ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮದಿನವನ್ನು (Gandhi Jayanti) ಇಂದು (ಅಕ್ಟೋಬರ್ 2) ಎಲ್ಲಡೆ ಆಚರಿಸಲಾಗುತ್ತಿದೆ. ಹಾಗೆಯೇ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಆಚರಿಸಲಾಗಿದೆ. ಶಾಲೆ, ಕಾಲೇಜು, ಸರ್ಕಾರಿ ಕಚೇರಿ ಮುಂತಾದ ಕಡೆಗಳಲ್ಲಿ ಈ ನಾಯಕರ ಜನ್ಮದಿನವನ್ನು ಸೆಲೆಬ್ರೇಟ್ ಮಾಡಲಾಗಿದೆ. ನಟ ಶಿವರಾಜ್ಕುಮಾರ್ (Shivarajkumar) ಕೂಡ ಮೈಸೂರಿನ ಶಕ್ತಿಧಾಮದಲ್ಲಿ ಮಕ್ಕಳ ಜೊತೆ ಸೇರಿ ಈ ನಾಯಕರ ಜಯಂತಿಯಲ್ಲಿ ಪಾಲ್ಗೊಂಡಿದ್ದಾರೆ. ಮಹಾತ್ಮ ಗಾಂಧಿ (Mahatma Gandhi) ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರೀತಿ ವೇಷ ಧರಿಸಿದ ಮಕ್ಕಳ ಜೊತೆ ನಿಂತು ಶಿವರಾಜ್ಕುಮಾರ್ ಅವರು ಪೋಸ್ ನೀಡಿದ್ದಾರೆ. ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅವರು ಶುಭ ಕೋರಿದ್ದಾರೆ.
‘ಇಂದು ನಮ್ಮ ಶಕ್ತಿಧಾಮ ಮಕ್ಕಳ ಜೊತೆ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದ್ದು ಸಂತೋಷವಾಯ್ತು. ಮಕ್ಕಳು ಈ ಧೀಮಂತ ನಾಯಕರ ಚಿಂತನೆಯನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಲಿ’ ಎಂದು ಶಿವರಾಜ್ಕುಮಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಶಕ್ತಿಧಾಮದ ಮಕ್ಕಳ ಬಗ್ಗೆ ಡಾ. ರಾಜ್ಕುಮಾರ್ ಅವರ ಕುಟುಂಬ ಬಹಳ ಕಾಳಜಿ ಹೊಂದಿದೆ. ಹಲವು ವಿಶೇಷ ದಿನಗಳಲ್ಲಿ ಶಿವರಾಜ್ಕುಮಾರ್ ಅವರು ಅಲ್ಲಿಗೆ ಭೇಟಿ ನೀಡುತ್ತಾರೆ. ಇಂದು ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಪ್ರಯುಕ್ತ ಅಲ್ಲಿಗೆ ಶಿವಣ್ಣ ತೆರಳಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಶಿವರಾಜ್ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅಕ್ಟೋಬರ್ 19ರಂದು ಈ ಚಿತ್ರ ಅದ್ದೂರಿಯಾಗಿ ತೆರೆ ಕಾಣಲಿದೆ. ಈ ಸಿನಿಮಾಗೆ ಶ್ರೀನಿ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ಅನುಪಮ್ ಖೇರ್, ಅರ್ಚನಾ ಜೋಯಿಸ್ ಮುಂತಾದವರು ‘ಘೋಸ್ಟ್’ ಚಿತ್ರದಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.
ಮಹಾತ್ಮ ಗಾಂಧಿ-ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ; ಇಬ್ಬರೂ ನಾಯಕರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ
‘ಘೋಸ್ಟ್’ ಟ್ರೇಲರ್ನಲ್ಲಿ ಹಲವು ಅಂಶಗಳು ಹೈಲೈಟ್ ಆಗಿವೆ. ಶಿವರಾಜ್ಕುಮಾರ್ ಅವರ ಎರಡು ಗೆಟಪ್ಗಳನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆದಿದೆ. ಅದ್ದೂರಿ ಮೇಕಿಂಗ್ ಮತ್ತು ಮೈನವಿರೇಳಿಸುವಂತಹ ಆ್ಯಕ್ಷನ್ ಸನ್ನಿವೇಶಗಳ ಝಲಕ್ ಈ ಟ್ರೇಲರ್ನಲ್ಲಿ ಕಾಣಿಸಿದೆ. ಸಂದೇಶ್ ಎನ್. ಅವರು ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.