‘ಚಿನ್ನದ ಅಂಗಡಿ ಧರಿಸಿ’ ಬಿಗ್​ಬಾಸ್ ಮನೆಗೆ ಹೋದ ಸುರೇಶ್, ಕಾಲೆಳೆದ ಸುದೀಪ್

|

Updated on: Sep 29, 2024 | 10:07 PM

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿದ್ದು ವಿಪರೀತ ಚಿನ್ನದ ಆಭರಣ ತೊಟ್ಟು ಗೋಲ್ಡ್ ಸುರೇಶ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರನ್ನು ಎದುರಾದ ಸುದೀಪ್, ಸುರೇಶ್ ಕಾಲೆಳೆದರು.

‘ಚಿನ್ನದ ಅಂಗಡಿ ಧರಿಸಿ’ ಬಿಗ್​ಬಾಸ್ ಮನೆಗೆ ಹೋದ ಸುರೇಶ್, ಕಾಲೆಳೆದ ಸುದೀಪ್
Follow us on

ಬಿಗ್​ಬಾಸ್ ಮನೆಗೆ ಸುರೇಶ್ ಹೆಸರಿನ ಅಪರೂಪದ ವ್ಯಕ್ತಿಯೊಬ್ಬರು ಹೋಗುತ್ತಿರುವುದಾಗಿ ನಿನ್ನೆಯೇ ಘೋಷಣೆ ಮಾಡಲಾಗಿತ್ತು. ಸಣ್ಣ ಪ್ರೋಮೋ ಒಂದನ್ನು ಸಹ ಬಿಡುಗಡೆ ಮಾಡಿದ್ದರು. ಪ್ರೋಮೋನಲ್ಲಿ ಕಾಂಟ್ರಾಕ್ಟ್ ಕೆಲಸ ಮಾಡುವ ಸುರೇಶ್ ಅವರು ಮೈಮೆಲ್ಲಾ ಚಿನ್ನ ಧರಿಸಿ ಬಿಗ್​ಬಾಸ್ ಮನೆಗೆ ಹೋಗುತ್ತಿರುವ ವಿಡಿಯೋ ಇತ್ತು. ಅಂದಹಾಗೆ ಆ ಗೋಲ್ಡ್ ಸುರೇಶ್ ಅವರು ಇಂದು ಕಿಚ್ಚ ಸುದೀಪ್ ಅವರೊಟ್ಟಿಗೆ ಮುಖಾ-ಮುಖಿ ಆದರು. ಈ ಸಮಯದಲ್ಲಿ ಇಬ್ಬರ ನಡುವೆ ಕೆಲ ಸ್ವಾರಸ್ಯಕರ ಮಾತುಕತೆ ನಡೆಯಿತು, ಸುದೀಪ್ ತಮ್ಮ ಎಂದಿನ ಲಯದಲ್ಲಿ ತಮಾಷೆ ಮಾಡುತ್ತಾ ಸುರೇಶ್ ಕಾಲೆಳೆದರು.

ಗೋಲ್ಡ್ ಸುರೇಶ್ ಅವರು ಪಂಚೆ-ಶರ್ಟ್ ಧರಿಸಿ ಬಂದಿದ್ದರು, ಮೈಮೇಲೆ ಕೆಜಿಗಟ್ಟಲೆ ಚಿನ್ನ ಧರಿಸಿದ್ದರು. ಕೈಗೆ ಅಗಲವಾದ ಚಿನ್ನದ ಬ್ಯಾಂಡ್ ಅನ್ನೇ ಧರಿಸಿದ್ದರು. ಸೊಂಟಕ್ಕೆ ಧರಿಸುವ ಬೆಲ್ಟ್​ ಗಾತ್ರದಲ್ಲಿರುವ ಮೂರು ನಾಲ್ಕು ಚಿನ್ನದ ಚೈನುಗಳನ್ನು ಕೊರಳಿಗೆ ಹಾಕಿಕೊಂಡಿದ್ದರು ಸುರೇಶ್. ಹತ್ತು ಬೆರಳುಗಳಿಗೂ ಚಿನ್ನದ ದೊಡ್ಡ ದೊಡ್ಡ ಉಂಗುರಗಳನ್ನು ಧರಿಸಿದ್ದರು ಸುರೇಶ್. ಅವರ ಅವತಾರ ನೋಡಿ ಏನಿದು ಚಿನ್ನದ ಅಂಗಡಿಯನ್ನೇ ತೊಟ್ಟು ಬಂದಿದ್ದೀರಿ ಎಂದು ತಮಾಷೆ ಮಾಡಿದರು ಸುದೀಪ್. ಮೈಮೇಲೆ ಎಷ್ಟು ಮೌಲ್ಯದ ಚಿನ್ನದ ಆಭರಣ ಇರಬಹುದು ಎಂಬ ಪ್ರಶ್ನೆಗೆ ಸುಮಾರು 1.5 ರಿಂದ 2 ಕೋಟಿ ರೂಪಾಯಿ ಬೆಲೆಯ ಆಭರಣ ಇದಾಗಿರಬಹುದು ಎಂದು ಸುರೇಶ್.

ಅದಾದ ಬಳಿಕ, ಇಷ್ಟು ಭಾರಿ ಮೌಲ್ಯದ ಚಿನ್ನದ ಆಭರಣ ತೊಟ್ಟು ಓಡಾಡುವ ನಿಮಗೆ ಭದ್ರತೆ ಹೇಗೆ? ಇದು ಸುರಕ್ಷಿತವೇ? ಎಂದು ಪ್ರಶ್ನಿಸಿದರು. ಅದಕ್ಕೆ ಸುರೇಶ್, ನಾನು ಐದಾರು ಜನ ಸೆಕ್ಯುರಿಟಿಗಳನ್ನು ಇಟ್ಟುಕೊಂಡೇ ಓಡಾಡುತ್ತೀನಿ. ಅದರಲ್ಲಿ ಇಬ್ಬರು ಗನ್​ ಮ್ಯಾನ್​ಗಳಿರುತ್ತಾರೆ ಎಂದರು. ಬಳಿಕ ಸುದೀಪ್ ಅವರು ಸುರೇಶ್ ಅವರ ಎಲ್ಲ ಸೆಕ್ಯುರಿಟಿ ಅವರನ್ನು ವೇದಿಕೆ ಮೇಲಕ್ಕೆ ಕರೆಸಿದರು. ಬಳಿಕ ತಮ್ಮ ಭದ್ರತಾ ಸಿಬ್ಬಂದಿ ಕಡೆ ತಿರುಗಿ ನೀವೆಲ್ಲಿದ್ದೀರಿ ಎಂದರು. ಸುದೀಪ್ ಅವರ ಭದ್ರತೆ ನೀಡುವ ಕಿರಣ್ ಅಲ್ಲೇ ಕೂತಿದ್ದರು. ‘ನನ್ನ ಸೆಕ್ಯುರಿಟಿ ಅವರು ಅಲ್ಲ ಸಾರ್, ನಾವು ಏನನ್ನು ರಕ್ಷಿಸಬೇಕು ನೀವೇ ಹೇಳಿ’ ಎಂದು ಕೇಳುತ್ತಾರೆ ಎಂದು ತಮಾಷೆ ಮಾಡಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಗೆ ಮತ್ತೆ ಬಂತು ಚಿನ್ನದ ಹುಲಿ ಉಗುರು? ಯಾರು ಈ ನಡೆದಾಡುವ ಚಿನ್ನದ ಅಂಗಡಿ

ಗೋಲ್ಡ್ ಸುರೇಶ್​ ಅವರಿಗೆ ಇನ್ನೊಂದು ಆಸೆಯಿದೆಯಂತೆ. ಅವರಿಗೆ ಚಿನ್ನದ ಶರ್ಟ್ ಮಾಡಿಸಿಕೊಂಡು ಅದನ್ನು ಧರಿಸಿಕೊಳ್ಳಬೇಕು ಎಂಬ ಆಸೆ ಇದೆಯಂತೆ. ಅದಕ್ಕೆ ಸುದೀಪ್, ಚಿನ್ನದ ಶರ್ಟ್​, ಫೋಲ್ಡ್ ಹೇಗೆ ಆಗುತ್ತೆ, ಅದನ್ನು ಹೇಗೆ ಹಾಕಿಕೊಳ್ಳುತ್ತೀರಿ ಎಂದು ಅನುಮಾನ ವ್ಯಕ್ತಪಡಿಸಿದರು. ಅದಕ್ಕೆ ಸುರೇಶ್, ‘ಆಗುತ್ತೆ ಸರ್, ಈಗಾಗಲೇ ಮುಂಬೈನ ವ್ಯಕ್ತಿಯೊಬ್ಬರ ಬಳಿ ಇದೆ, ಕರ್ನಾಟಕದಲ್ಲಿ ನಾನು ಅದನ್ನು ಹಾಕಿಕೊಂಡು, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್​ಗೆ ಹೆಸರು ಸೇರಿಸಬೇಕು ಎಂಬ ಆಸೆ ಇದೆ’ ಎಂದರು.

ಅದಕ್ಕೆ ಸುರೇಶ್, ‘ಸರ್, ನೀವು ಕರ್ನಾಟಕದ ಆಸ್ತಿ, ನಿಮಗೆ ಹೆಚ್ಚು ಭದ್ರತೆಯ ಅವಶ್ಯಕತೆ ಇದೆ’ ಎಂದರು. ಬಳಿಕ ಮಾತು ಮುಂದುವರೆಸಿದ ಸುದೀಪ್, ಸುರೇಶ್ ಅವರನ್ನು ಬಿಗ್​ಬಾಸ್​ಗೆ ಬಂದಿರುವ ಕಾರಣ ಕೇಳಿದರು. ಬಾಲ್ಯದಲ್ಲಿ ಮನೆ ಬಿಟ್ಟು ಓಡಿ ಹೋಗಿದ್ದ ವಿಷಯ, ಓದಿನಲ್ಲಿ ಹಿಂದುಳಿದ ವಿಷಯ, ಬೆಂಗಳೂರಿಗೆ ಬಂದು ನಾನಾ ಕೆಲಸ ಮಾಡಿ ಕನ್ಸ್​ಟ್ರಕ್ಷನ್ ಫೀಲ್ಡ್​ಗೆ ಬಂದಿದ್ದು ಎಲ್ಲವನ್ನೂ ವಿವರಿಸಿದರು ಸುರೇಶ್. ‘ನಾನೂ ಉತ್ತರ ಕರ್ನಾಟಕದವನು, ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ನಾನು ಈ ವೇದಿಕೆ ಮೂಲಕ ನಾನು ಉತ್ತರ ಕರ್ನಾಟಕದ ಜನರಲ್ಲಿ ಸ್ಪೂರ್ತಿ ತುಂಬಬೇಕಿದೆ ಹಾಗೂ ಈ ವರೆಗೆ ಯಾವ ಉತ್ತರ ಕರ್ನಾಟಕದವರೂ ಸಹ ಟ್ರೋಫಿ ಗೆದ್ದಿಲ್ಲ, ನಾನು ಟ್ರೋಫಿ ಗೆಲ್ಲುವ ಮೂಲಕ ಆ ಕೊರತೆ ನೀಗಿಸಬೇಕು ಎಂಬ ಆಸೆ ಇದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ