ಅಜಯ್ ರಾವ್ ‘ಯುದ್ಧಕಾಂಡ’ ಸೇರಿದ ಖ್ಯಾತ ಗಾಯಕ

Ajay Rao: ರವಿಚಂದ್ರನ್ ನಟನೆಯ ‘ಯುದ್ಧಕಾಂಡ’ ಸಿನಿಮಾ ಯಾರಿಗೆ ಗೊತ್ತಿಲ್ಲ. ‘ಸೋಲೆ ಇಲ್ಲ’, ‘ಕುಡಿಯೋದೆ ನನ್ ಬಿಸಿನೆಸ್ಸು’ ಇನ್ನಿತರೆ ಸೂಪರ್ ಹಿಟ್ ಹಾಡುಗಳನ್ನು ಒಳಗೊಂಡ ಸಿನಿಮಾ ಅದು. ಇದೀಗ ಅದೇ ಹೆಸರಿನ ಸಿನಿಮಾ ಮತ್ತೆ ಬರುತ್ತಿದೆ. ಈ ಸಿನಿಮಾದಲ್ಲಿ ಅಜಯ್ ರಾವ್ ನಾಯಕ. ಮೊದಲ ಸಿನಿಮಾದಂತೆ ಹಾಡುಗಳನ್ನು ಬಂಪರ್ ಹಿಟ್ ಮಾಡಿಸುವ ಪ್ರಯತ್ನದಲ್ಲಿದೆ ಚಿತ್ರತಂಡ. ಹಾಗಾಗಿ ವಿಶೇಷ ಗಾಯಕರೊಬ್ಬರನ್ನು ಕನ್ನಡಕ್ಕೆ ಕರೆತಂದಿದ್ದಾರೆ.

ಅಜಯ್ ರಾವ್ ‘ಯುದ್ಧಕಾಂಡ’ ಸೇರಿದ ಖ್ಯಾತ ಗಾಯಕ
Yudha Kanda

Updated on: Feb 15, 2025 | 9:53 AM

ರವಿಚಂದ್ರನ್ ನಟನೆಯ ‘ಯುದ್ಧಕಾಂಡ’ ಸಿನಿಮಾ ಯಾರಿಗೆ ನೆನಪಿಲ್ಲ ಹೇಳಿ. ಆ ಸಿನಿಮಾದ ‘ಸೋಲೆ ಇಲ್ಲ’, ‘ಕುಡಿಯೋದೆ ನನ್ ಬಿಸಿನೆಸ್ಸು’ ಇನ್ನೂ ಕೆಲ ಹಾಡುಗಳು ಇಂದಿಗೂ ಜನಪ್ರಿಯ. ಅನ್ಯಾಯದ ವಿರುದ್ಧ ಹೋರಾಡುವ ವಕೀಲನ ಕತೆಯನ್ನು ಹೊಂದಿದ್ದ ಆ ಸಿನಿಮಾ, ತಾಯಿ ಸೆಂಟಿಮೆಂಟ್ ಅನ್ನೂ ಒಳಗೊಂಡಿತ್ತು. ಕೊಲೆಯೊಂದರ ಸುತ್ತ ನಡೆಯುವ ಕತೆ ಹೊಂದಿದ್ದ ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಮತ್ತೊಮ್ಮೆ ‘ಯುದ್ಧಕಾಂಡ’ ಸಿನಿಮಾ ಬರುತ್ತಿದೆ. ಈ ಬಾರಿಯೂ ಸಹ ವಕೀಲನ ಕತೆಯನ್ನೇ ಸಿನಿಮಾ ಒಳಗೊಂಡಿದೆ. ಸಿನಿಮಾದ ನಾಯಕ ಅಜಯ್ ರಾವ್.

ಅಜಯ್ ರಾವ್, ‘ಯುದ್ಧಕಾಂಡ’ ಸಿನಿಮಾದಲ್ಲಿ ನಟಿಸುತ್ತಿದ್ದು, ಇದೂ ಸಹ ಕೋರ್ಟ್ ಡ್ರಾಮಾ ಉಳ್ಳ ಕತೆಯಾಗಿದೆ. ಮೂಲ ‘ಯುದ್ಧಕಾಂಡ’ ಸಿನಿಮಾದಲ್ಲಿ ಇರುವಂತೆ ಈ ಸಿನಿಮಾದಲ್ಲಿಯೂ ಸಹ ಮದರ್ ಸೆಂಟಿಮೆಂಟ್ ಇದೆಯಂತೆ. ಆದರೆ ಅದರ ಜೊತೆಗೆ ಈ ಸಿನಿಮಾ ಹೆಣ್ಣುಮಕ್ಕಳ ರಕ್ಷಣೆ, ಅವರ ಹಕ್ಕುಗಳು, ಹೆಣ್ಣು ಮಕ್ಕಳನ್ನು ಸಮಾಜ ನೋಡುವ ಬಗೆಯ ಬಗ್ಗೆ ಚರ್ಚೆ ಮಾಡುತ್ತದೆಯಂತೆ. ಯುವತಿಯೊಬ್ಬಾಕೆಯ ಕೊಲೆ ಆ ನಂತರ ನಡೆಯುವ ಘಟನೆಗಳ ಕತೆಯನ್ನು ‘ಯುದ್ಧಕಾಂಡ’ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಕ್ಲಾಂತ’ ಟ್ರೈಲರ್ ಬಿಡುಗಡೆ ಮಾಡಿದ ಅಜಯ್ ರಾವ್, ಇದು ನಿಗೂಢ ಕತೆ

ಇನ್ನು ಇತ್ತೀಚೆಗಷ್ಟೆ ‘ಯುದ್ಧಕಾಂಡ’ ಸಿನಿಮಾ ತಂಡವನ್ನು ದಕ್ಷಿಣ ಭಾರತದ ಖ್ಯಾತ ಗಾಯಕರೊಬ್ಬರು ಸೇರಿಕೊಂಡರು. ಮೋಹನ್​ಲಾಲ್ ಪುತ್ರ ಪ್ರಣವ್ ಮೋಹನ್​ಲಾಲ್ ನಟನೆಯ ‘ಹೃದಯಂ’ ಸಿನಿಮಾದ ‘ದರ್ಶನಾ’ ಎಂಬ ಜನಪ್ರಿಯ ಹಾಡು ಹಾಡಿರುವ ಮಲಯಾಳಿ ಗಾಯಕ ಹೇಷಮ್ ಅದ್ಭುಲ್ ವಹಾಬ್ ‘ಯುದ್ಧಕಾಂಡ’ ಸಿನಿಮಾಕ್ಕೆ ಹಾಡೊಂದನ್ನು ಹಾಡಿದ್ದಾರೆ. ಈ ಹಾಡು, ಅಜಯ್ ರಾವ್ ಅವರ ಇಂಟ್ರೊಡಕ್ಷನ್ ಹಾಡಾಗಿರಲಿದೆ.

ಹೇಷಮ್ ಅದ್ಭುಲ್ ವಹಾಬ್ ಸ್ವತಃ ಸಂಗೀತ ನಿರ್ದೇಶಕರಾಗಿದ್ದು ಇದೀಗ ಅಜಯ್ ರಾವ್ ಅವರ ಸಿನಿಮಾಕ್ಕೆ ಧ್ವನಿ ನೀಡಿದ್ದಾರೆ. ಅಜಯ್ ರಾವ್ ಅವರ ‘ಯುದ್ಧಕಾಂಡ’ ಸಿನಿಮಾಕ್ಕೆ ಕೆಬಿ ಪ್ರವೀಣ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ಕಟ್ಟಿಂಗ್ ಶಾಪ್’ ಸಿನಿಮಾ ನಿರ್ದೇಶಿಸಿದ್ದ ಪ್ರವೀಣ್ ಭಟ್ ಅವರು ‘ಯುದ್ಧಕಾಂಡ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಯುದ್ಧಕಾಂಡ’ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸಿನಿಮಾ ಏಪ್ರಿಲ್​ನಲ್ಲಿ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ