
ಹಲವಾರು ಹೊಸ ತಂಡಗಳು, ಹೊಸ ಹೊಸ ರೀತಿಯ ಕನ್ನಡ ಸಿನಿಮಾಗಳನ್ನು (Kannada Cinema) ನೀಡುತ್ತಿವೆ. ಇತ್ತೀಚೆಗೆ ಕೆಲ ಹೊಸ ತಂಡಗಳು ಕೆಲ ಭಿನ್ನ ಸಿನಿಮಾಗಳನ್ನು ನೀಡಿವೆ. ಕೆಲವು ಯಶಸ್ವಿ ಸಹ ಆಗಿವೆ. ಅದರಲ್ಲೂ ಹೊಸ ತಂಡಗಳು ಥ್ರಿಲ್ಲರ್ ರೀತಿಯ ಸಿನಿಮಾಗಳನ್ನು ಹೊತ್ತು ತರುವುದೇ ಹೆಚ್ಚು. ಇದೀಗ ಅದೇ ರೀತಿ ಹೊಸ ತಂಡವೊಂದು ‘ಗ್ರೀನ್’ ಹೆಸರಿನ ಬಲು ವಿಭಿನ್ನ ಕತೆಯುಳ್ಳ ಸಿನಿಮಾ ಅನ್ನು ತೆರೆಗೆ ತರಲು ಸಜ್ಜಾಗಿದ್ದು, ನಟ ಶಿವರಾಜ್ ಕುಮಾರ್ ಅವರು ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಬೆಂಬಲ ನೀಡಿದ್ದಾರೆ.
ರಾಜ್ ವಿಜಯ್ ಹಾಗೂ ಬಿ.ಎನ್. ಸ್ವಾಮಿ ನಿರ್ಮಾಣ ಮಾಡಿ ರಾಜ್ ವಿಜಯ್ ನಿರ್ದೇಶನ ಮಾಡಿರುವ ‘ಗ್ರೀನ್’ ಸಿನಿಮಾನಲ್ಲಿ ಬಾಲಾಜಿ ಮನೋಹರ್, ಗೋಪಾಲಕೃಷ್ಣ ದೇಶಪಾಂಡೆ, ಆರ್.ಜೆ.ವಿಕ್ಕಿ ಇನ್ನೂ ಕೆಲವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಗ್ರೀನ್’ ಸಿನಿಮಾದ ಟ್ರೇಲರ್ ಅನ್ನು ಶಿವರಾಜಕುಮಾರ್ ಇತ್ತೀಚೆಗಷ್ಟೆ ಬಿಡುಗಡೆ ಮಾಡಿ ಸಿನಿಮಾಕ್ಕೆ ಯಶಸ್ಸು ಸಿಗಲೆಂದು ಹಾರೈಸಿದರು.
ಟ್ರೈಲರ್ ಲಾಂಚ್ ಇವೆಂಟ್ನಲ್ಲಿ ಮಾತನಾಡಿದ, ನಿರ್ದೇಶಕ ಹಾಗೂ ನಿರ್ಮಾಪಕ ರಾಜ್ ವಿಜಯ್, ‘ಕನ್ನಡದ ಕೆಲವು ನಿರ್ದೇಶಕರ ಬಳಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಸ್ವತಂತ್ರ್ಯ ನಿರ್ದೇಶಕನಾಗಿ ಇದು ನನಗೆ ಮೊದಲ ಸಿನಿಮಾ. ‘ಗ್ರೀನ್’ ಕನ್ನಡದ ಅಪರೂಪ ಎನ್ನಬಹುದಾದ ಸೈಕಾಲಜಿಕಲ್ ಮೈಂಡ್ ಬೆಂಡಿಂಗ್ ಥ್ರಿಲ್ಲರ್ ಕತೆಯನ್ನು ಹೊಂದಿದೆ. ಕಾಡಿನಲ್ಲಿ ನಡೆಯುವ ಕಥೆಯನ್ನು ಒಳಗೊಂಡಿರುವ ಸಿನಿಮಾ ಆಗಿದೆ. ಊಟಿ ಬಳಿಯಲ್ಲಿ ಹೆಚ್ಚಿನ ಚಿತ್ರೀಕರಣ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ರಶ್ಮಿಕಾ ಮಂದಣ್ಣ ನಟನೆಯ ಹೊಸ ಹಿಂದಿ ಸಿನಿಮಾ ಟ್ರೈಲರ್ ಬಿಡುಗಡೆ
‘ಕೆಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ “ಗ್ರೀನ್” ಸಿನಿಮಾ ಪ್ರದರ್ಶನವಾಗಿದ್ದು 21 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ವಿದೇಶಿಗರು ಮೆಚ್ಚಿಕೊಂಡಿರುವ ನಮ್ಮ ನೆಲದ ಚಿತ್ರವನ್ನು ಸ್ವದೇಶಿಗರು, ಅದರಲ್ಲೂ ಕನ್ನಡಿಗರು ಮೆಚ್ಚಿಕೊಳ್ಳುವ ಭರವಸೆ ಇದೆ. ಅಕ್ಟೋಬರ್ 23ರಂದು ನಮ್ಮ ಚಿತ್ರ ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ’ ಎಂದಿದ್ದಾರೆ ನಿರ್ದೇಶಕ.
ಗುನಾದ್ಯ ಪ್ರೊಡಕ್ಷನ್ಸ್ ವತಿಯಿಂದ ನಿಶಾಂತ್ ನಮ್ಮ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ರವಿ ಫಿಲಂಸ್ ನ ಮನೋಜ್ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಿದ್ದಾರೆ. ಗುನಾದ್ಯ ಪ್ರೊಡಕ್ಷನ್ಸ್ನ ನಿಶಾಂತ್ ಮಾತನಾಡಿ, ‘ಸಿನಿಮಾ ನನಗೆ ಬಹಳ ಇಷ್ಟವಾಯ್ತು. ಅದರಲ್ಲೂ ಕೊನೆಯ ಹದಿನೈದು ನಿಮಿಷ ಯಾರೂ ಊಹಿಸದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಹಾಗಾಗಿ ನಾನು ಈ ಚಿತ್ರತಂಡದ ಜೊತೆ ನಿಂತಿದ್ದೇನೆ’ ಎಂದರು.
ಇದೀಗ ಬಿಡುಗಡೆ ಆಗಿರುವ ಸಿನಿಮಾದ ಟ್ರೈಲರ್ ಬಲು ಭಿನ್ನವಾಗಿದೆ. ಕಾಡಿನ ರಹಸ್ಯ, ವಿಜ್ಞಾನಿಯೊಬ್ಬ ರಾಕ್ಷಸನಾಗಿ ಬದಲಾಗುವ ಕತೆ, ರೂಪ ಬದಲಿಸುವ ಕಾಡು ಹೀಗೆ ಹಲವು ಕುತೂಹಲಕಾರಿ ಅಂಶಗಳು ಟ್ರೈಲರ್ನಲ್ಲಿವೆ. ಸಿನಿಮಾ ಅಕ್ಟೋಬರ್ 23ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:03 pm, Sat, 11 October 25