ಆ ದಿನ ಅನಂತ್ ನಾಗ್ ಮಾತನ್ನು ಕೇಳಿದ್ರೆ ಶಂಕರ್ ನಾಗ್​ಗೆ ಅಪಘಾತ ಆಗುತ್ತಲೇ ಇರಲಿಲ್ಲ

ಶಂಕರ್ ನಾಗ್ ಅವರು 1990ರ ಸೆಪ್ಟೆಂಬರ್ 30ರಂದು ಅಘಾತದಲ್ಲಿ ನಿಧನ ಹೊಂದಿದರು. ಆಗ ಅವರಿಗೆ 35 ವರ್ಷ ವಯಸ್ಸು. ಕೆಲವೇ ವರ್ಷಗಳಲ್ಲಿ ಅವರು ಸಾಕಷ್ಟು ಸಿನಿಮಾ ಮಾಡಿದ್ದರು. ಅಂದು ಅನಂತ್ ನಾಗ್ ಮಾತನ್ನು ಕೇಳಿದ್ದರೆ ಶಂಕರ್ ನಾಗ್ ನಿಧನ ಹೊಂದುತ್ತಲೇ ಇರಲಿಲ್ಲ.

ಆ ದಿನ ಅನಂತ್ ನಾಗ್ ಮಾತನ್ನು ಕೇಳಿದ್ರೆ ಶಂಕರ್ ನಾಗ್​ಗೆ ಅಪಘಾತ ಆಗುತ್ತಲೇ ಇರಲಿಲ್ಲ
ಶಂಕರ್ ನಾಗ್
Follow us
| Updated By: ರಾಜೇಶ್ ದುಗ್ಗುಮನೆ

Updated on: Sep 30, 2024 | 7:51 AM

ಶಂಕರ್ ನಾಗ್ ಅವರು ನಿಧನ ಹೊಂದಿದ್ದು ಸೆಪ್ಟೆಂಬರ್ 30ರಂದು. ಅವರು ಇಲ್ಲದಾಗಿ ಇಂದಿಗೆ 34  ವರ್ಷಗಳು ಕಳೆದಿವೆ. ಶಂಕರ್ ನಾಗ್ ಅವರು ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿತ್ತು. ಅವರು ಕಾರು ಚಲಾಯಿಸುತ್ತಿದ್ದರು ಎಂಬ ವಾದ ಕೆಲವು ಕಡೆಗಳಲ್ಲಿ ಇದೆ. ಆದರೆ, ಅವರು ಕಾರು ಓಡಿಸಿಲ್ಲ ಎಂದು ಕೂಡ ಕೆಲವರು ಹೇಳುತ್ತಾರೆ. ಅಂದು ಅನಂತ್ ನಾಗ್ ಮಾತನ್ನು ಕೇಳಿದ್ದರೆ ಶಂಕರ್ ನಾಗ್ ನಿಧನ ಹೊಂದುತ್ತಲೇ ಇರಲಿಲ್ಲ. ಅವರ ಕಾರು ಚಾಲಕ ದಾಸ್ ‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು.

ಶಂಕರ್ ನಾಗ್ ಅವರ ಮನೆಯಲ್ಲಿ ಕೇರಳ ಮೂಲದ ದಾಸ್ ಅವರು ಕಾರು ಚಾಲಕರಾಗಿ ಇದ್ದರು. ಅವರು ಯಾವಾಗಲೂ ಶಂಕರ್ ನಾಗ್ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. 1990ರರ ಸೆಪ್ಟೆಂಬರ್ 29ರಂದು ಶಂಕರ್ ನಾಗ್ ಅವರು ‘ಜೋಕುರಸ್ವಾಮಿ’ ಸಿನಿಮಾದ ಪೂಜೆಗೆ ಬಾಗಲಕೋಟೆಯ ಲೋಕಾಪುರಕ್ಕೆ ತೆರಳಬೇಕಿತ್ತು. ಅಂದು ಶಂಕರ್ ನಾಗ್, ಅರುಂಧತಿ ನಾಗ್ ಹಾಗೂ ಅವರ ಮಗಳು ಕಾರಲ್ಲಿ ಹೋಗುವವರು ಇದ್ದರು.

ಮಧ್ಯಾಹ್ನ ಆದರೂ ಶಂಕರ್​ನಾಗ್ ಹೊರಡಲಿಲ್ಲ. ಆಗ ಅಲ್ಲಿಗೆ ಅನಂತ್ ನಾಗ್ ಬಂದರು. ಅವರು ದಾಸ್ ಅವರಿಂದ ಈ ವಿಚಾರ ತಿಳಿದು ಸಿಟ್ಟಾಗಿದ್ದರು. ‘ರಾತ್ರಿ ಜರ್ನಿ ಬೇಡ’ ಎಂದು ಅನಂತ್ ನಾಗ್ ಬೈದಿದ್ದರು. ಹೋಗೋದು ಬೇಡ ಎಂದು ಕೂಡ ಹೇಳಿದ್ದರು. ಸಂಜೆ ವೇಳೆಗೆ ಎಲ್ಲಾ ಪ್ಲ್ಯಾನ್ ಚೇಂಜ್ ಆಗಿತ್ತು.

ದಾಸ್ ಅವರ ಕಾರಲ್ಲಿ ನಟ ರಮೇಶ್, ಕಾಶಿ ಅವರು ಹೋಗಬೇಕು ಎನ್ನುವ ಪ್ಲ್ಯಾನ್ ಆಯಿತು. ‘ನಾನು ಲಿಂಗಣ್ಣ ಅವರ ಜೊತೆ ಕಾರಲ್ಲಿ ಬರುತ್ತೇನೆ’ ಎಂದು ದಾಸ್ ಬಳಿ ಶಂಕರ್ ನಾಗ್ ಹೇಳಿದ್ದರು. ಈ ಮಾತಿನಂತೆ ದಾಸ್ ಅವರು ಲೋಕಾಪುರಕ್ಕೆ ತೆರಳಿದರು. ನಂತರ ಮರುದಿನದ ವೇಳೆಗೆ ಕೆಟ್ಟ ಸುದ್ದಿ ಕಿವಿಗೆ ಬಿದ್ದಿತ್ತು.

ದಾವಣಗೆರೆ ಸಮೀಪದ ಆನಗೋಡು ಗ್ರಾಮದಲ್ಲಿ ಅಪಘಾತ ಆಗಿತ್ತು. ಶಂಕರ್ ನಾಗ್ ಕಾರು ಟ್ರಕ್​ಗೆ ಡಿಕ್ಕಿ ಹೊಡೆದಿತ್ತು. ಕಾರಿನಲ್ಲಿ ಇದ್ದ ಚಾಲಕ ಲಿಂಗಣ್ಣ ಹಾಗೂ ಶಂಕರ್ ನಾಗ್ ನಿಧನ ಹೊಂದಿದರೆ, ಅವರ ಪತ್ನಿ ಅರುಂಧತಿ ನಾಗ್ ಹಾಗೂ ಮಗಳು ಬದುಕಿದ್ದರು.

ಇದನ್ನೂ ಓದಿ: ಶಂಕರ್ ನಾಗ್​ಗೆ ನಿಧನದ ಮೊದಲೇ ಸಿಕ್ಕಿತ್ತು ಸೂಚನೆ; ಅನಂತ್ ನಾಗ್ ಹೇಳಿದ ಆ ಮಾತು ನಿಜವಾಯ್ತು

ಶಂಕರ್ ನಾಗ್ ಅವರು ಸಣ್ಣ ವಯಸ್ಸಿನಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದರು. ಒಂದೊಮ್ಮೆ ಅವರು ದಾಸ್ ಜೊತೆ ಕಾರಿನಲ್ಲಿ ಹೋದರೆ ಅಥವಾ ಅನಂತ್ ನಾಗ್ ಮಾತು ಕೇಳಿ ಬೆಂಗಳೂರಲ್ಲೇ ಉಳಿದಿದ್ದರೆ ಅವರು ನಿಧನ ಹೊಂದುತ್ತಿರಲಿಲ್ಲವೇನೋ. ‘ಒಂದು ಮುತ್ತಿನ ಕಥೆ’ ಅವರು ನಿರ್ದೇಶನ ಮಾಡಿದ ಕೊನೆಯ ಚಿತ್ರ. 1992ರಲ್ಲಿ ರಿಲೀಸ್ ಆದ ‘ಪ್ರಾಣ ಸ್ನೇಹಿತ’ ಅವರ ನಟನೆಯ ಕೊನೆಯ ಚಿತ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.