Nithin Gopi: ಹೃದಯಾಘಾತದಿಂದ ನಟ ನಿತಿನ್​ ಗೋಪಿ ನಿಧನ; ವಿಷ್ಣುವರ್ಧನ್ ಜತೆ ‘ಹೆಲೋ ಡ್ಯಾಡಿ’ ಚಿತ್ರದಲ್ಲಿ ನಟಿಸಿದ್ದ ಕಲಾವಿದ

|

Updated on: Jun 02, 2023 | 8:16 PM

Nithin Gopi Death: ನಿತಿನ್ ಗೋಪಿ ಅವರ ನಿಧನಕ್ಕೆ ಅಭಿಮಾನಿಗಳು ಮತ್ತು ಆಪ್ತರು ಕಂಬನಿ ಮಿಡಿಯುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಗುತ್ತಿದೆ.

Nithin Gopi: ಹೃದಯಾಘಾತದಿಂದ ನಟ ನಿತಿನ್​ ಗೋಪಿ ನಿಧನ; ವಿಷ್ಣುವರ್ಧನ್ ಜತೆ ‘ಹೆಲೋ ಡ್ಯಾಡಿ’ ಚಿತ್ರದಲ್ಲಿ ನಟಿಸಿದ್ದ ಕಲಾವಿದ
ವಿಷ್ಣುವರ್ಧನ್ ಜತೆ ನಟಿಸಿದ್ದ ನಿತಿನ್​ ಗೋಪಿ
Follow us on

ಕನ್ನಡ ಚಿತ್ರರಂಗಕ್ಕೆ ಇದು ಬೇಸರದ ಸುದ್ದಿ. ಹಲವು ಸಿನಿಮಾಗಳಲ್ಲಿ ನಟಿಸಿದ್ದ ಕಲಾವಿದ ನಿತಿನ್​ ಗೋಪಿ (Nithin Gopi) ಅವರು ನಿಧನರಾಗಿದ್ದಾರೆ. ಹೃದಯಾಘಾತದಿಂದ (heart attack) ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಅಭಿನಯಿಸುವ ಮೂಲಕ ನಿತಿನ್ ಗೋಪಿ ಅವರು ಖ್ಯಾತಿ ಪಡೆದಿದ್ದರು. ಶುಕ್ರವಾರ (ಜೂನ್​ 2) ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು ಎಂಬುದು ನೋವಿನ ಸಂಗತಿ. ನಿತಿನ್ ಗೋಪಿಗೆ ಅವರಿಗೆ 39 ವರ್ಷ ವಯಸ್ಸಾಗಿತ್ತು. ಕೊಳಲು ವಾದಕ ಗೋಪಿ ಅವರ ಮಗನಾಗಿದ್ದ ನಿತಿನ್​ ಅವರು ವಿಷ್ಣುವರ್ಧನ್ (Vishnuvardhan) ಜೊತೆ ‘ಹೆಲೋ ಡ್ಯಾಡಿ’ ಚಿತ್ರದಲ್ಲಿ ನಟಿಸಿದ್ದರು.

ನಿತಿನ್ ಗೋಪಿ ಅವರ ನಿಧನಕ್ಕೆ ಅಭಿಮಾನಿಗಳು ಮತ್ತು ಆಪ್ತರು ಕಂಬನಿ ಮಿಡಿಯುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಗುತ್ತಿದೆ. ‘ಕೆರಳಿದ ಕೇಸರಿ’, ‘ಮುತ್ತಿನಂಥ ಹೆಂಡತಿ’, ‘ನಿಶ್ಯಬ್ಧ’, ‘ಚಿರಬಾಂಧವ್ಯ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಿತಿನ್​ ಗೋಪಿ ಅವರು ನಟಿಸಿದ್ದರು. ವಿಷ್ಣುವರ್ಧನ್ ಜೊತೆ ‘ಹೆಲೋ ಡ್ಯಾಡಿ’ ಚಿತ್ರದಲ್ಲಿ ಅವರು ಮಾಡಿದ್ದ ಪಾತ್ರ ಗಮನ ಸೆಳೆದಿತ್ತು.

ಹಲವು ಧಾರಾವಾಹಿಗಳಲ್ಲಿ ನಟಿಸುವುದರ ಜೊತೆಗೆ ನಿರ್ದೇಶನವನ್ನೂ ಅವರು ಮಾಡಿದ್ದರು. ನಿತಿನ್ ಅವರಿಗೆ ಮದುವೆ ಆಗಿರಲಿಲ್ಲ. ತಂದೆ ತಾಯಿಯ ಜೊತೆ ಅವರು ವಾಸವಾಗಿದ್ದರು.

ಇದನ್ನೂ ಓದಿ: ಕಿರುತೆರೆ ನಟ ನಿತೇಶ್ ಪಾಂಡೆ ನಿಧನ; ಹೃದಯಾಘಾತದಿಂದ ಕೊನೆಯುಸಿರೆಳೆದ ಕಲಾವಿದ

ಬೆಂಗಳೂರಿನ ಇಟ್ಟುಮಡುನಲ್ಲಿರುವ ಮನೆಯಲ್ಲಿ ನಿತಿನ್​ ವಾಸವಾಗಿದ್ದರು. ಶುಕ್ರವಾರ ನಸುಕಿನ 4 ಗಂಟೆ ಸುಮಾರಿಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಆಗ ಅವರಿಗೆ ಉಸಿರಾಟದ ತೊಂದರೆ ಕೂಡ ಹೆಚ್ಚಾಯಿತು. ಅವರೇ ಆಂಬ್ಯುಲೆನ್ಸ್​ಗೆ ಕರೆ ಮಾಡಿ ಲೊಕೇಷನ್​ ಶೇರ್​ ಮಾಡಿದ್ದರು. ಆದರೆ ಯಾವ ಪ್ರಯತ್ನವೂ ಫಲ ನೀಡಲಿಲ್ಲ. ವಿಲ್ಸನ್​ ಗಾರ್ಡನ್​ನ ಚಿತಾಗಾರದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನಟ, ನಿರ್ದೇಶಕ ಠಪೋರಿ ಸತ್ಯ ನಿಧನ, ಆಪ್ತರ ಕಂಬನಿ

ಬಾಲನಟ ಆಗಿದ್ದಾಗಿನಿಂದಲೂ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ನಿತಿನ್​ ಗೋಪಿ ಅವರು ಇತ್ತೀಚೆಗೆ ‘ಧ್ರುವ ನಕ್ಷತ್ರ’ ಸೀರಿಯಲ್​ ನಿರ್ದೇಶನ ಮಾಡಿದ್ದರು. ಹೊಸ ಧಾರಾವಾಹಿಯನ್ನು ಆರಂಭಿಸಬೇಕು ಎಂದುಕೊಂಡಿದ್ದರು. ಹಿಂದಿ ಕಿರುತೆರೆಯಲ್ಲೂ ಅವರು ಸಕ್ರಿಯರಾಗಿದ್ದರು. ‘ಕುಂಕುಮ ಭಾಗ್ಯ’, ‘ಕಂಕಣ’ ಮುಂತಾದ ಧಾರಾವಾಹಿಗಳಲ್ಲಿ ಅವರು ಕೆಲಸ ಮಾಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:38 pm, Fri, 2 June 23