AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಸಿನಿಮಾ ಮರು ಬಿಡುಗಡೆ, ಅಭಿಮಾನಿಗಳ ಸಂಭಾವ್ಯ ದುರ್ವರ್ತನೆಗೆ ಪೊಲೀಸರ ಬ್ರೇಕ್

Darshan Thoogudeepa: ದರ್ಶನ್ ತೂಗುದೀಪ ನಟನೆಯ ‘ನಮ್ಮ ಪ್ರೀತಿಯ ರಾಮು’ ಸಿನಿಮಾ ಇಂದು (ಫೆಬ್ರವರಿ 14) ಮರು ಬಿಡುಗಡೆ ಆಗುತ್ತಿದೆ. ಆದರೆ ಈ ಹಿಂದೆ ‘ಕರಿಯ’ ಸಿನಿಮಾದ ಮರು ಬಿಡುಗಡೆ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳು ತೋರಿದ್ದ ದುರ್ವರ್ತನೆ ಪುನರಾವರ್ತನೆ ಆಗಬಾರದೆಂಬ ಮುಂಜಾಗೃತೆಯಿಂದ ಪೊಲೀಸರು ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ದರ್ಶನ್ ಸಿನಿಮಾ ಮರು ಬಿಡುಗಡೆ, ಅಭಿಮಾನಿಗಳ ಸಂಭಾವ್ಯ ದುರ್ವರ್ತನೆಗೆ ಪೊಲೀಸರ ಬ್ರೇಕ್
Namma Preethiya Raamu
ಮಂಜುನಾಥ ಸಿ.
|

Updated on:Feb 14, 2025 | 1:56 PM

Share

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಹೋದ ಬಳಿಕ ಹಲವು ನಿರ್ಮಾಪಕರು, ದರ್ಶನ್​ರ ಹಳೆಯ ಸಿನಿಮಾಗಳನ್ನು ಒಂದೊಂದಾಗಿ ಮರು ಬಿಡುಗಡೆ ಮಾಡುತ್ತಿದ್ದಾರೆ. ಮರು ಬಿಡುಗಡೆಯಿಂದ ಕೆಲವರಿಗೆ ಲಾಭವಾದರೆ ಕೆಲವರು ನಷ್ಟ ಅನುಭವಿಸಿದ್ದಾರೆ ಸಹ. ‘ಶಾಸ್ತ್ರಿ’, ‘ಕರಿಯ’, ‘ಸಂಗೊಳ್ಳಿ ರಾಯಣ್ಣ’, ‘ನವಗ್ರಹ’ ಇನ್ನೂ ಕೆಲ ಸಿನಿಮಾಗಳ ಬಳಿಕ ಇದೀಗ ‘ನಮ್ಮ ಪ್ರೀತಿಯ ರಾಮು’ ಮರು ಬಿಡುಗಡೆ ಆಗಿದೆ.

ಇಂದು (ಫೆಬ್ರವರಿ 14) ದರ್ಶನ್​ರ ‘ನಮ್ಮ ಪ್ರೀತಿಯ ರಾಮು’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ದರ್ಶನ್ ಸಿನಿಮಾ ಮರು ಬಿಡುಗಡೆಯನ್ನು ಅಭಿಮಾನಿಗಳು ಸಹ ಸಜ್ಜಾಗಿದ್ದರು. ಆದರೆ, ದರ್ಶನ್ ಅಭಿಮಾನಿಗಳ ದುರ್ವರ್ತನೆಯ ಇತಿಹಾಸ ತಿಳಿದಿರುವ ಪೊಲೀಸರು ಅಭಿಮಾನಿಗಳ ಸಂಭಾವ್ಯ ದುರ್ವರ್ತನೆಗೆ ಆರಂಭದಲ್ಲಿಯೇ ಬ್ರೇಕ್ ಹಾಕಿದ್ದಾರೆ.

ಪ್ರಸನ್ನ ಚಿತ್ರಮಂದಿರದಲ್ಲಿ ‘ನಮ್ಮ ಪ್ರೀತಿಯ ರಾಮು’ ಸಿನಿಮಾದ ರೀ ರಿಲೀಸ್ ಅನ್ನು ಸಂಭ್ರಮಿಸಲು ಅಭಿಮಾನಿಗಳು ಸೇರಿದ್ದರು. ಆದರೆ 10:30ರ ಶೋ ಕಾರಣಾಂತರಗಳಿಂದ ರದ್ದಾಯ್ತು. ಇದೀಗ 1:30ಕ್ಕೆ ಶೋ ಪ್ರಾರಂಭ ಆಗಲಿದೆ. ಆದರೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸ್ಥಳದಲ್ಲಿ ಹಾಜರಿರುವ ಪೊಲೀಸರು ಈಗಾಗಲೇ ದರ್ಶನ್ ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಕೇವಲ ಸಿನಿಮಾ ವೀಕ್ಷಿಸಿ ಹೋಗುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:‘ನಮ್ಮ ಪ್ರೀತಿಯ ರಾಮು’ ಬಿಡುಗಡೆ ಆದಾಗ ಎರಡು ವಿಷಯಕ್ಕೆ ದರ್ಶನ್​ಗೆ ಬೇಜಾರಾಗಿತ್ತು

ದರ್ಶನ್ ಜೈಲಿನಲ್ಲಿದ್ದಾಗ ‘ಕರಿಯ’ ಸಿನಿಮಾ ಮರು ಬಿಡುಗಡೆ ಆಗಿತ್ತು. ಆ ಸಮಯದಲ್ಲಿ ದರ್ಶನ್ ಅಭಿಮಾನಿಗಳು ಅತಿರೇಕದ ವರ್ತನೆ ತೋರಿದ್ದರು. ಪೊಲೀಸರು ಹಾಗೂ ಮಾಧ್ಯಮದವರ ವಿರುದ್ಧ ಅವಾವ್ಯ ಶಬ್ದಗಳ ಬಳಕೆ ಮಾಡಿ ತಮ್ಮ ವ್ಯಕ್ತಿತ್ವ ಪ್ರದರ್ಶನ ಮಾಡಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ‘ಕರಿಯ’ ಸಿನಿಮಾದ ಶೋಗಳನ್ನು ಬಂದ್ ಮಾಡಿಸಿದ್ದರು. ಕೆಲ ದರ್ಶನ್ ಅಭಿಮಾನಿಗಳಿಗೆ ಲಾಠಿ ರುಚಿಯನ್ನೂ ತೋರಿಸಿದ್ದರು.

‘ನಮ್ಮ ಪ್ರೀತಿಯ ರಾಮು’ ಸಿನಿಮಾದ ರೀ ರಿಲೀಸ್ ಸಮಯದಲ್ಲಿಯೂ ದರ್ಶನ್ ಅಭಿಮಾನಿಗಳು ತಮ್ಮ ದುರ್ವರ್ತನೆಯನ್ನು ಮುಂದುವರೆಸಬಹುದೆಂಬ ಅನುಮಾನದಿಂದಾಗಿ ಪೊಲೀಸರು ಮೊದಲೇ ಖಡಕ್ ಎಚ್ಚರಿಕೆಯನ್ನು ದರ್ಶನ್ ಅಭಿಮಾನಿಗಳಿಗೆ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:19 pm, Fri, 14 February 25