಬ ಶೀರ್ಷಿಕೆ ಕೇಳಿದರೆ ಇದು ಕಾಡಿನ ಕಥೆ ಎನಿಸುತ್ತದೆ. ಆ ಬಗ್ಗೆ ನಟ ರಂಗಾಯಣ ರಘು ಮಾತನಾಡಿದರು.‘ಇದು ಕಾಡನ್ನು ಬೆಳೆಸುವ ಅಥವಾ ಉಳಿಸುವ ಕಥೆ ಅಲ್ಲ. ಕಾಡಿನಲ್ಲಿ ಇರುವುದನ್ನು ಹುಡುಕುವ ಕಥೆ. ಇದರಲ್ಲಿ ನನ್ನದು ಮಂತ್ರವಾದಿಯ ಪಾತ್ರ’ ಎಂದು ಅವರು ಹೇಳಿದರು. ‘ಹಳ್ಳಿಯಿಂದ ಕಾಡಿಗೆ ಹೋಗುವ ಅಮಾಯಕರ ಕಥೆಯಿದು’ ಎಂದು ಚಿಕ್ಕಣ್ಣ ಹೇಳಿದರು.
‘ನನ್ನದು ಈ ಸಿನಿಮಾದಲ್ಲಿ ಅಮಾಯಕನ ಪಾತ್ರ’ ಎಂದರು ನಟ ಗುರುನಂದನ್. ‘ಇದೇ ಮೊದಲ ಬಾರಿಗೆ ನಾನು ನನ್ನ ಜಾನರ್ನ ಹೊರತುಪಡಿಸಿ ಮಾಡಿರುವ ಸಿನಿಮಾ ಇದು’ ಎಂದಿದ್ದಾರೆ ಅನೀಶ್ ತೇಜೇಶ್ವರ್. ನಟಿ ಅರ್ಚನಾ ಕೊಟ್ಟಿಗೆ ಅವರು ‘ಫಾರೆಸ್ಟ್’ ಸಿನಿಮಾದಲ್ಲಿ ಮೀನಾಕ್ಷಿ ಎಂಬ ಪಾತ್ರ ಮಾಡಿದ್ದಾರೆ. ‘ನಾನು ಸಾಹಸ ದೃಶ್ಯಗಳಲ್ಲಿ ನಟಿಸಿರುವುದು ವಿಶೇಷ’ ಎಂದು ಅವರು ಹೇಳಿದರು.
ನಿರ್ದೇಶಕ ಚಂದ್ರಮೋಹನ್ ಮಾತನಾಡಿ, ‘ಮಡಿಕೇರಿಯ ಸಂಪಂಜೆ ಕಾಡಿನಲ್ಲಿ ಈ ಸಿನಿಮಾಗೆ 25 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ. ಮಲೆ ಮಹದೇಶ್ವರ ಬೆಟ್ಟ ಹಾಗೂ ಬೆಂಗಳೂರಿನಲ್ಲೂ ಚಿತ್ರೀಕರಣ ಆಗಿದೆ. ಸತ್ಯ ಶೌರ್ಯ ಸಾಗರ್ ಮತ್ತು ನಾನು ಕಥೆ, ಚಿತ್ರಕಥೆ ಬರೆದಿದ್ದೇವೆ. ಟೀಸರ್, ಹಾಡುಗಳು ಮತ್ತು ಟ್ರೇಲರ್ ಎಲ್ಲರ ಮನಸ್ಸಿಗೂ ಹತ್ತಿರವಾಗಿದೆ. ಜನವರಿ 24ರಂದು ಸಿನಿಮಾ ಬಿಡುಗಡೆ ಆಗಲಿದೆ’ ಎಂದರು.
ಇದನ್ನೂ ಓದಿ: ರಂಗಾಯಣ ರಘು ಪಾತ್ರಕ್ಕೆ ಹೊಸ ಭಾಷೆ ಸೃಷ್ಟಿ ಮಾಡಿದ ಯೋಗರಾಜ್ ಭಟ್
‘ನಮ್ಮ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ವಿತರಣೆಯನ್ನೂ ನಾನೇ ಮಾಡುತ್ತಿದ್ದೇನೆ. 250ಕ್ಕೂ ಅಧಿಕ ಥಿಯೇಟರ್ಗಳಲ್ಲಿ ಬಿಡುಗಡೆ ಮಾಡಲಿದ್ದೇವೆ. ಎಲ್ಲರಿಗೂ ಈ ಸಿನಿಮಾ ಇಷ್ಟ ಆಗುತ್ತದೆ ಎಂಬ ಭರವಸೆಯಿದೆ’ ಎಂದು ನಿರ್ಮಾಪಕ ಕಾಂತಾರಾಜ್ ಹೇಳಿದ್ದಾರೆ. ಶರಣ್ಯ ಶೆಟ್ಟಿ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.