ನಾರಾಯಣ ನೇತ್ರಾಲಯ ಮುಖ್ಯಸ್ಥ, ಖ್ಯಾತ ನೇತ್ರ ತಜ್ಞ ಡಾ. ಕೆ ಭುಜಂಗ ಶೆಟ್ಟಿ ಅವರನ್ನು ಕಳೆದುಕೊಂಡಿರುವುದು ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ನಷ್ಟ. ಶುಕ್ರವಾರ (ಮೇ 19) ಅವರು ನಿಧನ ಹೊಂದಿದರು. ಸಂಜೆ 6 ಗಂಟೆ ವೇಳೆಗೆ ಅವರಿಗೆ ತೀವ್ರ ಹೃದಯಾಘಾತವಾಯಿತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿ ಆಗಿಲ್ಲ. ಡಾ. ರಾಜ್ಕುಮಾರ್ (Rajkumar) ಕುಟುಂಬದ ಜೊತೆ ಅವರಿಗೆ ಒಳ್ಳೆಯ ಒಡನಾಟ ಇತ್ತು. ಅನೇಕರನ್ನು ನೇತ್ರದಾನಕ್ಕೆ ಪ್ರೇರೇಪಿಸಿದ ಖ್ಯಾತಿ ಭುಜಂಗ ಶೆಟ್ಟಿಗೆ (Dr. Bhujang Shetty) ಸಲ್ಲಿಕೆ ಆಗುತ್ತದೆ. ಡಾ. ರಾಜ್ಕುಮಾರ್ ನೇತ್ರದಾನ ಕೇಂದ್ರವನ್ನು ಅವರೇ ಸ್ಥಾಪಿಸಿದ್ದರು. ಪುನೀತ್ ನಿಧನ ಹೊಂದಿದಾಗ ಅವರ ಕಣ್ಣಿನಿಂದ ನಾಲ್ಕು ಜನಕ್ಕೆ ದೃಷ್ಟಿ ಕೊಡಿಸಿದ್ದರು. ರಾಜ್ಕುಮಾರ್ ಜೊತೆ ಒಡನಾಟ ಬೆಳೆದಿದ್ದು ಹೇಗೆ ಎನ್ನುವ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದರು.
‘ನಾನು ಶಾಲೆಗೆ ಹೋಗುವ ದಿನಗಳಲ್ಲೇ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ. ಅವರ ನಟನೆಯ ಹಲವಾರು ಚಿತ್ರಗಳನ್ನು ನೋಡಿದ್ದೆ. ಅವರನ್ನು ಯಾವತ್ತಾದರೂ ಭೇಟಿ ಆಗಬೇಕು ಅಂದುಕೊಂಡಿದ್ದೆ. ಆ ಆಸೆ ತುಂಬಾ ವರ್ಷಗಳ ಕಾಲ ಇಡೇರಲಿಲ್ಲ. ಕಣ್ಣಿನ ಸ್ಪೆಷಲಿಸ್ಟ್ ಆಗಿ ನಾನು ಶ್ರೀರಾಮ್ಪುರದ ಆಸ್ಪತ್ರೆಗೆ ಸೇರಿದೆ. ಆಗ ಅವರು ಕಣ್ಣಿನ ಟೆಸ್ಟ್ಗೆ ಬಂದಿದ್ದರು. ಒಂದು ಗಂಟೆ ಮಾತನಾಡಿದೆ. ರಾಜಾಜಿನಗರದ ನಾರಾಯಣ ನೇತ್ರಾಲಯವನ್ನು ಸ್ಥಾಪಿಸಿದಾಗ ರಾಜ್ಕುಮಾರ್ ಉದ್ಘಾಟನೆ ಮಾಡಬೇಕು ಎಂದುಕೊಂಡಿದ್ದೆ. ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಬಂದು 1993ರಲ್ಲಿ ಉದ್ಘಾಟನೆ ಮಾಡಿದ್ದರು. ತುಂಬು ಹೃದಯದಿಂದ ಆಶೀರ್ವಾದ ಮಾಡಿದರು’ ಎಂದು ಹಳೆ ಘಟನೆ ನೆನಪಿಸಿಕೊಂಡಿದ್ದರು ಡಾ. ಭುಜಂಗ ಶೆಟ್ಟಿ.
‘ರಾಜ್ಕುಮಾರ್ ಅವರಲ್ಲಿ ನೋಡಿದ ವಿಷಯ ಎಂದರೆ ಅವರು ಹಣಕ್ಕೆ ಬೆಲೆ ಕೊಡುತ್ತಾ ಇರಲಿಲ್ಲ. ಗುಣಕ್ಕೆ ಬೆಲೆ ಕೊಡುತ್ತಾ ಇದ್ದರು. ಹೂವು, ಹಣ್ಣು, ಹಸಿರು ನೋಡಿದರೆ ಅವರಿಗೆ ಖುಷಿ ಆಗುತ್ತಿತ್ತು. ಹಳ್ಳಿ ಜನರಿಗೆ ಒಳ್ಳೆಯದಾಯ್ತು ಎಂದರೆ ಖುಷಿ ಪಡುತ್ತಿದ್ದರು. ಒಮ್ಮೆ ಬೋರ್ವೆಲ್ ಹಾಕಿಸಿದ್ವಿ ತುಂಬಾ ಚೆನ್ನಾಗಿ ನೀರು ಬಂದಿದೆ ಎಂದು ರಾಜ್ಕುಮಾರ್ ಖುಷಿಪಟ್ಟಿದ್ದರು’ ಎಂದು ಆರಂಭದ ದಿನಗಳಲ್ಲಿ ನೆನಪಿಸಿಕೊಂಡಿದ್ದರು ಭುಜಂಗ ಶೆಟ್ಟಿ.
‘ನನ್ನನ್ನು ತಿರುಪತಿಗೆ ಕರೆದುಕೊಂಡು ಹೋಗಿದ್ದರು. ಅಲ್ಲೊಂದು ಹುಂಡಿ ಇದೆ. ಪಾರ್ವತಮ್ಮ ಅವರು ರಾಜ್ಕುಮಾರ್ಗೆ ಹಣ ಕೊಟ್ಟರು. ನಾನು ಅವರ ಜೊತೆಗೇ ಇದ್ದೆ. ಅವರು ನನ್ನ ಕೈಯಿಂದ ಹುಂಡಿಗೆ ಹಣ ಹಾಕಿಸಿದರು. ಏನಣ್ಣ ಹೀಗೆ ಮಾಡಿದ್ರಿ ಎಂದೆ. ಅವನಿಗೆ ಕೊಡೋ ಶಕ್ತಿ ನನಗೆಲ್ಲಿದೆ. ಅವನ ಎದುರು ನಾವೆಲ್ಲ ಇರುವೆಗಳು ಎಂದಿದ್ದರು’ ಎಂದು ರಾಜ್ಕುಮಾರ್ ಜೊತೆ ಕಳೆದ ಕ್ಷಣಗಳನ್ನು ಅವರು ನೆನಪಿಸಿಕೊಂಡಿದ್ದರು.
ಇದನ್ನೂ ಓದಿ: ಶಿವರಾಜ್ಕುಮಾರ್ ಅವರನ್ನು ಬಾಯ್ತುಂಬ ಹೊಗಳಿದ ಅನುಶ್ರೀ; ಶಿವಣ್ಣನ ರಿಯಾಕ್ಷನ್ ಹೇಗಿತ್ತು ನೋಡಿ
‘ರಾಜ್ಕುಮಾರ್ ತಂಗಿಯ ಕಣ್ಣಿಗೆ ಪೊರೆ ಬಂದಿತ್ತು. ನಾರಾಯಣ ನೇತ್ರಾಲಯ ಓಪನ್ ಆದಮೇಲೆ ಅಲ್ಲೇ ಬಂದು ತಂಗಿಗೆ ಆಪರೇಷನ್ ಮಾಡಿದ್ದರು. ಆಗ ನೇತ್ರದಾನದ ಬಗ್ಗೆ ಮಾತನಾಡಿದ್ದೆ. ಕಣ್ಣಿನ ದಾನದ ಮಹತ್ವದ ಬಗ್ಗೆ ಹೇಳಿದ್ದೆ. ಮಣ್ಣಾಗೋ ಬದಲು ನಾಲ್ಕು ಜನರ ದೃಷ್ಟಿಗೆ ಸಹಾಯ ಆಗುತ್ತದೆ ಎಂದೆ. ಆಗ ಅವರು ನನ್ನ ಕೈಯಿಂದ ಏನು ಆಗಬೇಕು ಎಂದು ಕೇಳಿದ್ದರು. ನಿಮ್ಮ ಹೆಸರನ್ನು ನೋಂದಣಿ ಮಾಡಿಸಿ ಎಂದು ಕೋರಿಕೊಂಡೆ. ಅವರು ಮಾಡಿಸಿದರು. ಹೀಗಾಗಿ 1994ರಲ್ಲಿ ಡಾ.ರಾಜ್ಕುಮಾರ್ ನೇತ್ರದಾನ ಕೇಂದ್ರ ಆರಂಭಿಸಿದೆವು’ ಎಂದು ಭುಜಂಗ ಶೆಟ್ಟಿ ಮಾಹಿತಿ ನೀಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ