ಕೊರೊನಾಗೆ ತತ್ತರಿಸಿದ್ದ ಕನ್ನಡ ಚಿತ್ರರಂಗ ಈಗತಾನೇ ಸುಧಾರಿಸಿಕೊಳ್ಳುತ್ತಿದೆ. ಸ್ಟಾರ್ ನಟರ ಚಿತ್ರಗಳು ಒಂದಾದಮೇಲೆ ಒಂದರಂತೆ ತೆರೆಗೆ ಬರುತ್ತಿದ್ದು, ಪ್ರೇಕ್ಷಕರು ಕೂಡ ಥಿಯೇಟರ್ನತ್ತ ಮುಖ ಮಾಡುತ್ತಿದ್ದಾರೆ. ಹೀಗಿರುವಾಗಲೇ ರಾಜ್ಯ ಸರ್ಕಾರ ಸಿನಿ ಪ್ರಿಯರಿಗೆ ಶಾಕ್ ನೀಡಿದೆ. ರಾಜ್ಯದ ಕೆಲ ಜಿಲ್ಲೆಗಳ ಸಿನಿಮಾ ಹಾಲ್ಗಳಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡುವ ಆದೇಶವನ್ನು ಸರ್ಕಾರ ಹೊರಡಿಸಿದೆ.
ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಬೇಕು. ಈ ಮೂಲಕ ಕೊವಿಡ್ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಯಡಿಯೂರಪ್ಪ ಅವರಿಗೆ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಇತ್ತೀಚೆಗೆ ಸಲಹೆ ನೀಡಿದ್ದರು. ಆದರೆ, ಈ ಸಲಹೆಯನ್ನು ಸರ್ಕಾರ ನಿರಕಾರಿಸಿತ್ತು. ಹೀಗಿರುವಗಾಲೇ ಈಗ ಸರ್ಕಾರ ಶೇ.50 ಆಸನ ವ್ಯವಸ್ಥೆ ನಿರ್ಧಾರ ತೆಗೆದುಕೊಂಡಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಉಡುಪಿ, ಕಲಬುರಗಿ, ದಕ್ಷಿಣ ಕನ್ನಡ, ಬೀದರ್, ಧಾರವಾಡ ಜಿಲ್ಲೆಗಳಿಗೆ ಈ ನಿಯಮ ಅನ್ವಯ ಆಗಲಿದೆ.
ಇತ್ತೀಚೆಗೆ ಸುದ್ದಿಗೋಷ್ಠಿ ಕರೆದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಕೋರಿದ್ದರು. ಈ ಮಧ್ಯೆ, ಬೃಹತ್ ಬೆಂಗಳೂರು ನಗರ ಪಾಲಿಕೆ ಬೆಂಗಳೂರಲ್ಲಿ ಚಿತ್ರಮಂದಿರದಲ್ಲಿ ಆಸನ ವ್ಯವಸ್ಥೆಯನ್ನು ಶೇ.50ಕ್ಕೆ ಇಳಿಸಬೇಕು ಎಂದು ಸರ್ಕಾರದ ಮುಂದೆ ಪ್ರಸ್ತಾವನೆ ಇರಿಸಿತ್ತು. ಆದರೆ, ಈ ಪ್ರಸ್ತಾಪವನ್ನು ಸರ್ಕಾರ ನಿರಕಾರಿಸಿತ್ತು. ಆದರೆ, ಬೆಂಗಳೂರು ಸೇರಿ ರಾಜ್ಯಾದ್ಯಂತ ಕೊರೊನಾ ಪ್ರಕರಣ ಹೆಚ್ಚುತ್ತಿದೆ. ಇದು ಸರ್ಕಾರವನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ. ಹೀಗಾಗಿ, ಈ ಕ್ರಮ ಕೈಗೊಳ್ಳಲಾಗಿದೆ.
ಜಿಮ್ಗಳೂ ಬಂದ್:
ರಾಜ್ಯಾದ್ಯಂತ ಜಿಮ್, ಸ್ವಿಮ್ಮಿಂಗ್ ಪೂಲ್ಗಳು ಬಂದ್, 6ರಿಂದ 9ನೇ ತರಗತಿಯವರೆಗೆ ಶಾಲೆ ಬಂದ್, ವಿದ್ಯಾಗಮ ಸೇರಿದಂತೆ ಎಲ್ಲಾ ಶೈಕ್ಷಣಿಕ ಚಟುವಟಿಕೆ ಬಂದ್ ಆಗಲಿದೆ. ಏಪ್ರಿಲ್ 20ರವರೆಗೆ ಪ್ರಸ್ತುತ ಮಾರ್ಗಸೂಚಿ ಅನ್ವಯವಾಗಲಿದೆ. ಉಳಿದಂತೆ ಇತರ ನಗರಗಳ ಪಬ್, ಬಾರ್‌ಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳು, ಜಾತ್ರೆ, ಮೇಳಗಳು, ಗುಂಪು ಸೇರುವುದು ನಿಷೇಧ ಮುಂದುವರಿಯಲಿದೆ. ಸಭೆ, ಸಮಾರಂಭ ಆಚರಣೆಗೆ ಮಾರ್ಚ್ 12ರ ಸುತ್ತೋಲೆ ಅನ್ವಯವಾಗಲಿದೆ.
ಇದನ್ನೂ ಓದಿ: Yuvarathnaa: ಧೂಳೆಬ್ಬಿಸಲು ಬಂದ ಯುವರತ್ನ! ಎಷ್ಟು ಚಿತ್ರಮಂದಿರಗಳಲ್ಲಿ ಪುನೀತ್ ರಾಜ್ಕುಮಾರ್ ಹವಾ?
Published On - 6:42 pm, Fri, 2 April 21