ಮುಖ್ಯಮಂತ್ರಿಗಳ ಅಭಿಮಾನಿಯ ಸಿನಿಮಾ ‘ಕನಕರಾಜ’: ಅನೂಪ್‍ ರೇವಣ್ಣ ಹೀರೋ

‘ಕನಕರಾಜ’ ಸಿನಿಮಾದಲ್ಲಿ ಎಚ್.ಎಂ. ರೇವಣ್ಣ ಅವರ ಪುತ್ರ ಅನೂಪ್‍ ರೇವಣ್ಣ ಹೀರೋ ಆಗಿ ನಟಿಸುತ್ತಿದ್ದಾರೆ. ನಾಯಕಿಯಾಗಿ ನಿಮಿಷಾ ಅವರು ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ಸಮಾರಂಭ ನಡೆಯಿತು. ರಾಜಕೀಯದ ಕಥಾಹಂದರ ಈ ಸಿನಿಮಾದಲ್ಲಿ ಇರಲಿದೆ. ಮುಹೂರ್ತದ ವೇಳೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು.

ಮುಖ್ಯಮಂತ್ರಿಗಳ ಅಭಿಮಾನಿಯ ಸಿನಿಮಾ ‘ಕನಕರಾಜ’: ಅನೂಪ್‍ ರೇವಣ್ಣ ಹೀರೋ
Anup Revanna, Nimisha, Hm Revanna

Updated on: Oct 12, 2025 | 8:01 PM

ನಟ ಅನೂಪ್ ರೇವಣ್ಣ (Anup Revanna) ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ‘ಕನಕರಾಜ’ ಎಂದು ಶೀರ್ಷಿಕೆ ಇಡಲಾಗಿದೆ. ವಿ.ಎಂ.ರಾಜು ಹಾಗೂ ನೀಲ್ ಕೆಂಗಾಪುರ ಅವರು ಜಂಟಿಯಾಗಿ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ‘ಕನಕರಾಜ’ (Kanakaraja Movie) ಸಿನಿಮಾಗೆ ಮುಹೂರ್ತ ಮಾಡಲಾಯಿತು. ಹಲವು ಗಣ್ಯರು ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ‘ಸುಕೃತಿ ಚಿತ್ರಾಲಯ’ ಮೂಲಕ ಎಸ್.ಆರ್. ಸನತ್ ಕುಮಾರ್ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ನೀಡುತ್ತಿದ್ದಾರೆ ಎಂಬುದು ವಿಶೇಷ.

ಮಹಾಲಕ್ಷ್ಮಿ ಲೇಔಟ್​​ನ ಪ್ರಸನ್ನ ಶ್ರೀವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ‘ಕನಕರಾಜ’ ಸಿನಿಮಾದ ಮುಹೂರ್ತ ಸಮಾರಂಭ ನಡೆಯಿತು. ಸಿನಿಮಾದ ಮೊದಲ ದೃಶ್ಯಕ್ಕೆ ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರು ಆರಂಭ ಫಲಕ ತೋರಿದರು. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ಕ್ಯಾಮೆರಾ ಚಾಲನೆ ಮಾಡಿದರು.

ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ವಿಶ್ವನಾಥ್ ಸೇರಿದಂತೆ ಹಲವು ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದರು. ‘ಸುಕೃತಿ ಚಿತ್ರಾಲಯ’ ಮೂಲಕ ನಿರ್ಮಾಣ ಆಗುತ್ತಿರುವ 6ನೇ ಸಿನಿಮಾ ಇದು. ಆ ಬಗ್ಗೆ ನಿರ್ಮಾಪಕ ಸನತ್ ಕುಮಾರ್ ಅವರು ಮಾಹಿತಿ ನೀಡಿದರು.

‘ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ನಮ್ಮ ಸಂಸ್ಥೆಯಿಂದ ಈಗ ಕನಕರಾಜ ಚಿತ್ರ ನಿರ್ಮಾಣ ಆಗುತ್ತಿದೆ. ಈ ಸಿನಿಮಾದಲ್ಲೂ ಯುವಜನತೆಗೆ ಉತ್ತಮ ಸಂದೇಶ ಇರಲಿದೆ. ನಮ್ಮ ರಾಜ್ಯದ ವಿವಿಧ ಊರುಗಳಲ್ಲಿ, ಪಕ್ಕದ ರಾಜ್ಯಗಳಲ್ಲಿ ಮತ್ತು ವಿದೇಶದಲ್ಲೂ ಈ ಸಿನಿಮಾಗೆ ಚಿತ್ರೀಕರಣ ನಡೆಯಲಿದೆ’ ಎಂದು ನಿರ್ಮಾಪಕ ಸನತ್ ಕುಮಾರ್ ಹೇಳಿದರು.

ಇದನ್ನೂ ಓದಿ: ಅನೀಶ್ ತೇಜೇಶ್ವರ್ ನಟನೆ, ನಿರ್ದೇಶನದಲ್ಲಿ ‘ಲವ್ ಒಟಿಪಿ’: ಹೇಗಿದೆ ನೋಡಿ ಟ್ರೇಲರ್

ಈ ಸಿನಿಮಾದಲ್ಲಿ ಕಥಾನಾಯಕನು ಮುಖ್ಯಮಂತ್ರಿಗಳ ಅಭಿಮಾನಿ ಆಗಿರುತ್ತಾನೆ. ಹಾಗಾಗಿ ‘ಫ್ಯಾನ್ ಆಫ್ ಸಿಎಂ’ ಎಂಬ ಟ್ಯಾಗ್​ಲೈನ್ ಈ ಸಿನಿಮಾದ ಶೀರ್ಷಿಕೆಗೆ ಇದೆ. ರಮೇಶ್ ಕೊಯಿರ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಲಕ್ಷ್ಮಣ್ ರೆಡ್ಡಿ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. 4 ಹಾಡುಗಳು, 4 ಸಾಹಸ ಸನ್ನಿವೇಶಗಳು ಇರುತ್ತದೆ ಎಂದು ನಿರ್ದೇಶಕರಲ್ಲೊಬ್ಬರಾದ ವಿ.ಎಂ.ರಾಜು ಹೇಳಿದರು. ನಿಮಿಷಾ ಅವರು ಈ ಚಿತ್ರಕ್ಕೆ ನಾಯಕಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.