ವಿಶೇಷವಾದ ಕಾನ್ಸೆಪ್ಟ್ ಹೊಂದಿರುವ ‘ಕಾಡುಮಳೆ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಯಿತು. ‘ಕಾಸ್ಮೋಸ್ ಮೂವೀಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಸಮರ್ಥ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿ ನಟ ಅರ್ಥ ಹಾಗೂ ನಟಿ ಸಂಗೀತಾ ಅವರು ಅಭಿನಯಿಸಿದ್ದಾರೆ. ಈ ಸಿನಿಮಾವನ್ನು ಬ್ರೇನ್ ಸ್ಕ್ಯಾಮಿಂಗ್ ಪ್ರಯತ್ನ ಎಂದು ಚಿತ್ರತಂಡ ಹೇಳಿಕೊಂಡಿದೆ. ಭ್ರಮೆ ಮತ್ತು ವಾಸ್ತವಕ್ಕೆ ಸಂಬಂಧಿಸಿದ ಕಥೆ ಈ ಸಿನಿಮಾದಲ್ಲಿ ಇದೆ. ಜನವರಿ 31ರಂದು ‘ಕಾಡುಮಳೆ’ ಸಿನಿಮಾ ಬಿಡುಗಡೆ ಆಗಲಿದೆ.
‘ಕೆಆರ್ಜಿ ಸ್ಟುಡಿಯೋಸ್’ ಮೂಲಕ ‘ಕಾಡುಮಳೆ’ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತಿದೆ. ಟ್ರೇಲರ್ ರಿಲೀಸ್ ವೇಳೆ ನಿರ್ದೇಶಕ ಸಮರ್ಥ ಅವರು ಮಾತನಾಡಿದರು. ‘ಸಿನಿಮಾ ಗೆಲ್ಲಲು ಒಂದು ಒಳ್ಳೆಯ ಕಥೆ ಇರಬೇಕು. ಅಂಥ ಕಥೆಯನ್ನು ಆಯ್ಕೆ ಮಾಡಿಕೊಂಡು ಈ ಸಿನಿಮಾ ಮಾಡಿದ್ದೇವೆ. ಪ್ರಕೃತಿಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಇಲ್ಲ. ಇವುಗಳಲ್ಲಿ ಒಂದು ಪ್ರಶ್ನೆಯೇ ಈ ಕಾಡುಮಳೆ. ಈ ಭೂಮಿ ಮೇಲೆ 7 ಖಂಡಗಳು, 7 ಸಮುದ್ರಗಳು, 7 ಸ್ವರಗಳು, 7 ವಾರಗಳು ಇವೆ. ಅದನ್ನೇ ಆಧಾರವಾಗಿ ಇಟ್ಟುಕೊಂಡು ಕಾಡುಮಳೆ ಸಿನಿಮಾ ಮಾಡಲಾಗಿದೆ. ಬ್ರೈನ್ ಸ್ಕ್ಯಾಮಿಂಗ್ ಎಂಬ ಟ್ಯಾಗ್ ಲೈನ್ ಇದೆ. ಭ್ರಮೆ ಹಾಗೂ ವಾಸ್ತವವನ್ನು ಅರ್ಥಮಾಡಿಕೊಳ್ಳೋಕೆ ಆಗದ ಸ್ಥಿತಿಯೇ ಬ್ರೈನ್ ಸ್ಕ್ಯಾಮಿಂಗ್’ ಎಂದು ನಿರ್ದೇಶಕರು ಹೇಳಿದ್ದಾರೆ.
ನಟ ಹರ್ಷನ್ (ಅರ್ಥ) ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅವರು ‘ಕಾಡುಮಳೆ’ ಸಿನಿಮಾದ ಮೂಲಕ ಹೀರೋ ಆಗಿ ಮಿಂಚಲಿದ್ದಾರೆ. ‘ಇದು ನನ್ನ ಮೊದಲ ಸಿನಿಮಾ. ಇದು ಕೇವಲ ಸಿನಿಮಾ ಅಲ್ಲ. ಇದೊಂದು ಅದ್ಭುತ ಅನುಭವ. ಅಧ್ಯಾತ್ಮ ಹಾಗೂ ವಿಜ್ಞಾನ ಎರಡರ ಬಗ್ಗೆಯೂ ತಿಳಿದವನ ಪಾತ್ರ ನನ್ನದು. ಇದಕ್ಕಾಗಿ ತುಂಬ ತಯಾರಿ ಮಾಡಿಕೊಂಡಿದ್ದೆ. ದಟ್ಟ ಕಾಡಿನಲ್ಲಿ ಚಿತ್ರೀಕರಣ ಮಾಡಿದ್ದು ದೊಡ್ಡ ಸವಾಲಿನಿಂದ ಕೂಡಿತ್ತು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ: ಕಿಚ್ಚ ಸುದೀಪ್, ಅನುಪಮಾ ಗೌಡ ಅತ್ಯುತ್ತಮ ನಟ-ನಟಿ
ರಾಜು ಎನ್.ಎಮ್. ಅವರ ‘ಕಾಡುಮಳೆ’ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ಮಹಾರಾಜ ಅವರು ಸಂಗೀತ ನೀಡಿದ್ದಾರೆ. ಜನವರಿ 31ಕ್ಕೆ ರಾಜ್ಯಾದ್ಯಂತ ಈ ಚಿತ್ರ ತೆರೆಕಾಣಲಿದೆ. ‘ಕನ್ನಡದಲ್ಲಿ ಬ್ರೈನ್ ಸ್ಕ್ಯಾಮಿಂಗ್ ರೀತಿಯ ಪ್ರಯತ್ನ ಇದೇ ಮೊದಲು. ನಾನು ಈ ಸಿನಿಮಾದ ಭಾಗವಾಗಿದ್ದೇನೆ ಎಂಬುದೇ ಖುಷಿ. ಜನರು ನಮ್ಮ ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ’ ಎಂದಿದ್ದಾರೆ ಹರ್ಷನ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.