ದರ್ಶನ್ ಸ್ಥಿತಿ ನೆನೆದು ಕಣ್ಣೀರು ಹಾಕಿದ ನಟ ಹರೀಶ್ ರಾಯ್

Darshan Thoogudeepa: ‘ಕೆಜಿಎಫ್’ ಸೇರಿದಂತೆ ಕನ್ನಡದ ಹಲವಾರು ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ಹರೀಶ್ ರಾಯ್ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಂದರ್ಭದಲ್ಲಿ ಹಲವು ನಟರು ಅವರ ಬೆಂಬಲಕ್ಕೆ ನಿಂತಿದ್ದಾರೆ. ದರ್ಶನ್ ಅಭಿಮಾನಿಗಳು ಸಹ ಅಭಯ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ದರ್ಶನ್ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ.

ದರ್ಶನ್ ಸ್ಥಿತಿ ನೆನೆದು ಕಣ್ಣೀರು ಹಾಕಿದ ನಟ ಹರೀಶ್ ರಾಯ್
Dt Harish

Updated on: Aug 29, 2025 | 11:29 AM

‘ಕೆಜಿಎಫ್’ (KGF) ಸಿನಿಮಾ ಸೇರಿದಂತೆ ಕನ್ನಡದ ಹಲವಾರು ಸಿನಿಮಾಗಳಲ್ಲಿ ವಿಲನ್ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿರುವ ಹರೀಶ್ ರಾಯ್ ಇದೀಗ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಚಿತ್ರರಂಗದವರ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಕೆಲವು ನಟರುಗಳು ಹರೀಶ್ ಅವರ ಸಹಾಯಕ್ಕೆ ಮುಂದಾಗಿದ್ದಾರೆ. ನಟ ಯಶ್ ಈ ಹಿಂದೆಯೂ ಹರೀಶ್ ಅವರಿಗೆ ಸಹಾಯ ಮಾಡಿದ್ದರು. ದರ್ಶನ್ ಜೈಲಿನಲ್ಲಿದ್ದರೂ ಅವರ ಅಭಿಮಾನಿಗಳು ಹರೀಶ್ ಅವರ ಸಹಾಯಕ್ಕೆ ಮುಂದಾಗಿದ್ದಾರಂತೆ. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ಹರೀಶ್ ರಾಯ್, ದರ್ಶನ್​ಗೆ ಒದಗಿಬಂದಿರುವ ಸ್ಥಿತಿಯ ಬಗ್ಗೆ ನೋವಿನಿಂದ ಮಾತನಾಡಿದ್ದಾರೆ.

‘ದರ್ಶನ್ ಅಭಿಮಾನಿಗಳು ಫೋನ್ ಮಾಡುತ್ತಲೇ ಇರುತ್ತಾರೆ. ಅಣ್ಣ ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂದು ಧೈರ್ಯ ತುಂಬುತ್ತಾರೆ. ಆದರೆ ಆ ವ್ಯಕ್ತಿಗೆ (ದರ್ಶನ್) ಹೀಗೆ ಆಗಬಾರದಿತ್ತು. ನಾನೊಬ್ಬ ಸಣ್ಣ ನಟ. ಆ ವ್ಯಕ್ತಿ ದೊಡ್ಡ ಸ್ಟಾರ್ ಹೀರೋ, ಎಲ್ಲ ಸಕಲ ಸೌಕರ್ಯಗಳೂ ಇರುವ ನಟ. ಆ ವ್ಯಕ್ತಿಗೆ ಬಂದಿರುವ ಸ್ಥಿತಿ ಬಹಳ ಬೇಸರ. ಅವರು ಒಳ್ಳೆಯ ಮನುಷ್ಯ, ನಾಲ್ಕು ಜನರ ಕಷ್ಟ ಕೇಳಿ ಪರಿಹಾರ ಕೊಡುವ ಮನುಷ್ಯ’ ಎಂದು ಹರೀಶ್ ರಾಯ್ ಗುಣಗಾನ ಮಾಡಿದ್ದಾರೆ.

ಇದನ್ನೂ ಓದಿ:ದರ್ಶನ್ ಪತ್ನಿ, ಮಗನ ಬಗ್ಗೆ ಅಶ್ಲೀಲ ಪೋಸ್ಟ್: ಪೊಲೀಸರಿಗೆ ಮಹಿಳಾ ಆಯೋಗ ಪತ್ರ

‘ಎಷ್ಟೋ ಸರಿ ನಾವು ಸಹ ಅವರ ಬಳಿ ಹೋಗುತ್ತೇವೆ. ಏನೋ ಸಮಸ್ಯೆ ಹೇಳಿಕೊಂಡು ಹೋದಾಗ ತಪ್ಪಿದ್ದವರನ್ನು ಕರೆದು ಬುದ್ಧಿವಾದ ಹೇಳುತ್ತಾರೆ. ಸಹಾಯ ಮಾಡುವ ಗುಣ ಅವರಲ್ಲಿದೆ. ಹಾಗೆಯೇ ಇದನ್ನೂ ಮಾಡಲು ಹೋಗಿದ್ದಾರೆ ಆದರೆ ಜಾಗರೂಕತೆ ನಡೆದು ಹೋಗಿದೆ. ಅದರಿಂದ ಈ ಸ್ಥಿತಿಗೆ ಅವರು ಹೋಗಿದ್ದಾರೆ. ನನಗೇ ಒಂದು ದಿನ ಒಂದು ರೂಮಿನಲ್ಲಿ ಕೂತಿರಲು ಆಗುವುದಿಲ್ಲ ಆದರೆ ಅವರು ಎಷ್ಟು ದಿನ ಆ ಕೋಣೆಯಲ್ಲಿ ಕಳೆಯಬೇಕು’ ಎಂದು ಕಣ್ಣೀರು ಹಾಕಿದ್ದಾರೆ.

‘ಅವರು ಒಳ್ಳೇದು ಮಾಡಿರೋದು ತುಂಬಾ ಇದೆ. ಹೌದು, ಈಗ ಒಂದು ಅಜಾಗರೂಕತೆ ನಡೆದಿದೆ. ಆದರೆ ಅವರು ಮಾಡಿರುವ ಒಳ್ಳೆಯದನ್ನು ಪರಿಗಣಿಸಿ ಆ ದೇವರು ಅವರಿಗೆ ಒಳ್ಳೆಯದು ಮಾಡಬೇಕು. ನನಗೇ ಸಾಕಷ್ಟು ಸಹಾಯವನ್ನು ಅವರು ಮಾಡಿದ್ದಾರೆ. ದೇವರು ಅವರನ್ನು ಕಾಪಾಡಲಿ. ಅವರಿಂದ ಊಟ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ನನಗೆ ಅವರೆಂದರೆ ಬಹಳ ಪ್ರೀತಿ, ದೇವರಲ್ಲಿ ನಾನು ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ ಹರೀಶ್ ರಾಯ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ